ಮಲೆನಾಡುಟುಡೆ ನ್ಯೂಸ್, ಶಿವಮೊಗ್ಗ: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಕಸ್ತೂರಿ ರಂಗನ್ ವರದಿ ಜಾರಿಯಾಗಲು ಬಿಡಬಾರದು. ರಾಜ್ಯ ಸರ್ಕಾರವೇ ಇದರ ನೇತೃತ್ವ ವಹಿಸಿಕೊಂಡು, ವರದಿಯನ್ನು ಜಾರಿಗೆ ತರದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಆಗ್ರಹಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿ ವಿಚಾರವಾಗಿ ಕೇಂದ್ರ ಸರ್ಕಾರ 7 ನೇ ಬಾರಿಗೆ ಆಕ್ಷೇಪಣೆ ಸಲ್ಲಿಸಲು ಕರಡು (ಡ್ರಾಫ್ಟ್) ಬಿಡುಗಡೆ ಮಾಡಿದೆ. ಈ ಹಿಂದೆ ನಾನು ಶಾಸಕನಾಗಿದ್ದ ಅವಧಿಯಲ್ಲಿ 6 ನೇ ಬಾರಿಗೆ ಕರಡು ಬಿಡುಗಡೆಯಾಗಿತ್ತು. ಆ ಸಂದರ್ಭದಲ್ಲಿ ನಾನು, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಸೇರಿದಂತೆ ಇನ್ನಿತರ ನಾಯಕರು ದೆಹಲಿಗೆ ತೆರಳಿ, ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೆವು. ಅವರು ಅದಕ್ಕೆ ಒಪ್ಪಿ, ವರದಿಯನ್ನು ಇನ್ನೊಂದು ವರ್ಷ ಕಾಯ್ದಿರಿಸುವುದಾಗಿ ಭರವಸೆ ನೀಡಿದ್ದರು. ಅದಾದ ನಂತರ ಇದೀಗ ಮತ್ತೊಮ್ಮೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ, ಎಂದರು.
ರಾಜ್ಯದಲ್ಲಿ 1,449 ಹಳ್ಳಿಗಳನ್ನು ಕಸ್ತೂರಿ ರಂಗನ್ ಯೋಜನೆಯ ವ್ಯಾಪ್ತಿಯಲ್ಲಿ ಗುರುತಿಸಲಾಗಿದ್ದು, ಶಿವಮೊಗ್ಗ ಜಿಲ್ಲೆಯೊಂದರಲ್ಲೇ ಸುಮಾರು 447 ಗ್ರಾಮಗಳು ಒಳಪಡುತ್ತವೆ. ನಮ್ಮ ದುರಾದೃಷ್ಟಕ್ಕೆ, ಈಗಾಗಲೇ ಮುಳುಗಡೆ ಪ್ರದೇಶ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಎದುರಿಸುತ್ತಿರುವ ಸಾಗರ ಹಾಗೂ ಹೊಸನಗರ ತಾಲೂಕುಗಳಲ್ಲಿಯೇ 234 ಹಳ್ಳಿಗಳನ್ನು ಈ ವರದಿಯಲ್ಲಿ ಸೇರಿಸಲಾಗಿದೆ. ಇದೇನಾದರೂ ಜಾರಿಗೆ ಬಂದರೆ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಕಾಲಕ್ರಮೇಣ ಇದನ್ನು ಯುನೆಸ್ಕೋ ಪ್ರದೇಶ ಎಂದೂ ಘೋಷಿಸಿಬಿಡುತ್ತಾರೆ, ಎಂದು ಕಳವಳ ವ್ಯಕ್ತಪಡಿಸಿದರು.
ಇಷ್ಟೆಲ್ಲಾ ಸಮಸ್ಯೆಗಳು ಇರುವುದರಿಂದ ಇದರ ನೇತೃತ್ವವನ್ನು ರಾಜ್ಯ ಸರ್ಕಾರವೇ ವಹಿಸಿಕೊಳ್ಳಬೇಕು. ರಾಜ್ಯದ ಪ್ರಭಾವಿ ನಾಯಕರು ಕೇಂದ್ರಕ್ಕೆ ಒತ್ತಡ ಹೇರುವ ಮೂಲಕ, ಕೇರಳ ರಾಜ್ಯದಲ್ಲಿ ತಡೆ ಹಿಡಿದಂತೆ ಇಲ್ಲೂ ವರದಿ ಜಾರಿಯಾಗದಂತೆ ನೋಡಿಕೊಳ್ಳಬೇಕು. ಪಕ್ಷಾತೀತವಾಗಿ ಎಲ್ಲರೂ ಇದನ್ನು ವಿರೋಧಿಸಿದರೆ ಮಾತ್ರ ರೈತರು ಬದುಕಲು ಸಾಧ್ಯ, ಎಂದರು.
ಇದೇ ವೇಳೆ ಜಿಲ್ಲಾ ಬಿಜೆಪಿ ಪ್ರಮುಖ ಮಲ್ಲಿಕಾರ್ಜುನ್ ಹಕ್ರೆ ಮಾತನಾಡಿ, ಈ ಯೋಜನೆಯನ್ನು ವಿರೋಧಿಸಿ 2015-16 ರಿಂದ ನಾವು ಅನೇಕ ಪಾದಯಾತ್ರೆ ಹಾಗೂ ಹೋರಾಟಗಳನ್ನು ಮಾಡುತ್ತಾ ಬಂದಿದ್ದೇವೆ. ಇದೀಗ ಮತ್ತೊಮ್ಮೆ ಆಕ್ಷೇಪಣೆ ಸಲ್ಲಿಸಲು ಸರ್ಕಾರ ಸೂಚಿಸಿದೆ. ಇದೊಂದು ಜನಜೀವನಕ್ಕೆ ಮಾರಕವಾದಂತಹ ವರದಿಯಾಗಿದ್ದು, ಸರ್ಕಾರ ಈ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡಬೇಕು, ಎಂದು ಮನವಿ ಮಾಡಿದರು.
