ಶಿವಮೊಗ್ಗ: ಸೊರಬ ತಾಲ್ಲೂಕಿನ ಗ್ರಾಮೀಣ ಭಾಗದ ಜನರ ದಶಕಗಳ ಬೇಡಿಕೆಯಾಗಿದ್ದ ಸಾರಿಗೆ ಸೌಲಭ್ಯಕ್ಕೆ ಕೊನೆಗೂ ಕಾಲ ಕೂಡಿಬಂದಿದ್ದು, ಈ ಕುರಿತು ಕಾಂಗ್ರೆಸ್ ಸಮಿತಿ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಆರ್. ಶ್ರೀಧರ್ ಹುಲ್ತಿಕೊಪ್ಪ ಅವರು ಸಂತಸ ಹಂಚಿಕೊಂಡಿದ್ದಾರೆ.

ಶಿವಮೊಗ್ಗ: ಸಿಲಿಂಡರ್ ಸ್ಪೋಟ, ಲಕ್ಷಾಂತರ ರೂಪಾಯಿ ವಸ್ತುಗಳು ಹಾನಿ
ಕಳೆದ ಹಲವು ಸಮಯದಿಂದ ಈ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಸಾರ್ವಜನಿಕರು ಸೂಕ್ತ ಬಸ್ ವ್ಯವಸ್ಥೆ ಇಲ್ಲದೆ ನಿತ್ಯವೂ ಖಾಸಗಿ ಮತ್ತು ಗೂಡ್ಸ್ ವಾಹನಗಳನ್ನು ಅವಲಂಬಿಸುವ ಅನಿವಾರ್ಯತೆ ಇತ್ತು. ಈ ಸಮಸ್ಯೆಯನ್ನು ಮನಗಂಡು ಕಳೆದ ಮೇ ತಿಂಗಳಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ನೀಡಿದ್ದ ಮನವಿಗೆ ಪೂರಕ ಸ್ಪಂದನೆ ದೊರೆತಿದ್ದು, ಸರ್ಕಾರವು ಸಾರಿಗೆ ವ್ಯವಸ್ಥೆ ಕಲ್ಪಿಸಲು ಅಧಿಕೃತ ಕ್ರಮಗಳನ್ನು ಕೈಗೊಂಡಿದೆ. ಈ ಬದಲಾವಣೆಗೆ ಶಾಲಾ ಶಿಕ್ಷಣ ಸಚಿವ ಹಾಗೂ ಸೊರಬ ಕ್ಷೇತ್ರದ ಶಾಸಕರಾದ ಮಧು ಬಂಗಾರಪ್ಪ ಅವರ ವಿಶೇಷ ಶ್ರಮವೂ ಅಡಗಿದೆ ಎಂದು ಶ್ರೀಧರ್ ಅವರು ತಿಳಿಸಿದ್ದಾರೆ.
ಸದ್ಯ ನಿಗದಿಯಾಗಿರುವ ಮೊದಲ ಮಾರ್ಗದ ಅನ್ವಯ, ಸಾಗರ ಡಿಪೋದಿಂದ ಬೆಳಿಗ್ಗೆ 7.30ಕ್ಕೆ ಹೊರಡುವ ಬಸ್ ಶಿರಸಿ, ಬನವಾಸಿ, ಸಂಪಗೋಡು, ಗುಡವಿ, ಬಳ್ಳಿಬೈಲು ಮತ್ತು ಜಂಬೆಹಳ್ಳಿ ಮಾರ್ಗವಾಗಿ ಸೊರಬ ಮೂಲಕ ಶಿವಮೊಗ್ಗವನ್ನು ತಲುಪಲಿದೆ. ಅದೇ ರೀತಿ ಸಂಜೆ 4 ಗಂಟೆಗೆ ಶಿವಮೊಗ್ಗದಿಂದ ಹೊರಟು ಇದೇ ಹಾದಿಯಲ್ಲಿ ಮರಳಿ ಬನವಾಸಿಗೆ ತಲುಪುವ ಮೂಲಕ ಈ ಭಾಗದ ನೂರಾರು ಗ್ರಾಮಸ್ಥರಿಗೆ ಅನುಕೂಲವಾಗಲಿದೆ.
ಮತ್ತೊಂದು ಮಾರ್ಗದ ಯೋಜನೆಯಂತೆ ಶಿರಸಿ ಡಿಪೋದಿಂದ ಬೆಳಿಗ್ಗೆ 7.45ಕ್ಕೆ ಸೊರಬದಿಂದ ಹೊರಡುವ ಬಸ್ ಕಡಸೂರು ಮತ್ತು ಅಂದವಳ್ಳಿ ಗ್ರಾಮಗಳ ಮೂಲಕ ಸಿದ್ದಾಪುರವನ್ನು ಸೇರಲಿದೆ. ಇದೇ ಬಸ್ ಸಂಜೆ 4.45ಕ್ಕೆ ಸಿದ್ದಾಪುರದಿಂದ ಮರಳಿ ಅಂದವಳ್ಳಿ ಮಾರ್ಗವಾಗಿ ಸೊರಬಕ್ಕೆ ಬರಲಿದೆ. ಸದ್ಯ ಶಿರಸಿ ಡಿಪೋದಿಂದ ನೂತನ ಬಸ್ಸುಗಳ ಆಗಮನಕ್ಕಾಗಿ ಕಾಯಲಾಗುತ್ತಿದ್ದು, ಸಾರಿಗೆ ಸಂಸ್ಥೆಯ ಮಾಹಿತಿ ಅನ್ವಯ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರು ಶೀಘ್ರದಲ್ಲೇ ಈ ಹೊಸ ಸಾರಿಗೆ ಸೇವೆಗೆ ಹಸಿರು ನಿಶಾನೆ ತೋರಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
New KSRTC Bus Routes for Soraba
