ಶಿವಮೊಗ್ಗ-ಬೆಂಗಳೂರು ವಿಮಾನ ಸ್ಥಗಿತ : ಸಚಿವರಿಗೆ ಬಿ.ವೈ. ರಾಘವೇಂದ್ರ ಪತ್ರ

ಶಿವಮೊಗ್ಗ / ಶಿವಮೊಗ್ಗ ಮತ್ತು ಬೆಂಗಳೂರು ನಡುವಿನ ಇಂಡಿಗೋ ವಿಮಾನಯಾನ ಸೇವೆ (ಶಿವಮೊಗ್ಗ-ಬೆಂಗಳೂರು ವಿಮಾನ ಸ್ಥಗಿತ) ಮೇ 1 ರಿಂದ ಸ್ಥಗಿತಗೊಳ್ಳಲಿದೆ. ಈ ಹಿನ್ನೆಲೆ, ಈ ಸೇವೆಯಲ್ಲಿ ಯಾವುದೇ ಅಡಚಣೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಒತ್ತಾಯಿಸಿದ್ದಾರೆ.

ಈ ಕುರಿತು ಸಂಸದರ ಕಚೇರಿಯಿಂದ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ. ಅದರ ಪ್ರಕಾರ, ಏಪ್ರಿಲ್ 5 ರಂದೇ ಈ ಕುರಿತಾಗಿ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದೆ. ಮೇ ತಿಂಗಳಿನಿಂದ ವಿಮಾನ ಸೇವೆ ಸ್ಥಗಿತಗೊಳ್ಳುತ್ತಿರುವುದು ಮಲೆನಾಡು ಭಾಗ ಹಾಗೂ ನೆರೆಯ ಜಿಲ್ಲೆಗಳ ದೈನಂದಿನ ಪ್ರಯಾಣಿಕರಿಗೆ ತೀವ್ರ ಆತಂಕ ತಂದೊಡ್ಡಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಶಿವಮೊಗ್ಗ-ಬೆಂಗಳೂರು ವಿಮಾನ ಸ್ಥಗಿತ, ಏನಿದೆ ಸಂಸದರ ಪತ್ರದಲ್ಲಿ?

ಸುಮಾರು 450 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಶಿವಮೊಗ್ಗ ವಿಮಾನ ನಿಲ್ದಾಣವು ಆಗಸ್ಟ್ 31, 2023 ರಂದು ಕಾರ್ಯಾಚರಣೆ ಆರಂಭಿಸಿತ್ತು. ಅಂದಿನಿಂದ ಈವರೆಗೆ 2400 ವಿಮಾನಗಳ ಹಾರಾಟವನ್ನು ಯಶಸ್ವಿಯಾಗಿ ನಿರ್ವಹಿಸಿದ್ದು, 1 ಲಕ್ಷಕ್ಕೂ ಅಧಿಕ ಪ್ರಯಾಣಿಕರಿಗೆ ಸೇವೆ ಒದಗಿಸಿದೆ. ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮವು (ಕೆಎಸ್‌ಐಐಡಿಸಿ) ಏಪ್ರಿಲ್ 2023 ರಲ್ಲಿ ಇಂಡಿಗೋ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು, ಪ್ರತಿ ರೌಂಡ್ ಟ್ರಿಪ್‌ಗೆ 78,000 ರೂಪಾಯಿ (ಪ್ರತಿ ಸೀಟಿಗೆ 500 ರೂಪಾಯಿ) ಆರ್ಥಿಕ ನೆರವು ಒದಗಿಸಿತ್ತು. ಈ ಒಪ್ಪಂದವು ಆಗಸ್ಟ್ 2025 ಕ್ಕೆ ಮುಕ್ತಾಯಗೊಂಡರೂ, ಮಾರ್ಗದ ಮೇಲಿನ ಭರವಸೆಯಿಂದಾಗಿ ವಿಮಾನಯಾನ ಸಂಸ್ಥೆಯು ತನ್ನ ಕಾರ್ಯಾಚರಣೆಯನ್ನು ಮುಂದುವರಿಸಿತ್ತು.

ಆದರೆ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಪರಿಷ್ಕರಿಸಿದ ವಿಮಾನಯಾನ ಕರ್ತವ್ಯದ ಸಮಯದ ಮಿತಿಗಳ (ಎಫ್‌ಡಿಟಿಎಲ್) ನಿಯಮಗಳಿಂದಾಗಿ ಉಂಟಾಗಿರುವ ಕಾರ್ಯಾಚರಣೆಯ ಒತ್ತಡವನ್ನು ಮುಂದಿಟ್ಟುಕೊಂಡು, ಮಾರ್ಚ್ 2026 ರಲ್ಲಿ ಇಂಡಿಗೋ ಸಂಸ್ಥೆಯು ಬೆಂಗಳೂರು-ಶಿವಮೊಗ್ಗ ಸೇವೆಯನ್ನು ಮೇ ತಿಂಗಳಿನಿಂದ ಸ್ಥಗಿತಗೊಳಿಸುವ ನಿರ್ಧಾರವನ್ನು ಪ್ರಕಟಿಸಿದೆ. ಹೊಸ ನಿಯಮಾವಳಿಗಳ ಪ್ರಕಾರ ವಿಮಾನಗಳನ್ನು ನಿರ್ವಹಿಸಲು ಹೆಚ್ಚಿನ ಪೈಲಟ್‌ಗಳ ಅಗತ್ಯವಿರುವುದರಿಂದ, ಹಲವು ಅಲ್ಪಾವಧಿಯ ಪ್ರಾದೇಶಿಕ ಮಾರ್ಗಗಳನ್ನು ಕಡಿತಗೊಳಿಸುವ ಅನಿವಾರ್ಯತೆ ಸಂಸ್ಥೆಗೆ ಎದುರಾಗಿದೆ. ಇದರ ಜೊತೆಗೆ ಆರ್ಥಿಕ ಬೆಂಬಲಕ್ಕಾಗಿ ಕೆಎಸ್‌ಐಐಡಿಸಿ ಯೊಂದಿಗೆ ನವೀಕೃತ ಒಪ್ಪಂದವಿಲ್ಲದಿರುವುದು ಕೂಡ ಈ ಮಾರ್ಗದ ವಿಮಾನಯಾನ ಕಡಿತಕ್ಕೆ ಪ್ರಮುಖ ಕಾರಣವಾಗಿದೆ ಎಂದು ಸಂಸದರು ವಿವರಿಸಿದ್ದಾರೆ.

ವಿಮಾನ ಸೇವೆ ಸ್ಥಗಿತಗೊಳಿಸುವುದರಿಂದ 10,000 ಕ್ಕೂ ಹೆಚ್ಚು ಕೈಗಾರಿಕಾ ಘಟಕಗಳನ್ನು ಹೊಂದಿರುವ ಈ ಭಾಗದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಕೃಷಿ, ಆರೋಗ್ಯ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಸಂಸದರು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಒಪ್ಪಂದವನ್ನು ನವೀಕರಿಸುವವರೆಗೆ, ಮೇ 2026 ರ ಬಳಿಕವೂ ಸೇವೆ ಸ್ಥಗಿತಗೊಳಿಸುವುದನ್ನು ಮುಂದೂಡುವ ಕುರಿತು ಇಂಡಿಗೋ ಸಂಸ್ಥೆಯೊಂದಿಗೆ ಸಮಾಲೋಚನೆ ನಡೆಸುವಂತೆ ಸಚಿವರನ್ನು ಒತ್ತಾಯಿಸಿದ್ದಾರೆ. ಕನಿಷ್ಠ ಎರಡು ವರ್ಷಗಳ ಅವಧಿಗೆ ಆರ್ಥಿಕ ಬೆಂಬಲದೊಂದಿಗೆ ಒಪ್ಪಂದವನ್ನು ನವೀಕರಿಸಬೇಕು ಹಾಗೂ ಪರ್ಯಾಯ ಕ್ರಮವಾಗಿ ವಾಯುಯಾನ ಸಂಪರ್ಕದಲ್ಲಿ ವ್ಯತ್ಯಯವಾಗದಂತೆ ಇತರೆ ಆಪರೇಟರ್‌ಗಳನ್ನು ಸಂಪರ್ಕಿಸುವಂತೆಯೂ ಸಂಸದರು ಸಲಹೆ ನೀಡಿದ್ದಾರೆ.

 MP BY Raghavendra Writes to Minister Over Shivamogga Flight Suspension ಶಿವಮೊಗ್ಗ-ಬೆಂಗಳೂರು ವಿಮಾನ ಸ್ಥಗಿತ: ಸಚಿವರಿಗೆ ಬಿ.ವೈ. ರಾಘವೇಂದ್ರ ಪತ್ರ
MP BY Raghavendra Writes to Minister Over Shivamogga Flight Suspension ಶಿವಮೊಗ್ಗ-ಬೆಂಗಳೂರು ವಿಮಾನ ಸ್ಥಗಿತ: ಸಚಿವರಿಗೆ ಬಿ.ವೈ. ರಾಘವೇಂದ್ರ ಪತ್ರ
ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw