ಮಲೆನಾಡು ಟುಡೆ ಸುದ್ದಿ / ಸೊರಬ / ಕೇರಳದಲ್ಲಿ ಸ್ಫೋಟಕದಿಂದ ಗರ್ಭಿಣಿ ಆನೆಯೊಂದು ಮೃತಪಟ್ಟ ಘಟನೆ ದೇಶದಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಈಗ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಹಿರೇಚೌಟಿ ಗ್ರಾಮದಲ್ಲಿ ಅಂತದ್ದೆ ಘಟನೆ ಸಂಭವಿಸಿದೆ. ಸ್ಫೋಟಕವೊಂದು ಮೂಕಪ್ರಾಣಿಯ ಜೀವವನ್ನೇ ಕಸಿದುಕೊಂಡಿದೆ. ಮನೆಯ ಹಿಂಭಾಗದ ಟಾಯ್ಲೆಟ್ ರೂಂನಲ್ಲಿ ಸಂಗ್ರಹಿಸಿಟ್ಟಿದ್ದ ಸ್ಫೋಟಕ ವಸ್ತು ಸಿಡಿದ ಪರಿಣಾಮ ಸಾಕುನಾಯಿ ಮೃತಪಟ್ಟಿದ್ದು, ಮನೆಯ ಒಂದು ಭಾಗವೂ ಸಹ ಹಾನಿಗೀಡಾಗಿದೆ ಎಂದು ಎಫ್ಐಆರ್ನಲ್ಲಿ ದಾಖಲಾಗಿದೆ.
ಈ ಸಂಬಂಧ ಮಲೆನಾಡು ಟುಡೆಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಹಿರೇಚೌಟಿ ಗ್ರಾಮದ ಮಹಾದೇವಪ್ಪ ಅವರ ಮನೆಯ ಹಿಂಭಾಗದಲ್ಲಿರುವ ಟಾಯ್ಲೆಟ್ ರೂಂನಲ್ಲಿ ಈ ಸ್ಫೋಟ ಸಂಭವಿಸಿದೆ. ಸೆ 2ರಂದು ಅಂದರೆ ನಿನ್ನೆ ದಿನ ಮಧ್ಯಾಹ್ನ ಘಟನೆ ಸಂಭವಿಸಿದೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಸ್ಫೋಟಕ ವಸ್ತುಗಳು ಏಕಾಏಕಿ ಸಿಡಿದಿದೆ. ಸ್ಫೋಟದ ತೀವ್ರತೆಗೆ ಟಾಯ್ಲೆಟ್ ರೂಂನ ಮೇಲ್ಛಾವಣಿ, ಗೋಡೆ ಜಖಂಗೊಂಡಿದೆ. ಅಲ್ಲದೆ ಅಲ್ಲಿಯೇ ಇದ್ದ ನಾಯಿ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿತ್ತು. ಅದರ ಹೊಟ್ಟೆಯ ಕರುಳಿನ ಭಾಗ ಹೊರಕ್ಕೆ ಬಂದಿದ್ದರಿಂದ ನಾಯಿ ನರಳಾಡಿ ಅಲ್ಲಿಯೇ ಪ್ರಾಣ ಬಿಟ್ಟಿದೆ.
ಇನ್ನೂ ವಿಷಯ ತಿಳಿದು ಸ್ಥಳಕ್ಕೆ ಆನವಟ್ಟಿ ಪೊಲೀಸ್ ಸ್ಟೇಷನ್ನ ಸಿಬ್ಬಂದಿ ತೆರಳಿ ಪರೀಶೀಲನೆ ನಡೆಸಿದ್ದಾರೆ. ಹಿರೇಚೌಟಿ ಗ್ರಾಮದ ಅರುಣ್ ಹಾಗೂ ಅವರ ತಂದೆ ಮಹಾದೇವಪ್ಪ ಬಿನ್ ಗುಡ್ಡಪ್ಪ ಬೇರೆ ಯಾವುದೋ ಉದ್ದೇಶಕ್ಕೆ ಸ್ಫೋಟಕವನ್ನ ಸಂಗ್ರಹಿಸಿಟ್ಟಿದ್ದರು ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ. ಅಲ್ಲದೆ ವಿಚಾರಣೆ ವೇಳೆ ಸಾಕಷ್ಟು ನಿರ್ಲಕ್ಷ್ಯ ಹಾಗೂ ಅನುಮಾನ ವ್ಯಕ್ತವಾದ್ದರಿಂದ ಈ ಸಂಬಂಧ ಆನವಟ್ಟಿ ಪಿಎಸ್ಐ ಚಂದನ್ ಜೆಸಿ ಸುಮುಟೋ ಕೇಸ್ ದಾಖಲಿಸಿ ತನಿಖೆ ಆರಂಬಿಸಿದ್ದಾರೆ.
ಘಟನೆಯ ವೇಳೆ ಮನೆಯವರು ಅಥವಾ ಅಕ್ಕಪಕ್ಕದವರು ಸ್ಫೋಟ ಸಂಭವಿಸಿದ ಸ್ಥಳದ ಸಮೀಪ ಇದ್ದಿದ್ದರೇ ಇನ್ನಷ್ಟು ದೊಡ್ಡ ಅನಾಹುತ ಸಂಭವಿಸುತ್ತಿತ್ತು. ಹುಣುಸೋಡುವಿನಲ್ಲಿ ಸಂಭವಿಸಿದ ಸ್ಫೋಟದ ಘಟನೆಯನ್ನ ಇಲ್ಲಿ ಸ್ಮರಿಸಬಹುದು. ದುರಾದೃಷ್ಟಕ್ಕೆ ಇಲ್ಲಿ ಬಡಪಾಯಿ ನಾಯಿಯೊಂದು ಸ್ಪೋಟದಿಂದ ಅರ್ಧಂಬರ್ಧ ಜೀವವಾಗಿ ಗಂಟೆಗಳ ಕಾಲ ನರಳಾಡಿ ಪ್ರಾಣಬಿಟ್ಟಿದೆ.
ಇನ್ನೂ ಪ್ರಾಥಮಿಕ ಮಾಹಿತಿ ಪ್ರಕಾರ, ಭಾರತೀಯ ನ್ಯಾಯ ಸಂಹಿತೆ-2023ರ ಕಲಂ 288, 325 ಹಾಗೂ 3(5)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರ ವಿರುದ್ಧ ಕೇಸ್ ಮಾಡಿ ತನಿಖೆ ಮುಂದುವರಿಸಿದ್ದಾರೆ. ಇಲ್ಲಿವರೆಗೂ ಸ್ಫೋಟಕ ವಸ್ತುಗಳನ್ನು ನಿಖರವಾಗಿ ಎಲ್ಲಿಂದ ತರಲಾಗಿತ್ತು, ಅವು ಯಾವ ಬಗೆಯ ಸ್ಫೋಟಕಗಳು ಹಾಗೂ ಯಾವ ಉದ್ದೇಶಕ್ಕಾಗಿ ತರಲಾಗಿತ್ತು ಎಂಬುದರ ಕುರಿತು ಎಫ್ಐಆರ್ನಲ್ಲಿ ಸ್ಪಷ್ಟ ವಿವರ ನೀಡಲಾಗಿಲ್ಲ. ಈ ಅಂಶಗಳು ಮುಂದಿನ ಪೊಲೀಸ್ ತನಿಖೆಯಲ್ಲಿ ಹೊರಬರಬೇಕಿದೆ.
