ಹೊಸನಗರಕ್ಕಾಗಿ ಹೋರಾಟ…ಪಾದಯಾತ್ರೆಯ ಬಗ್ಗೆ ಕಲಗೋಡು ರತ್ನಾಕರ್ ಮಾಹಿತಿ

ರಾಜ್ಯಕ್ಕೆ ಐದು ಆಣೆಕಟ್ಟುಗಳ ನಿರ್ಮಾಣದ ಮೂಲಕ ಬೆಳಕನ್ನು ನೀಡಿ ಇಂದಿಗೂ ಕತ್ತಲೆಯಲ್ಲಿ ಬದುಕನ್ನು ಸಾಗಿಸುತ್ತಿರುವ ಹೊಸನಗರದ ಸಮಸ್ತ ನಾಗರಿಕರಿಗೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರದ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಪಾದಯಾತ್ರೆ ಮತ್ತು ಬೃಹತ್ ಸಾರ್ವಜನಿಕ ಸಭೆಯಲ್ಲಿ ಹೊಸನಗರದ ಸಮಸ್ತ ನಾಗರಿಕರು ಹಾಗೂ ರಾಜ್ಯದ ವಿವಿಧಡೆ ನೆಲೆಸಿರುವ ಹೊಸನಗರದ ಮೂಲ ನಿವಾಸಿಗಳು ಜಾತ್ಯತೀತವಾಗಿ ಮತ್ತು ಪಕ್ಷಾತೀತವಾಗಿ ಭಾಗವಹಿಸುವಂತೆ ಕಲಗೋಡು ರತ್ನಾಕರ ಅವರು ವಿನಂತಿಸಿದರು.

Malenadu Today Shivamogga

ಇಂದು ರಿಪ್ಪನ್ ಪೇಟೆಯಲ್ಲಿ ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನಾ ಹೋರಾಟ ಸಮಿತಿ ವತಿಯಿಂದ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಕಲಗೋಡು ರತ್ನಾಕರ್ ಅವರು ಏಪ್ರಿಲ್ 5 ಮತ್ತು 6 ರಂದು ಹೊಸನಗರ ಕ್ಷೇತ್ರವನ್ನು ಮತ್ತೆ ವಿಧಾನಸಭಾ ಕ್ಷೇತ್ರವನ್ನಾಗಿ ಮರಳಿ ಪಡೆಯುವ ಪ್ರಯತ್ನವಾಗಿ ಮೂಲೆಗದ್ದೆ ಅಭಿನವ ಚನ್ನಬಸವ ಶ್ರೀಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ. ಮಾಜಿ ಶಾಸಕರಾದ ಬಿ ಸ್ವಾಮಿ ರಾವ್ ರವರು ನಮ್ಮೊಂದಿಗೆ ಹೆಜ್ಜೆ ಹಾಕಲಿದ್ದಾರೆ. ಏಪ್ರಿಲ್ 6ರಂದು ಸಂಜೆ ನಾಲ್ಕು ಗಂಟೆಗೆ ರಿಪ್ಪನ್ ಪೇಟೆ ಹೈಸ್ಕೂಲ್ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು ಈ ಒಂದು ಹೋರಾಟದ ಯಶಸ್ವಿಯಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಕರೆ ನೀಡಿದರು.

ಹೊಸನಗರ ಭೌಗೋಳಿಕವಾಗಿ ಅತ್ಯಂತ ವಿಸ್ತಾರದಿಂದ ಕೂಡಿದ್ದು ಎರಡು ಹೋಬಳಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಹಾಗೂ ಎರಡು ಹೋಬಳಿ ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಹಂಚಿ ಹೋಗಿದ್ದು, ಹೊಸನಗರ ತಾಲೂಕು ಅಭಿವೃದ್ಧಿಗೆ ತೀರಾ ಹಿನ್ನಡೆಯಾಗಿದೆ. ಇಂದಿಗೂ ಕೂಡ ನಾಡಿಗೆ ಬೆಳಕು ಕೊಟ್ಟಂತ ಜನ ಕತ್ತಲೆಯಲ್ಲಿ ಜೀವನ ನಡೆಸುತ್ತಿರುವುದು ಅತ್ಯಂತ ಬೇಸರದ ಸಂಗತಿ. ಸಾಮಾಜಿಕವಾಗಿ, ಮೂಲಭೂತವಾಗಿ ಅಭಿವೃದ್ಧಿ ಹೊಂದಬೇಕಾದರೆ ವಿಧಾನಸಭಾ ಕ್ಷೇತ್ರ ವಿಶೇಷವಾಗಿ ಹೊಸನಗರಕ್ಕೆ ತೀರಾ ಅವಶ್ಯಕತೆ ಇದೆ.

Malenadu Today Shivamogga

ಈ ಒಂದು ಹೋರಾಟ ಯಾವುದೇ ಪಕ್ಷ ಸಂಘಟನೆಗೆ ಸೀಮಿತವಾಗಿರದೆ ಎಲ್ಲಾ ಪಕ್ಷದ ಮುಖಂಡರು, ಹಾಲಿ ಶಾಸಕರು, ಲೋಕಸಭಾ ಸದಸ್ಯರು, ಮಾಜಿ ಶಾಸಕರು, ಎಲ್ಲಾ ಧರ್ಮ ಗುರುಗಳು
ಜಾತಿಭೇದ, ಪಕ್ಷಬೇಧ, ಮರೆತು ಹೋರಾಟಕ್ಕೆ ಬೆಂಬಲ ನೀಡಿದ್ದು ಎಲ್ಲರೂ ಹೋರಾಟದಲ್ಲಿ ಜೊತೆಯಾಗಿದ್ದು ಈ ಒಂದು ಹೋರಾಟದ ಮೂಲಕ 2028ಕ್ಕೆ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮರಳಿ ಪಡೆಯುವ ಪ್ರಯತ್ನ ಸಫಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.