ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಗಂಗೂರು ಅಡಕೆ ಮಂಡಿ ಲೇಔಟ್ ಗ್ರಾಮದ 12 ವರ್ಷದ ಬಾಲಕ ಸೂಫಿಯಾನ್ ನಾಪತ್ತೆಯಾಗಿದ್ದು, ಬಾಲಕನ ಕುರಿತು ಮಾಹಿತಿ ದೊರೆತವರು ಪೊಲೀಸರನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸರು ಪ್ರಕಟಣೆಯನ್ನು ನೀಡಿದ್ದು, ಪ್ರಕಟಣೆಯಲ್ಲಿನ ವಿವರಣೆ ಹೀಗಿದೆ.
ಕೋಟೆಗಂಗೂರು ಅಡಕೆ ಮಂಡಿ ಲೇಔಟ್ ನಿವಾಸಿ ಸಲ್ಮಾನ್ ಅವರ ಪುತ್ರ ಸೂಫಿಯಾನ್ ಆಗಸ್ಟ್18ರಂದು ಮನೆಯಿಂದ ಭದ್ರಾವತಿಯ ಸರ್ಕಾರಿ ಹಾಸ್ಟೆಲ್‌ಗೆ (Bhadravati Government Hostel) ಹೋಗುವುದಾಗಿ ತಿಳಿಸಿ ಹೊರಟಿದ್ದ. ಆದರೆ ಬಾಲಕ ಹಾಸ್ಟೆಲ್‌ಗೆ ತಲುಪಿಲ್ಲ. ಮನೆಯಿಂದ ತೆರಳಿದ ಬಳಿಕ ಈವರೆಗೂ ವಾಪಸ್ ಬಂದಿಲ್ಲ . ಈ ಸಂಬಂಧ ಫೊಷಕರು ನೀಡಿರುವ ದೂರಿನನ್ವಯ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಅಲ್ಲದೆ ಆತನ ಪತ್ತೆಗಾಗಿ ಪ್ರಕಟಣೆಯನ್ನ ನೀಡಿದ್ದಾರೆ.
ಇನ್ನೂ ಕಾಣೆಯಾದ ಸೂಫಿಯಾನ್ ಸುಮಾರು 3.8 ಅಡಿ ಎತ್ತರ ಹೊಂದಿದ್ದು, ತೆಳುವಾದ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹಾಗೂ ಕೋಲು ಮುಖ ಹೊಂದಿದ್ದಾನೆ. ಬಲಗಣ್ಣಿನ ಕೆಳಭಾಗ ಹಾಗೂ ಮೂಗಿನ ಮೇಲೆ ಹಳೆಯ ಗಾಯದ ಗುರುತುಗಳಿವೆ. ಮನೆಯಿಂದ ಹೊರಡುವ ವೇಳೆ ಕೆಂಪು ಬಣ್ಣದ ಶರ್ಟ್, ನೀಲಿ ಬಣ್ಣದ ಪ್ಯಾಂಟ್ ಹಾಗೂ ನಶೆ ಬಣ್ಣದ ಜರ್ಕಿನ್ ಧರಿಸಿದ್ದ ಎಂದು ಮಾಹಿತಿ ನೀಡಲಾಗಿದೆ.
ಬಾಲಕನ ಕುರಿತು ಯಾವುದೇ ಸುಳಿವು ಅಥವಾ ಮಾಹಿತಿ ದೊರೆತಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ 08182-261400, 08182-261418, 9480803332 ಅಥವಾ 9480803350 ಸಂಖ್ಯೆಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
