ಶಿವಮೊಗ್ಗ: ನೀವು ಹೊಸದಾಗಿ ಪ್ಯಾನ್ ಕಾರ್ಡ್ (PAN Card) ಪಡೆಯಲು ಯೋಜಿಸುತ್ತಿದ್ದೀರಾ ಅಥವಾ ಹಳೆಯ ಕಾರ್ಡ್ ಅಪ್‌ಡೇಟ್ ಮಾಡಬೇಕಿದೆಯೇ? ಹಾಗಿದ್ದಲ್ಲಿ ಈ ಕೂಡಲೇ ಎಚ್ಚೆತ್ತುಕೊಳ್ಳಿ. ಏಪ್ರಿಲ್ 1, 2026 ರಿಂದ ಪ್ಯಾನ್ ಕಾರ್ಡ್ ವಿತರಣಾ ನಿಯಮಗಳಲ್ಲಿ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆಗಳನ್ನು ಜಾರಿಗೆ ತರುತ್ತಿದೆ. ಸಾಮಾನ್ಯ ಸೇವಾ ಕೇಂದ್ರಗಳ (CSC) ಮೂಲಕ ಲಭ್ಯವಾಗಿರುವ ಮಾಹಿತಿಯಂತೆ, ಇನ್ನು ಮುಂದೆ ಕೇವಲ ಆಧಾರ್ ಕಾರ್ಡ್ ಸಲ್ಲಿಸುವ ಮೂಲಕ ಪ್ಯಾನ್ ಕಾರ್ಡ್ ಪಡೆಯುವುದು ಅಸಾಧ್ಯವಾಗಲಿದೆ .
ದಾಖಲೆಗಳ ಸಲ್ಲಿಕೆಯಲ್ಲಿ ಕಟ್ಟುನಿಟ್ಟಿನ ಕ್ರಮ
ಪ್ರಸ್ತುತ ಜಾರಿಯಲ್ಲಿರುವ ನಿಯಮದಂತೆ ಮಾರ್ಚ್ 31, 2026 ರವರೆಗೆ ಮಾತ್ರ ನೀವು ಆಧಾರ್ ಕಾರ್ಡ್ ಬಳಸಿ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. ಆದರೆ, ಏಪ್ರಿಲ್ ಆರಂಭದಿಂದ ಹೊಸ ಪ್ಯಾನ್ ಕಾರ್ಡ್ ಬಯಸುವವರು ಅಥವಾ ತಿದ್ದುಪಡಿ ಮಾಡುವವರು ಆಧಾರ್ ಜೊತೆಗೆ ಇತರ ಪೂರಕ ದಾಖಲೆಗಳನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ. ವಿಶೇಷವಾಗಿ ಜನ್ಮ ದಿನಾಂಕದ ಪುರಾವೆಗಾಗಿ ಹೆಚ್ಚುವರಿ ದಾಖಲೆಗಳನ್ನು ಒದಗಿಸುವುದು ಇನ್ನು ಮುಂದೆ ಅನಿವಾರ್ಯವಾಗಲಿದೆ
ಆಧಾರ್‌ಗೆ ತಕ್ಕಂತೆ ಇರಬೇಕು ಹೆಸರು
CSC ಇ-ಆಡಳಿತ ಸೇವೆಗಳ ಅಧಿಕೃತ ಪ್ರಕಟಣೆಯ ಪ್ರಕಾರ, ಪ್ಯಾನ್ ಕಾರ್ಡ್‌ನಲ್ಲಿರುವ ಹೆಸರು ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ಹೆಸರಿಗೆ ನಿಖರವಾಗಿ ಹೊಂದಿಕೆಯಾಗಬೇಕು. ಒಂದು ವೇಳೆ ಹೆಸರಿನಲ್ಲಿ ವ್ಯತ್ಯಾಸವಿದ್ದರೆ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಅಥವಾ ಪ್ಯಾನ್ ಕಾರ್ಡ್‌ನಿಂದ ಆ ಹೆಸರನ್ನು ಕೈಬಿಡಲಾಗುವುದು. ಹೀಗಾಗಿ, ಅರ್ಜಿದಾರರು ಮೊದಲು ತಮ್ಮ ಆಧಾರ್ ವಿವರಗಳನ್ನು ನವೀಕರಿಸಿಕೊಳ್ಳುವುದು ಒಳಿತು.
ಹಳೆಯ ಅರ್ಜಿ ನಮೂನೆಗಳಿಗೆ ಬ್ರೇಕ್
ಆದಾಯ ತೆರಿಗೆ ಇಲಾಖೆಯು ಹೊಸ ಕರಡು ನಿಯಮಗಳನ್ನು ಸಿದ್ಧಪಡಿಸಿದ್ದು, ಇದರ ಭಾಗವಾಗಿ ಪ್ಯಾನ್ ಕಾರ್ಡ್ ಅರ್ಜಿಯ ಹಳೆಯ ಫಾರ್ಮ್‌ಗಳನ್ನು ರದ್ದುಗೊಳಿಸಲಾಗುತ್ತಿದೆ. ಏಪ್ರಿಲ್ 1 ರಿಂದ ಹೊಸ ವಿನ್ಯಾಸದ ಅರ್ಜಿ ನಮೂನೆಗಳು ಜಾರಿಗೆ ಬರಲಿದ್ದು, ಹಳೆಯ ಫಾರ್ಮ್‌ಗಳ ಮೂಲಕ ಸಲ್ಲಿಸುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಈ ಬದಲಾವಣೆಯು ತೆರಿಗೆ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕಗೊಳಿಸುವ ಉದ್ದೇಶ ಹೊಂದಿದೆ.
ವಹಿವಾಟು ಮಿತಿಯಲ್ಲಿ ಬದಲಾವಣೆ: ಯಾರಿಗೆ ಲಾಭ?
ಹೊಸ ಆದಾಯ ತೆರಿಗೆ ನಿಯಮಗಳು ವಹಿವಾಟಿನ ಮಿತಿಯಲ್ಲಿ ಕೆಲವು ಸಡಿಲಿಕೆಗಳನ್ನು ತಂದಿವೆ.
ಸ್ಥಿರ ಆಸ್ತಿ: ಈ ಹಿಂದೆ 10 ಲಕ್ಷ ರೂ. ಮೇಲ್ಪಟ್ಟ ಆಸ್ತಿ ಖರೀದಿ/ಮಾರಾಟಕ್ಕೆ ಪ್ಯಾನ್ ಕಡ್ಡಾಯವಿತ್ತು, ಈಗ ಈ ಮಿತಿಯನ್ನು 20 ಲಕ್ಷ ರೂ.ಗೆ ಏರಿಸಲಾಗಿದೆ.
ವಾಹನ ಖರೀದಿ: 5 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ವಾಹನ ಖರೀದಿಗೆ ಮಾತ್ರ ಪ್ಯಾನ್ ಕಾರ್ಡ್ ಉಲ್ಲೇಖಿಸುವುದು ಕಡ್ಡಾಯ.
ಹೋಟೆಲ್ ಬಿಲ್: ಹೋಟೆಲ್ ಪಾವತಿಗಳ ಮಿತಿಯನ್ನು 1 ಲಕ್ಷ ರೂ.ವರೆಗೆ ಹೆಚ್ಚಿಸುವ ಮೂಲಕ ಸಾಮಾನ್ಯ ಜನರಿಗೆ ಸ್ವಲ್ಪ ನಿರಾಳತೆ ನೀಡಲಾಗಿದೆ.
New PAN Card Rules from April 1, 2026

