ಎಲ್‌ಎಲ್‌ಆರ್‌ ಹೊಸ ನಿಯಮ:‌  ಅರ್ಜಿ ಸಲ್ಲಿಸಿದ ಬಳಿಕ ಈ ನಿಯಮ ಪಾಲಿಸದಿದ್ರೆ ನಿಮ್ಮ ಅರ್ಜಿ ಆಟೋಮ್ಯಾಟಿಕ್ ರದ್ದು!

prathapa thirthahalli
Prathapa thirthahalli - content producer

ಶಿವಮೊಗ್ಗ: ವಾಹನ ಚಾಲನಾ ಕಲಿಕಾ ಪರವಾನಗಿ ಅಥವಾ ಎಲ್‌ಎಲ್‌ಆರ್‌ ಪಡೆಯಲು ಸಾರಿಗೆ ಇಲಾಖೆಗೆ ಅರ್ಜಿ ಸಲ್ಲಿಸುವ ಸಾರ್ವಜನಿಕರಿಗೆ ಇಲಾಖೆಯು ಕಠಿಣ ನಿಯಮವೊಂದನ್ನು ಜಾರಿಗೊಳಿಸಲು ಮುಂದಾಗಿದ್ದು, ಇನ್ನು ಮುಂದೆ ಅರ್ಜಿ ಸಲ್ಲಿಸಿದ ಕೇವಲ 7 ದಿನಗಳ ಒಳಗಾಗಿ ಅಭ್ಯರ್ಥಿಗಳು ಆನ್‌ಲೈನ್‌ ಕಲಿಕಾ ಪರೀಕ್ಷೆಯನ್ನು ಎದುರಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ನಿಗದಿತ ಅವಧಿಯಲ್ಲಿ ಪರೀಕ್ಷೆ ತೆಗೆದುಕೊಳ್ಳದಿದ್ದರೆ ಅಂತಹ ಅರ್ಜಿಗಳು ತಾನಾಗಿಯೇ ರದ್ದಾಗಲಿವೆ ಎಂದು ಸಾರಿಗೆ ಇಲಾಖೆಯ ಮೂಲಗಳು ತಿಳಿಸಿವೆ.

LLR New Rules in Karnataka 
LLR New Rules in Karnataka

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬೈಕ್​ : ಓರ್ವ ಸಾವು

ಮುಂಬರುವ ಜನವರಿ 1 ರಿಂದಲೇ ಈ ನೂತನ ನಿಯಮವು ರಾಜ್ಯಾದ್ಯಂತ ಅನುಷ್ಠಾನಕ್ಕೆ ಬರಲಿದೆ. ಚಾಲನಾ ಪರವಾನಗಿ ಪಡೆಯಲು ಮುಂದಾಗುವ ವ್ಯಕ್ತಿಗಳು ವಾಹನ ಚಾಲನೆಗೆ ಅಗತ್ಯವಿರುವ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಮತ್ತು ಸದೃಢತೆಯನ್ನು ಹೊಂದಿದ್ದಾರೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವ ಉದ್ದೇಶದಿಂದ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಯಶಸ್ವಿಯಾಗಿ ತೇರ್ಗಡೆಯಾದವರಿಗೆ ಮತ್ತು ಯಾವುದೇ ಆರೋಗ್ಯದ ಸಮಸ್ಯೆಗಳಿಲ್ಲದ ಅಭ್ಯರ್ಥಿಗಳಿಗೆ ಮಾತ್ರ ವಾಹನ ಚಾಲನಾ ಕಲಿಕಾ ಪರವಾನಗಿಯನ್ನು ಇಲಾಖೆಯು ವಿತರಿಸಲಿದ್ದು, ಅರ್ಹರಲ್ಲದವರನ್ನು ಆರಂಭಿಕ ಹಂತದಲ್ಲಿಯೇ ತಡೆಯಲು ಇದು ಸಹಕಾರಿಯಾಗಲಿದೆ.

ಎನ್‌ಐಸಿ ಸಂಸ್ಥೆಯು ಅಭಿವೃದ್ಧಿಪಡಿಸಿರುವ ಮತ್ತು ಕೇಂದ್ರೀಕೃತ ವೆಬ್‌ ವ್ಯವಸ್ಥೆಯನ್ನು ಹೊಂದಿರುವ ಸಾರಥಿ ತಂತ್ರಾಂಶದ ಮೂಲಕವೇ ಆಸಕ್ತರು ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆ ಅಥವಾ ಮೊಬೈಲ್‌ ಒಟಿಪಿ ಆಧಾರದ ಮೇಲೆ ದೃಢೀಕರಣ ನೀಡಿ ಲಾಗಿನ್‌ ಆಗಬೇಕು. ನಂತರ ಇಲಾಖೆಯು ನಿಗದಿಪಡಿಸಿರುವ ಅಗತ್ಯ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ ಅಪ್‌ಲೋಡ್‌ ಮಾಡುವ ಜೊತೆಗೆ ನಿಗದಿತ ಶುಲ್ಕವನ್ನು ಪಾವತಿಸುವುದು ಅನಿವಾರ್ಯವಾಗಿದೆ. ಒಮ್ಮೆ ಅರ್ಜಿದಾರರು ಸಲ್ಲಿಸಿದ ದಾಖಲೆಗಳನ್ನು ಸಂಬಂಧಪಟ್ಟ ಪರವಾನಗಿ ಪ್ರಾಧಿಕಾರದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ. ಈ ಪರಿಶೀಲನಾ ಪ್ರಕ್ರಿಯೆ ಮುಗಿದ ನಂತರದ 7 ದಿನಗಳ ಕಾಲಾವಕಾಶದ ಒಳಗೆ ಅರ್ಜಿದಾರರು ಆನ್‌ಲೈನ್‌ ಮುಖಾಂತರವೇ ಪರೀಕ್ಷೆಗೆ ಹಾಜರಾಗಬೇಕು.

ಒಂದು ವೇಳೆ ಅಧಿಕಾರಿಗಳು ದಾಖಲೆ ಪರಿಶೀಲಿಸಿದ ನಂತರ 7 ದಿನಗಳು ಕಳೆದರೂ ಅಭ್ಯರ್ಥಿಯು ಪರೀಕ್ಷೆ ತೆಗೆದುಕೊಳ್ಳಲು ವಿಫಲರಾದರೆ, ಆ ಅರ್ಜಿಯು ಸಾಫ್ಟ್‌ವೇರ್‌ ನಲ್ಲಿ ತಾನಾಗಿಯೇ ರದ್ದಾಗುತ್ತದೆ ಅಥವಾ ಕ್ಯಾನ್ಸಲ್‌ ಆಗುತ್ತದೆ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರಾದ ಎ.ಎಂ. ಯೋಗೀಶ್‌ ಅವರು ಸ್ಪಷ್ಟಪಡಿಸಿದ್ದಾರೆ. ಇನ್ನು ಈಗಾಗಲೇ ಎಲ್‌ಎಲ್‌ಆರ್‌ ಗಾಗಿ ಅರ್ಜಿ ಸಲ್ಲಿಸಿ, ಇನ್ನೂ ಪರೀಕ್ಷೆ ಬರೆಯದೇ ಬಾಕಿ ಉಳಿಸಿಕೊಂಡಿರುವ ಅಭ್ಯರ್ಥಿಗಳಿಗೆ ಇದೇ ಡಿಸೆಂಬರ್‌ 31 ರವರೆಗೆ ಪರೀಕ್ಷೆ ತೆಗೆದುಕೊಳ್ಳಲು ಅಂತಿಮ ಅವಕಾಶವನ್ನು ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸಿದ ಒಂದು ವಾರದೊಳಗೆ ಅಂದರೆ 7 ದಿನಗಳಲ್ಲಿ ಪರೀಕ್ಷೆ ಬರೆಯಲೇಬೇಕು ಎನ್ನುವ ಈ ಹೊಸ ನಿಯಮವು 2026 ರ ಜನವರಿ 1 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

LLR New Rules in Karnataka 

LLR New Rules in Karnataka 
LLR New Rules in Karnataka
Share This Article