ಮಲೆನಾಡು ಟುಡೆ ಸುದ್ದಿ / ಸಾಗರ: ಈ ಹಿಂದೆಲ್ಲಾ ಕುಂಡಗಳ ಒಳಗೆ, ಚೆಂಡು ಹೂವಿನ ಗಿಡಗಳ ಮಧ್ಯೆ ಕಾಣಿಸಿಕೊಂಡು ಸುದ್ದಿಯಾಗುತ್ತಿದ್ದ ಗಾಂಜಾ ಗಿಡ, ಇದೀಗ ಕನ್ಸರ್ವೆನ್ಸಿ ರಸ್ತೆಯಲ್ಲಿ ಬೆಳೆದು ನಿಂತು ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಅದೂ ಸಹ ಸಾಗರದ ಬಿ.ಹೆಚ್. ರಸ್ತೆಯಲ್ಲಿರುವ ಡಿವೈಎಸ್ಪಿ ಕಚೇರಿಯ ಮುಂಭಾಗದ ರಸ್ತೆಯಲ್ಲೇ ಗಾಂಜಾ ಗಿಡ ಪತ್ತೆಯಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೌದು, ಸಾಗರ ಬಿ.ಹೆಚ್. ರಸ್ತೆಯ ಡಿವೈಎಸ್ಪಿ ಕಚೇರಿಯ ಕೆಲವೇ ಮೀಟರ್‌ಗಳ ಅಂತರದಲ್ಲಿ ಬೃಹತ್ ಪ್ರಮಾಣದ ಗಾಂಜಾ ಗಿಡ ಬೆಳೆದು ನಿಂತಿದೆ. ಇದನ್ನು ಯಾರಾದರೂ ಉದ್ದೇಶಪೂರ್ವಕವಾಗಿ ಬೆಳೆಸಿದ್ದಾರೋ ಅಥವಾ ಗಾಂಜಾ ವ್ಯಸನಿಗಳು ಗಾಂಜಾ ಸೇವಿಸುವಾಗ ಹಾಕಿದ ಬೀಜದಿಂದ ತಾನಾಗಿಯೇ ಬೆಳೆದಿದೆಯೋ ಎಂಬ ವಿಚಾರ ಪೊಲೀಸ್ ತನಿಖೆಯಿಂದಷ್ಟೇ ಹೊರಬರಬೇಕಿದೆ.

ಅದೇನೇ ಇರಲಿ, ಪೊಲೀಸ್ ಉನ್ನತಾಧಿಕಾರಿಗಳ ಕಚೇರಿಯ ಕೂಗಳತೆ ದೂರದಲ್ಲೇ ಗಾಂಜಾ ಗಿಡ ಬೆಳೆದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೆ, ನಗರದಾದ್ಯಂತ ಇರುವ ಎಲ್ಲಾ ಕನ್ಸರ್ವೆನ್ಸಿ ರಸ್ತೆಗಳನ್ನು ಪರಿಶೀಲಿಸಿ ಶೋಧ ನಡೆಸಬೇಕೆಂದು ಆಗ್ರಹಿಸಿದ್ದು, ಅಬಕಾರಿ ಹಾಗೂ ಪೊಲೀಸ್ ಇಲಾಖೆ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

