ಭದ್ರಾವತಿ :ತಮ್ಮನ್ನು ಪೊಲೀಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡು ಒಂಟಿ ಮಹಿಳೆಯನ್ನು ವಂಚಿಸಿ ಬಂಗಾರದ ಸರ ದೋಚಿದ್ದ ಆಂಧ್ರಪ್ರದೇಶ ಮೂಲದ ಇಬ್ಬರು ಅಂತರ್ ರಾಜ್ಯ ಖದೀಮರನ್ನು ಪೇಪರ್ ಟೌನ್ ಪೊಲೀಸ್ ಠಾಣೆಯ ತನಿಖಾ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.
Fake Gold Robbery ಘಟನೆಯ ವಿವರ
17-11-2025 ರಂದು ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ತಿಮ್ಲಾಪುರದಲ್ಲಿ ಮಹಿಳೆಯೊಬ್ಬರು ರಸ್ತೆಯಲ್ಲಿ ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಅವರನ್ನು ತಡೆದ ಅಪರಿಚಿತ ಆರೋಪಿಗಳು, ತಾವು ಪೋಲಿಸ್ ಅಧಿಕಾರಿಗಳು ಎಂದು ಸುಳ್ಳು ಪರಿಚಯ ಮಾಡಿಕೊಂಡಿದ್ದಾರೆ. ಬಳಿಕ ಮಹಿಳೆಯ ಬಳಿಯಿದ್ದ ಬಂಗಾರದ ಸರವನ್ನು ಮೋಸದಿಂದ ಪಡೆದುಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದರು. ಈ ಸಂಬಂಧ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ಹಾಗೂ ಪೇಪರ್ ಟೌನ್ ಠಾಣೆಯ ಪಿಎಸ್ಐ ನೇತೃತ್ವದ ಪೊಲೀಸ್ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆಹಿಡಿದಿದೆ.
ಬಂಧಿತರನ್ನು ಆಂಧ್ರಪ್ರದೇಶ ಮೂಲದ ಅಂತರ್ ರಾಜ್ಯ ಕಳ್ಳರಾದ ಸೈಯದ್ ಅಬ್ಬಾಸ್ ಅಲಿ ಯಾನೆ ಕೊಡಿ ಯಾನೆ ಅಬು ಮತ್ತು ಹುಸೇನ್ ಭಾಷಾ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ ಪ್ರಸ್ತುತ ಮಾರುಕಟ್ಟೆಯಲ್ಲಿ ಸುಮಾರು 4,35,000/- ಮೌಲ್ಯದ 40 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
