ಶಿವಮೊಗ್ಗದಲ್ಲಿ ವೈರ್‌ಲೆಸ್ ನೆಟ್‌ವರ್ಕ್ ಸ್ಥಾಪನೆಗೆ ತೀರ್ಮಾನ! ಎಲ್ಲೆಲ್ಲಿ? ಏನಿದು ತಿಳಿಯಿರಿ

ಹಂಚಿಕೊಳ್ಳಿ
WhatsApp Facebook X Telegram
Community Wireless Network to be Established in Shivamogga
Community Wireless Network to be Established in Shivamogga

Community Wireless Network / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಿಲ್ಲೆಯ ನೆಟ್​ವರ್ಕ್​ ವಂಚಿತ ದುರ್ಗಮ ಪ್ರದೇಶಗಳಲ್ಲಿ , ಡಿಜಿಟಲ್ ಸಂಪರ್ಕ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ 6 ಸ್ಥಳಗಳಲ್ಲಿ ಸಮುದಾಯ ಆಧಾರಿತ ವೈರ್‌ಲೆಸ್ ನೆಟ್‌ವರ್ಕ್ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಹಾಗೂ ಬಿಎಸ್‌ಎನ್‌ಎಲ್ ಉನ್ನತ ಅಧಿಕಾರಿಗಳೊಂದಿಗೆ ನಿನ್ನೆ ಮಹತ್ವದ ಉನ್ನತ ಮಟ್ಟದ ಸಭೆಯನ್ನು ನಡೆಸಲಾಯಿತು ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ತಿಳಿಸಿದ್ದಾರೆ.

ಶಿವಮೊಗ್ಗದ ಪಿ.ಇ.ಎಸ್. ತಾಂತ್ರಿಕ ಮತ್ತು ನಿರ್ವಹಣಾ ಸಂಸ್ಥೆ ಹಾಗೂ ಬೆಂಗಳೂರಿನ ಇಂಟರ್ನೆಟ್ ಸೊಸೈಟಿ ಘಟಕದ ಜಂಟಿ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಜುಲೈ 13 ರಿಂದ 17 ರವರೆಗೆ ಆಯೋಜಿಸಲಾಗಿರುವ ಬಿಲ್ಡಿಂಗ್ ವೈರ್‌ಲೆಸ್ ಕಮ್ಯುನಿಟಿ ನೆಟ್‌ವರ್ಕ್ಸ್ ಬೂಟ್ ಕ್ಯಾಂಪ್‌ನ ವಿಸ್ತರಿತ ಭಾಗವಾಗಿ ನಿನ್ನೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆದಿದೆ.

ಪ್ರಥಮ ಹಂತದಲ್ಲಿ ಜಿಲ್ಲೆಯ ಸಂಪರ್ಕ ವಂಚಿತ 6 ಸ್ಥಳಗಳನ್ನು ಗುರುತಿಸಿ, ಅಲ್ಲಿ ಪ್ರಾಯೋಗಿಕವಾಗಿ ಸಮುದಾಯ ಆಧಾರಿತ ವೈರ್‌ಲೆಸ್ ನೆಟ್‌ವರ್ಕ್ ಅಳವಡಿಸುವ ಮೂಲಕ ಸಾರ್ವಜನಿಕರಿಗೆ ಅತ್ಯುತ್ತಮ ಗುಣಮಟ್ಟದ ಅಂತರ್ಜಾಲ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ವಿವರಿಸಿದ್ದಾರೆ.

ಈ ಸಂಬಂಧ ಮಾತನಾಡಿರುವ ಸಂಸದರು, ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಪರಿಕಲ್ಪನೆಯ ಅಡಿಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವೆ ಇರುವ ಡಿಜಿಟಲ್ ಅಂತರವನ್ನು ಆದಷ್ಟು ಶೀಘ್ರವಾಗಿ ನಿವಾರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಶಿವಮೊಗ್ಗವನ್ನು ಸಂಪೂರ್ಣವಾಗಿ ಡಿಜಿಟಲ್ ಸಂಪರ್ಕ ಹೊಂದಿರುವ ಮಾದರಿ ಜಿಲ್ಲೆಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಿರಂತರವಾಗಿ ಸಾಗುತ್ತಿವೆ. ಈ ಪ್ರಾಯೋಗಿಕ ಯೋಜನೆ ಯಶಸ್ವಿಯಾದ ಬಳಿಕ, ಇದನ್ನು ಜಿಲ್ಲೆಯ ಇತರೆ ಎಲ್ಲಾ ಸಂಪರ್ಕ ವಂಚಿತ ಭಾಗಗಳಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದರು

ಈ ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಬಿಎಸ್‌ಎನ್‌ಎಲ್ ನಿಗಮದ ಪ್ರಧಾನ ವ್ಯವಸ್ಥಾಪಕ ಬಿನಯ್ ಕುಮಾರ್ ಸಿನ್ಹಾ, ಇಂಟರ್ನೆಟ್ ಸೊಸೈಟಿ ಬೆಂಗಳೂರು ಚಾಪ್ಟರ್‌ನ ಅಧ್ಯಕ್ಷೆ ಡಾ. ಕೆ.ಆರ್. ಶೋಭಾ, ಉಪಾಧ್ಯಕ್ಷ ಆದರ್ಶ್ ಬಿ.ಯು., ಪಿಇಎಸ್ ಟ್ರಸ್ಟ್‌ನ ಕುಲಸಚಿವ ಡಾ. ಆರ್. ನಾಗರಾಜ, ಪಿಇಎಸ್‌ಐಟಿಎಂ ಪ್ರಾಂಶುಪಾಲ ಡಾ. ಡಿ.ಆರ್. ಸ್ವಾಮಿ, ಬಿಎಸ್‌ಎನ್‌ಎಲ್‌ನ ಹಿರಿಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor