MALENADUTODAY.COM | SHIVAMOGGA NEWS |SHIVAMOGGA POLITICS
ಶಿವಮೊಗ್ಗ ನಗರದಲ್ಲಿ ರಾಜ್ಯ ಬಿಜೆಪಿಯ ಪೇಜ್ ಪ್ರಮುಖ ಮೊದಲ ಸಭೆ ಎನ್ ಇ ಎಸ್ ಮೈದಾನದಲ್ಲಿ ನಡೆಯುತ್ತಿದೆ. ಈ ಸಭೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ರಾಜ್ಯ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಶಾಸಕ ಕೆ.ಎಸ್.ಈಶ್ವರಪ್ಪ, ಎಂಎಲ್ಸಿ ಆಯನೂರ್ ಮಂಜುನಾಥ್ ಉಪಸ್ಥಿತರಿದ್ದಾರೆ.
ಮುಂದಿನ ಸಲ ಭರ್ಜರಿ ಗೆಲುವು ಈಶ್ವರಪ್ಪ ವಿಶ್ವಾಸ!
ಪೇಜ್ ಪ್ರಮುಖರ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪರವರು, ರಾಜ್ಯ 224 ಕ್ಷೇತ್ರದಲ್ಲಿ ಪೇಜ್ ಪ್ರಮುಖರ ಸಭೆ ನಡೆಯಲಿದೆ, 150ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಪೇಜ್ ಪ್ರಮುಖರು ಕಾರಣಕರ್ತರಾಗಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. ಪೇಜ್ ಪ್ರಮುಖರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಮತದಾರರಿಗೆ ತಲುಪಿಸಲಿದ್ದಾರೆ ಎಂದರು. ರಾಜ್ಯದಲ್ಲಿ ಸಂಘಟನೆ ಇರುವುದು ಬಿಜೆಪಿಯಲ್ಲಿ ಮಾತ್ರ , ಕಾಂಗ್ರೆಸ್‌ನವರು ಜನರನ್ನು ಸೇರಿಸುತ್ತಾರೆ. ಆದರೆ ಕಾರ್ಯಕ್ರಮ ಮುಗಿದ ನಂತರ ಹೋಗುವರರು ಬಿಜೆಪಿಗೆ ಮತ ಹಾಕುತ್ತಾರೆ ಎಂದು ವ್ಯಂಗ್ಯವಾಡಿದ ಈಶ್ವರಪ್ಪ ಕಾಂಗ್ರೆಸ್ ಮತ್ತು ಜೆಡಿಎಸ್ ಯಾತ್ರೆ ಮಾಡುತ್ತಿದ್ದಾರೆ, ಅವರು ಮಾಡಲಿ. ಆದರೆ ನಮ್ಮ ಪಕ್ಷದ ಗೆಲುವು ನಿಶ್ಚಿತ ಎಂದರು.
ಅಭಿವೃದ್ಧಿ ಸಂಘಟನೆ ಮತ್ತು ನೇತೃತ್ವ ನಮ್ಮ ಪಕ್ಷದ ವಿಶೇಷತೆಯಾಗಿದ್ದು, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಅವರು ಸೋತಿದ್ದಾರೆ, ಆದರೆ ನಮ್ಮ ಪ್ರಧಾನಿ ಹಾಗೂ ಗೃಹ ಸಚಿವರ ನೇತೃತ್ವದಲ್ಲಿ ಚುನಾವಣೆ ಗೆಲ್ಲುತ್ತಾ ಬಂದಿದ್ದೇವೆ ಎಂದ ಮಾಜಿ ಸಚಿವರು ಸಿದ್ದರಾಮಯ್ಯ ಹಾಗೂ ಶಿವಕುಮಾರ್ ನಮ್ಮ ಪ್ರಧಾನಿ ಹಾಗೂ ಸಿಎಂ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ, ಏಕೆಂದರೆ ಅಭಿವೃದ್ಧಿ ಬಗ್ಗೆ ಮಾತನಾಡಲು ವಿಷಯವೇ ಇಲ್ಲ ಎಂದರು.ಕಳೆದ ಬಾರಿ ನನ್ನನ್ನ 46107 ಮತಗಳಿಂದ ಗೆಲಿಸಿದ್ದೀರಿ, ಆಗ ಇನ್ನೂ ಪೇಜ್ ಪ್ರಮುಖ್ ಇನ್ನೂ ಪೂರ್ಣ ಪ್ರಮಾಣದಲ್ಲಿ ರಚನೆಗೊಂಡಿರಲಿಲ್ಲ. ಈ ಬಾರಿ ಪೇಜ್ ಪ್ರಮುಖ್ ಪೂರ್ಣ ಪ್ರಮಾಣದಲ್ಲಿ ರಚನೆಗೊಂಡಿದೆ. ಹಾಗಾಗಿ 50 ಸಾವಿರ ಮತದಲ್ಲಿ ಗೆಲ್ಲಿಸಿಕೊಡಬೇಕೆಂದು ಕೋರಿದರು
ಪ್ರತಿಪಕ್ಷಗಳ ವಿರುದ್ಧ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ
ಶಿವಮೊಗ್ಗ ರಾಜ್ಯ ಬಿಜೆಪಿಯ ಶಕ್ತಿ ಕೇಂದ್ರ ಬಿಜೆಪಿಗೆ ಶಕ್ತಿ ತುಂಬುವ ಜಿಲ್ಲೆ, ಪ್ರತಿ ಬೂತ್ಗಳಲ್ಲಿಯು ಗೆಲ್ಲುವ ಸಂಕಲ್ಪ ನಮ್ಮದಾಗಿರಬೇಕು. ಆಗ ಮಾತ್ರ ನಾವು ನಿಜವಾದ ಗೆಲುವು ಪಡೆದಂತೆ, ಶಿವಮೊಗ್ಗದಲ್ಲಿ ರಾಜ್ಯದ ಮೊದಲ ಪೇಜ್ ಪ್ರಮುಖರ ಸಮಾವೇಶ ಆರಂಭಗೊಂಡಿದ್ದು ಇಲ್ಲಿಂದ ವಿಜಯ ಯಾತ್ರೆ ಆರಂಭವಾಗಿದೆ ಎಂದರು.
ಕಾಂಗ್ರೆಸ್ ಪಕ್ಷವೂ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯರ ಮನೆಯಲ್ಲಿದೆ, ಕಾಂಗ್ರೆಸ್ ಕಾರ್ಯಕರ್ತರಿಗೆ ಧ್ವನಿ ಇಲ್ಲ ಹಾಗಾಗಿ ಪ್ರಜಾ ಧ್ವನಿ ಹಿಡಿದುಕೊಂಡು ಹೊರಟಿದ್ದಾರೆ. ಕಾಂಗ್ರೆಸ್ ನಲ್ಲಿ ಪೇಜ್ ಪ್ರಮುಖರಿರಲಿ ರಾಜ್ಯ ಮಟ್ಟದ ಕಾರ್ಯಕಾರಿಣಿಯೇ ಇಲ್ಲ, ಡಿ.ಕೆ.ಶಿವಕುಮಾರ್ ಅಧ್ಯಕ್ಷರಾದ ನಂತರ ರಾಜ್ಯದಲ್ಲಿ ಕಾರ್ಯಕಾರಿಣಿಯೇ ನಡೆದಿಲ್ಲ. ಅದನ್ನು ಮಾಡಲು ಹೋದರೆ ರಾಜ್ಯಮಟ್ಟದಲ್ಲಿರಲಿ ಜಿಲ್ಲಾ ಮಟ್ಟದಲ್ಲೇ ಪಕ್ಷದಲ್ಲಿ ಒಡಕು ಮೂಡಲಿದೆ ಎಂದ ನಳಿನ್ ಕುಮಾರ್ ಕಟೀಲ್, ಬಿಜೆಪಿ ನಾಯಕರಂತೆ ಕಾಂಗ್ರೆಸ್ ನಾಯಕರು ಯಾವುದೇ ಕಾಂಗ್ರೆಸ್ ಕಾರ್ಯಕರ್ತನ ಮನೆಗೆ ಹೋಗಿ ಅವನೊಂದಿಗೆ ಮಾತನಾಡಿದ್ದಾರಾ ಎಂದು ಪ್ರಶ್ನಿಸಿದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಪೂರ್ಣಗೊಂಡಿದೆ, ಕಾಶಿ, ಮಥುರಾ ಬೆಳಗುತ್ತಿದೆ, ರಾಜ್ಯದಲ್ಲಿ ಕೇಸರಿ ಅಲೆ ಎದ್ದು ಕಾಣುತ್ತಿದೆ. ಪ್ರಧಾನಿ ಕಾರ್ಯಕ್ರಮಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ಫಲಾನುಭವಿಗಳ ಸಮಾವೇಶ ನಡೆಯುತ್ತಿದ್ದು ಅವರೊಂದಿಗೆ ಸಂವಾದ ನಡೆಯುತ್ತಿದೆ. ಕಾಂಗ್ರೆಸ್ ಅವಧಿಯಲ್ಲಿ ಘೋಷಣೆಯಾಗಿದ್ದ ಗರೀಬಿ ಹಠಾವೋ ಸೋನಿಯಾ ಗಾಂಧಿ, ಖರ್ಗೆ, ಶಿವಕುಮಾರ್ ಅವರ ಗರೀಬಿ ಹಠಾವೋ ಆಯಿತು. ಆದರೆ ಪ್ರಧಾನಿ ನರೇಂದ್ರ ನೇತೃತ್ವದ ಆಡಳಿತದಲ್ಲಿ ನಿಜವಾದ ಗರೀಬಿ ಹಠಾವೋ ನಡೆದಿದೆ.
ಪರಿಶಿಷ್ಟರಿಗೆ ಮೀಸಲಾತಿ, ಬಂಜಾರ ಸಮಾಜಕ್ಕೆ ಹಕ್ಕುಪತ್ರ, ಉಚಿತ ವಿದ್ಯುತ್, ಗೋಹತ್ಯೆ ನಿಷೇಧ, ರೈತರ ಮಕ್ಕಳಿಗೆ ವಿದ್ಯಾನಿಧಿ ನೀಡಿದ್ದು ಬಿಜೆಪಿ ಹೆಗ್ಗಳಿಕೆ. ಶಿವಮೊಗ್ಗದಲ್ಲಿ ನಡೆದ ಹರ್ಷನ ಮತ್ತು ಮಂಗಳೂರಿನ ಪ್ರವೀಣ್ ನೆಟ್ಟಾರ್ ಕೊಲೆ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ಪರಿಹಾರ ನೀಡಿತು. ಶಿವಮೊಗ್ಗದ ತೀರ್ಥಹಳ್ಳಿ ವ್ಯಕ್ತಿ ಮಂಗಳೂರಿಗೆ ಕುಕ್ಕರ್ ಹಿಡಿದುಕೊಂಡು ಬಂದ, ಆದರೆ ಡಿ.ಕೆ.ಶಿವಕುಮಾರ್ ಗೆ ಬೆಳಗಾವಿ ಹಾಗೂ ಮಂಗಳೂರಿನ ಕುಕ್ಕರ್ ಮೇಲೆ ಪ್ರೀತಿ ಜಾಸ್ತಿಯಾಗಿದೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೋ ಹತ್ಯೆ ನಿಷೇಧ ಕಾಯ್ದೆ, ಟಿಪ್ಪು ಜಯಂತಿ ನಿಷೇಧ ಸೇರಿದಂತೆ ಬಿಜೆಪಿ ಸರ್ಕಾರ ತೆಗೆದುಕೊಂಡ ತೀರ್ಮಾನಗಳನ್ನು ಹಿಂತೆಗೆದುಕೊಳ್ಳುತ್ತಾರೆ. ಸಿದ್ದರಾಮಯ್ಯ ದೇವರಾಣೆ ಸಿಎಂ ಆಗುವುದಿಲ್ಲ ಎಂದು ಹೇಳುತ್ತೇನೆ. ಕಾಂಗ್ರೆಸ್ ನಲ್ಲಿ ಭಿನ್ನಮತ ಆರಂಭವಾಗಿದೆ. ಜೆಡಿಎಸ್ ನಲ್ಲಿ ಕುಟುಂಬ ಜಗಳ ಶುರುವಾಗಿದೆ. ಸಿದ್ದರಾಮಯ್ಯಗೆ ಟಕ್ಕರ್ ನೀಡಲು ನಮಗೆ ಈಶ್ವರಪ್ಪ ಬೇಕು. ಬೊಮ್ಮಾಯಿ ಹಾಗೂ ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ 150ಕ್ಕೂ ಹೆಚ್ಚು ಸ್ಥಾನ ಗಳಿಸುತ್ತೇವೆ. ಸಂಗೀತ ಕುರ್ಚಿಯಂತಾಗಿರುವ ಕಾಂಗ್ರೆಸ್ ನಲ್ಲಿ ಮೂರು ಹೋಳಾಗಲಿದೆ ಎಂದಿದ್ದಾರೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com