ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಇತ್ತೀಚೆಗಷ್ಟೆ ರಿಪೇರಿ ಹಿನ್ನೆಲೆಯಲ್ಲಿ ಶಿವಮೊಗ್ಗ ಸಿಟಿಯಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ (Drinking Water Supply) ವ್ಯತ್ಯಾಸವಾಗಿತ್ತು. ಇವತ್ತು ಈ ಸಂಬಂಧ ಇನ್ನೊಂದು ಪ್ರಕಟಣೆ ಹೊರಬಿದ್ದಿದ್ದು, ಸೆ.6 ಮತ್ತು 7ರಂದು ಶಿವಮೊಗ್ಗ ನಗರದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಅಂತಾ ತಿಳಿಸಲಾಗಿದೆ.
ಪ್ರಕಟಣೆಯ ವಿವರ ಗಮನಿಸಿದ್ರೆ, ನಗರದ ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕಕ್ಕೆ ವಿದ್ಯುತ್ ಸರಬರಾಜು ಮಾಡುವ ಮೆಸ್ಕಾಂ ಇಲಾಖೆಯ 110/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ ದುರಸ್ತಿ ಹಾಗೂ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 6 ಮತ್ತು 7ರಂದು ಶಿವಮೊಗ್ಗ ನಗರದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಲಾಗಿದೆ.
ಮೆಸ್ಕಾಂ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಡೆಯುವ ಕಾಮಗಾರಿಯಿಂದ ಸೆಪ್ಟೆಂಬರ್ 6ರಂದು ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕಕ್ಕೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ. ಇದರ ಪರಿಣಾಮವಾಗಿ ಸೆಪ್ಟೆಂಬರ್ 6 ಮತ್ತು 7ರಂದು ಶಿವಮೊಗ್ಗ ನಗರದಾದ್ಯಂತ ದೈನಂದಿನ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತಿಳಿಸಿದೆ.
ನಗರದ ಸಾರ್ವಜನಿಕರು ಅಗತ್ಯಕ್ಕೆ ತಕ್ಕಷ್ಟು ಕುಡಿಯುವ ನೀರನ್ನು ಮುಂಚಿತವಾಗಿಯೇ ಶೇಖರಿಸಿಟ್ಟುಕೊಂಡು ಮಂಡಳಿಯೊಂದಿಗೆ ಸಹಕರಿಸುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಮನವಿ ಮಾಡಿದ್ದಾರೆ.
