ಶಾಸಕ ಪ್ರದೀಪ್ ಈಶ್ವರ್​ ಮೇಲೆ ಚಪ್ಪಲಿ ತೂರಿದ ಘಟನೆ ಬಗ್ಗೆ ಸಂಸದ ಬಿ.ವೈ. ರಾಘವೇಂದ್ರ ಪ್ರತಿಕ್ರಿಯೆ

Slipper Thrown at MLA Pradeep / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಾಸಕ ಪ್ರದೀಪ್ ಈಶ್ವರ್ ಅವರ ಮೇಲೆ ಚಪ್ಪಲಿ ತೂರಿದ ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇಂತಹ ಅಹಿತಕರ ಘಟನೆಗಳು ನಡೆಯಬಾರದಿತ್ತು, ಆದರೆ ನಡೆದುಹೋಗಿದೆ. ಇದರಲ್ಲಿ ಯಾರದ್ದು ಸರಿ ಮತ್ತು ಯಾರದ್ದು ತಪ್ಪು ಎಂಬುದನ್ನು ಅಂತಿಮವಾಗಿ ಜನರು ತೀರ್ಮಾನ ಮಾಡಲಿದ್ದಾರೆ. ಸೂಕ್ತ ಸಂದರ್ಭ ಒದಗಿ ಬಂದಾಗ ಅವರೇ ಇದಕ್ಕೆ ಉತ್ತರ ನೀಡಲಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ.

ಇನ್ನೂ ಇದೇ ಸಂದರ್ಭದಲ್ಲಿ ಅಡ್ಡ ಮತದಾನದ ವಿಚಾರದ ಬಗ್ಗೆಯೂ ಅವರು ಸ್ಪಷ್ಟನೆ ನೀಡಿದ್ದಾರೆ. ಅಡ್ಡ ಮತದಾನದ ಗೊಂದಲಗಳು ಈಗ ಬಗೆಹರಿದಿವೆ. ರಾಜ್ಯಾಧ್ಯಕ್ಷರ ಮೇಲೆ ಕಪ್ಪುಚುಕ್ಕೆ ಇಡುವಂತಹ ಪ್ರಯತ್ನಗಳು ನಡೆದಿದ್ದವು. ಇದರ ಹಿಂದೆ ಕೆಲವು ಕಾಣದ ಕೈಗಳು ಷಡ್ಯಂತ್ರ ನಡೆಸಿದ್ದವು ಎಂದು ಅವರು ಆರೋಪಿಸಿದ್ದಾರೆ. ಅವರು ಅಪಾರ ನಂಬಿಕೆ ಇಟ್ಟಿರುವ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನ ಪಡೆದು, ಕೈಮುಗಿದು ಬಂದ ಬಳಿಕ ಈ ವಿಚಾರಗಳನ್ನು ಹೇಳಿದ್ದಾರೆ.

ಅಡ್ಡ ಮತದಾನ ಮಾಡಿದವರಿಗೂ ದೇವರು ಒಳ್ಳೆಯದನ್ನೇ ಮಾಡಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಂಡು ಬಂದಿದ್ದಾರೆ. ಉಳಿದ ವಿಚಾರ ಪಕ್ಷದ ಸಂಘಟನಾ ಚೌಕಟ್ಟಿನೊಳಗೆ ಚರ್ಚೆಯಾಗಲಿವೆ. ಸಿ.ಟಿ. ರವಿ ಅವರು ನೀಡುವ ವರದಿಯನ್ನು ಆಧರಿಸಿ ಹೈಕಮಾಂಡ್ ಮುಂದಿನ ತೀರ್ಮಾನವನ್ನು ಕೈಗೊಳ್ಳಲಿದೆ ಎಂದು ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.