Naveen Sajju ಶಿವಮೊಗ್ಗ: ಕನ್ನಡ ಚಿತ್ರರಂಗದ ಜನಪ್ರಿಯ ಗಾಯಕ ಹಾಗೂ ಸಂಗೀತ ನಿರ್ದೇಶಕ, ಬಿಗ್‌ಬಾಸ್ ಖ್ಯಾತಿಯ ನವೀನ್ ಸಜ್ಜು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಲೋ ನವೀನ ಚಲನಚಿತ್ರವು ಮೇ 15 ರಂದು ತೆರೆಕಂಡಿದ್ದು, ಕರ್ನಾಟಕದಾದ್ಯಂತ ಪ್ರೇಕ್ಷಕರಿಂದ ಅದ್ಭುತವಾದ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
ಶಿವಮೊಗ್ಗ ಗ್ರಾಮೀಣ ಭಾಗದಲ್ಲಿ ಈ ದಿನ ಕರೆಂಟ್ ಇರಲ್ಲ
ಸಿನಿಮಾದ ಪ್ರಚಾರ ಕಾರ್ಯಗಳ ಭಾಗವಾಗಿ ಇಂದು ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ಚಿತ್ರತಂಡವು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿತು. ಈ ವೇಳೆ ಮಾತನಾಡಿದ ನಾಯಕ ನಟ ನವೀನ್ ಸಜ್ಜು, ಮೇ 15 ರಂದು ಬಿಡುಗಡೆಯಾಗಿರುವ ನಮ್ಮ ಚಿತ್ರಕ್ಕೆ ರಾಜ್ಯದ ಮೂಲೆ ಮೂಲೆಗಳಿಂದಲೂ ಪ್ರೇಕ್ಷಕರು ಉತ್ತಮ ಬೆಂಬಲ ನೀಡುತ್ತಿದ್ದಾರೆ. ಇದೇ ಖುಷಿಯಲ್ಲಿ ಪ್ರಚಾರ ಕಾರ್ಯಗಳಿಗಾಗಿ ನಮ್ಮ ತಂಡ ಶಿವಮೊಗ್ಗಕ್ಕೆ ಆಗಮಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದ ಸೊಗಡನ್ನು ಅತ್ಯಂತ ಮನರಂಜನಾತ್ಮಕ ಶೈಲಿಯಲ್ಲಿ ಬೆಳ್ಳಿತೆರೆಯ ಮೇಲೆ ತಂದಿರುವ ಲೋ ನವೀನ ಸಿನಿಮಾ ಸದ್ಯ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹಳ್ಳಿಯ ನೈಜ ಜೀವನ, ಗಾಢವಾದ ಸ್ನೇಹ, ಪ್ರೀತಿ-ಪ್ರೇಮ, ಕೌಟುಂಬಿಕ ಮೌಲ್ಯಗಳು ಹಾಗೂ ಇಂದಿನ ಗ್ರಾಮೀಣ ಯುವಕರ ಜೀವನಶೈಲಿಯನ್ನು ಅತ್ಯಂತ ಆಪ್ತವಾಗಿ ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.
ಧನುರ್ಧಾರಿ ಪವನ್ ನಿರ್ದೇಶನದ ಈ ಚಿತ್ರವನ್ನು ಕೀರ್ತಿಸ್ವಾಮಿ, ಬೆನ್ ಚಿಕ್ಕಸ್ವಾಮಿ ಹಾಗೂ ಎನ್.ಎಸ್ ಸ್ಟುಡಿಯೋಸ್ ಜಂಟಿಯಾಗಿ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ನಟನೆಯ ಜೊತೆಗೆ ನವೀನ್ ಸಜ್ಜು ಅವರೇ ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ನವೀನ್ ಸಜ್ಜು ಮತ್ತು ಸುನೀಲ್ ಮೈಸೂರು ಜಂಟಿಯಾಗಿ ಚಿತ್ರದ ಕಥೆಯನ್ನು ಸಿದ್ಧಪಡಿಸಿದ್ದು, ಸಿನಿಮಾದಲ್ಲಿರುವ ಒಟ್ಟು 8 ಹಾಡುಗಳು ಅಧ್ಬುತವಾಗಿ ಮೂಡಿ ಬಂದಿದೆ. ನವೀನ್ ಸಜ್ಜು ಅವರಿಗೆ ಜೋಡಿಯಾಗಿ ವರ್ಷ ಗಿರಿಧರ್ ನಟಿಸಿದ್ದು, ಉಳಿದಂತೆ ರೇಷ್ಮಾ ವಿ. ಗೌಡ, ಪ್ರಕಾಶ್ ತುಮ್ಮಿನಾಡು, ಅಪೂರ್ವಶ್ರೀ, ಅಭಿಜಿತ್ ಗೌಡ, ಮಲ್ಲರಾಜು ಮಾರಸಿಂಗನಹಳ್ಳಿ ಸೇರಿದಂತೆ ಹಲವು ಗ್ರಾಮೀಣ ಪ್ರತಿಭೆಗಳು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.
ಚಿತ್ರದ ಟೈಟಲ್ ಹಿನ್ನೆಲೆಯ ಬಗ್ಗೆ ಮಾತನಾಡಿದ ನವೀನ್, ಸಿನಿಮಾಗೆ ಸೂಕ್ತ ಹೆಸರಿಗಾಗಿ ಹುಡುಕಾಟ ನಡೆಸುತ್ತಿದ್ದಾಗ ಮೊದಲು ಭಲೆ ಭಾಸ್ಕರ ಎಂಬ ಹೆಸರು ನನ್ನ ತಲೆಯಲ್ಲಿತ್ತು. ಈ ಬಗ್ಗೆ ನನ್ನ ಸ್ನೇಹಿತರ ಬಳಿ ಚರ್ಚಿಸಿದಾಗ ಅವರು ಲೋ ನವೀನ ಏನೋ ಇದು ಎಂದು ಕೇಳಿದರು. ಆಗ ನನಗೆ ಲೋ ನವೀನ ಎಂಬ ಹೆಸರೇ ಕಥೆಗೆ ಅತ್ಯಂತ ಸೂಕ್ತ ಹಾಗೂ ಆಕರ್ಷಕವಾಗಿದೆ ಎನಿಸಿತು. ಇದು ಇಡೀ ಕುಟುಂಬ ಒಟ್ಟಾಗಿ ಕುಳಿತು ಆನಂದಿಸಬಹುದಾದಂತಹ ಚಲನಚಿತ್ರವಾಗಿದ್ದು, ಚಿತ್ರಕ್ಕೆ ಲೋ ನವೀನ ಎಂದು ಹೆಸರಿಡಲು ಇರುವ ನಿಜವಾದ ಕಾರಣ ಏನೆಂಬುದು ಸಿನಿಮಾ ನೋಡಿದಾಗ ಪ್ರೇಕ್ಷಕರಿಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ ಎಂದರು.
