ಮನೆ ಮುಂದೆ ಕೆಂಪು ಮತ್ತು ಹಳದಿ ಬಣ್ಣದ ರಂಗೋಲಿ ಬಿಡಿಸಿ ಎಂದ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ | ವಿಶೇಷ ಏನು ಗೊತ್ತಾ?!

KARNATAKA NEWS/ ONLINE / Malenadu today/ Oct 31, 2023 SHIVAMOGGA NEWS

SHIVAMOGGA | ಕರ್ನಾಟಕ ರಾಜ್ಯೋತ್ಸವ ವಿಶಿಷ್ಟ ಆಚರಣೆಗೆ ಶಿವಮೊಗ್ಗ ಜಿಲ್ಲಾಡಳಿತ ಮುಂದಾಗಿದೆ. ಈ ಸಂಬಂಧ ನಿನ್ನೆ ಸಭೆ ನಡೆಸಿದ ಜಿಲ್ಲಾಧಿಕಾರಿ ಡಾ.ಆರ್​ ಸೆಲ್ವಮಣಿ ಹಲವು ತೀರ್ಮಾನಗಳನ್ನು ಕೈಗೊಂಡಿದ್ದಾರೆ. ಅಲ್ಲದೆ ಇದೇ ವೇಳೆ ನವೆಂಬರ್ 01 ರಂದು ಜಿಲ್ಲೆಯಾದ್ಯಂತ ಎಲ್ಲಾ ಮನೆಗಳ ಮುಂದೆ ಕೆಂಪು ಮತ್ತು ಹಳದಿ ಬಣ್ಣದ ರಂಗೋಲಿಯೊಂದಿಗೆ ಕರ್ನಾಟಕ ಸಂಭ್ರಮ-50 ‘ಹೆಸರಾಯಿತು ಕರ್ನಾಟಕ-ಉಸಿರಾಗಲಿ ಕನ್ನಡ’ ಎಂಬ ಘೋಷವಾಕ್ಯದ ರಂಗೋಲಿ ಬಿಡಿಸುವಂತೆ ಮನವಿ ಮಾಡಿದ್ದಾರೆ 

ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಈ ವರ್ಷದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ವಿಶೇಷ ರೀತಿಯಲ್ಲಿ ಆಚರಿಸಲು ಉದ್ದೇಶಿಸಲಾಗಿದ್ದು ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಕಾರ್ಯಕ್ರಮದ ಸ್ವರೂಪವನ್ನು ಸಿದ್ದಪಡಿಸಲಾಗಿದೆ.

READ : ಶಿವಮೊಗ್ಗದಲ್ಲಿ ಹೆಚ್ಚಿದ ಡೆಂಗ್ಯು, ಚಿಕನ್​ ಗುನ್ಯಾ! ಸಾರ್ವಜನಿಕರಿಕೆ ಜಿಲ್ಲಾಡಳಿತ ನೀಡಿದ ಎಚ್ಚರಿಕೆಗಳೇನು? ಇಲ್ಲಿದೆ ವಿವರ

ನವೆಂಬರ್ 01 ರ ಬೆಳಿಗ್ಗೆ 9 ಗಂಟೆಗೆ ಆಕಾಶವಾಣಿಯಲ್ಲಿ ನಾಡಗೀತೆ ಪ್ರಸಾರ ಮಾಡಲಾಗುವುದು. ಆ ಸಮಯದಲ್ಲಿ ಜಿಲ್ಲೆಯ ಸಮಸ್ತ ನಾಗರೀಕರು ಎದ್ದು ನಿಂತು ಗೌರವ ಸಲ್ಲಿಸಲು ತೀರ್ಮಾನಿಸಲಾಗಿದೆ

ನವೆಂಬರ್ 01 ರ ಸಂಜೆ 5 ಗಂಟೆಗೆ ಜಿಲ್ಲೆಯ ಎಲ್ಲಾ ಗ್ರಾಮಗಳ ಮೈದಾನಗಳಲ್ಲಿ ಕೆಂಪು ಮತ್ತು ಹಳದಿ ಬಣ್ಣದ ಗಾಳಿ ಪಟಗಳನ್ನು ಆಕಾಶಕ್ಕೆ ಹಾರಿ ಬಿಡುವ ಮೂಲಕ ಸುವರ್ಣ ಸಂಭ್ರಮ ಗಾಳಿ ಪಟ ಉತ್ಸವಕ್ಕೆ ಸಿದ್ದತೆ ನಡೆಸಲಾಗಿದೆ.  

ನವೆಂಬರ್ 01 ರಂದು ಸಂಜೆ 7 ಗಂಟೆಗೆ ಜಿಲ್ಲೆಯ ಎಲ್ಲಾ ಮನೆ-ಮನೆಗಳ ಮುಂದೆ, ಕಚೇರಿಗಳ ಮುಂದೆ ಹಾಗೂ ಅಂಗಡಿ-ಮಳಿಗೆಗಳ ಮುಂದೆ ಹಣತೆ(ದೀಪ) ಹಚ್ಚುವ ಮೂಲಕ ಕನ್ನಡ ಜ್ಯೋತಿ ಬೆಳಗಿಸಲು ಸಿದ್ದತೆ ನಡೆಸಲಾಗಿದೆ  

ಜಿಲ್ಲೆಯ ಸಮಸ್ತ ನಾಗರೀಕರು ಹಾಗೂ ಕನ್ನಡ ಪರ ಸಂಘಟನೆಗಳು, ವಿವಿಧ ಸಂಘ ಸಂಸ್ಥೆಗಳು ನಾಡು-ನುಡಿಯ ಅಭಿಮಾನದೊಂದಿಗೆ ಪ್ರತಿಯೊಬ್ಬರು ಈ ಎಲ್ಲ ಅಂಶಗಳನ್ನು ಅಳವಡಿಸಿಕೊಂಡು ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ತಿಳಿಸಿದ್ದಾರೆ 


Leave a Comment