JDS Protests ಶಿವಮೊಗ್ಗ: ತಾಲೂಕು ಆಸ್ಪತ್ರೆಗಳಿಲ್ಲದ ಶಿವಮೊಗ್ಗ ಗ್ರಾಮಾಂತರ ವ್ಯಾಪ್ತಿಯ ಆಯನೂರು, ಹೊಳಲೂರು ಹಾಗೂ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮುದಾಯ ಆರೋಗ್ಯ ಕೇಂದ್ರಗಳಿಗೆ ತಜ್ಞ ವೈದ್ಯರನ್ನು ತಕ್ಷಣವೇ ಮರು ನಿಯೋಜಿಸುವಂತೆ ಆಗ್ರಹಿಸಿ ಶಿವಮೊಗ್ಗ ಗ್ರಾಮಾಂತರ ಜಾತ್ಯತೀತ ಜನತಾದಳ ಇಂದು ಬೃಹತ್ ಪ್ರತಿಭಟನೆ ನಡೆಸಿತು. ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಸರ್ಕಾರದ ಗಮನ ಸೆಳೆಯಲಾಯಿತು.
ಶಿವಮೊಗ್ಗ: ಏಪ್ರಿಲ್ 4 ರಂದು ನಗರದ ಹಲವೆಡೆ ವಿದ್ಯುತ್ ವ್ಯತ್ಯಯ
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರವು ಭೌಗೋಳಿಕವಾಗಿ ಅತ್ಯಂತ ವಿಸ್ತಾರವಾಗಿದ್ದು, ಇಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕ್ಷೇತ್ರದಲ್ಲಿ ಪ್ರತ್ಯೇಕ ತಾಲೂಕು ಆಸ್ಪತ್ರೆ ಇಲ್ಲದಿರುವುದರಿಂದ ಜನರು ಸಣ್ಣಪುಟ್ಟ ಚಿಕಿತ್ಸೆಗೂ ಪರದಾಡುವಂತಾಗಿದೆ. ಗರ್ಭಿಣಿಯರು, ಮಕ್ಕಳು ಮತ್ತು ಹಿರಿಯ ನಾಗರಿಕರು ತಜ್ಞ ವೈದ್ಯರ ಅಭಾವದಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸರ್ಕಾರದ ಭರವಸೆ ಉಲ್ಲಂಘನೆ
ಟ್ರೈಯಾಡ್ ಯೋಜನೆ ಅಡಿ ಆಯನೂರು, ಹೊಳಲೂರು ಹಾಗೂ ಹೊಳೆಹೊನ್ನೂರು ಕೇಂದ್ರಗಳಲ್ಲಿದ್ದ ತಜ್ಞ ವೈದ್ಯರನ್ನು ವರ್ಗಾವಣೆ ಮಾಡಲಾಗಿದ್ದು, ಆ ಸ್ಥಾನಗಳಿಗೆ ಪರ್ಯಾಯ ವೈದ್ಯರನ್ನು ನೇಮಿಸಿಲ್ಲ. ಈ ಹಿಂದೆ ಸದನದಲ್ಲಿ ಆರೋಗ್ಯ ಸಚಿವರು, “ತಾಲೂಕು ಆಸ್ಪತ್ರೆ ಇಲ್ಲದ ಕಡೆ ತಜ್ಞ ವೈದ್ಯರನ್ನು ವರ್ಗಾವಣೆ ಮಾಡುವುದಿಲ್ಲ” ಎಂದು ಭರವಸೆ ನೀಡಿದ್ದರು. ಆದರೆ ಈಗಿನ ಸರ್ಕಾರದ ನಡೆ ಆ ಭರವಸೆಗೆ ವಿರುದ್ಧವಾಗಿದೆ ಎಂದು ಜೆಡಿಎಸ್ ನಾಯಕರು ದೂರಿದರು. ಎಚ್ಚರಿಕೆ
ಸಾರ್ವಜನಿಕ ಹಿತದೃಷ್ಟಿಯಿಂದ ಕೂಡಲೇ ತಜ್ಞ ವೈದ್ಯರ ಮರು ವರ್ಗಾವಣೆ ಆದೇಶ ಹೊರಡಿಸಬೇಕು. ಇಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿದೆ. ಪ್ರತಿಭಟನೆಯಲ್ಲಿ ಶಾಸಕಿ ಶಾರದಾ ಪುರ್ಯನಾಯ್ಕ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ವಿ. ಪ್ರಸನ್ನ ಕುಮಾರ್, ಜಿಲ್ಲಾಧ್ಯಕ್ಷ ರಾಮಕೃಷ್ಣ, ತಾಲೂಕು ಅಧ್ಯಕ್ಷ ಕೆಸೆಟ್ಟಿ ಸತೀಶ್ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.
JDS Protests Rural Health Center Vacancies


