ಸುದ್ದಿಯ ಸ್ಥಳ: Bhadravati, Shivamogga, Karnataka
ಮಲೆನಾಡು ಟುಡೆ ಸುದ್ದಿ / ಭದ್ರಾವತಿ / ನಗರದ ಜೆಪಿಎಸ್ ಕಾಲೋನಿಯಲ್ಲಿ 110 ಕೆವಿ ವಿದ್ಯುತ್ ಮಾರ್ಗದ ಹೈಟೆನ್ಶನ್ ಟವರ್ನಲ್ಲಿ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾಗಿದೆ. ಮೂಲಗಳ ಪ್ರಕಾರ, ಆತ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ. ಸುಮಾರು 60 ಅಡಿ ಎತ್ತರದಲ್ಲಿ ಟವರ್ನ ಒಂದು ಭಾಗದ ಮೇಲೆ ವ್ಯಕ್ತಿಯ ಶವ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಭದ್ರಾವತಿ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟು ಹಗ್ಗ ಹಾಕಿ ಶವ ಕೆಳಕ್ಕೆ ಇಳಿಸಿದ್ದಾರೆ.
ಇವತ್ತು ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದೆ. ಭದ್ರಾವತಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿದಾಗ ಅವರಿಗೆ ಅಚ್ಚರಿ ಆಘಾತ ಎರಡು ಆಗಿತ್ತು. ಹೈಟೆನ್ಶನ್ ಟವರ್ ಮೇಲೆ ಹೋಗಿ ಮೃತ ಶವ ತರುವುದು ಹೇಗಪ್ಪ ಎಂಬ ತಲೆನೋವು ಒಂದು ಕಡೆಯಾದರೆ, ಜೀವಕ್ಕೆ ಆಪತ್ತು ಉಂಟಾದರೆ ಎಂಬ ಭಯ ಕಾಡಿತ್ತು. ಆದಾಗ್ಯು ಬೇರೆ ವಿಧಿಯಿಲ್ಲದೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಪವರ್ ಸ್ಟಾಪ್ ಆಗಿರುವುದನ್ನ ಗಮನಿಸಿ, ಅಗ್ನಿಶಾಮಕ ದಳದ ಸಿಬ್ಬಂದಿ ಟವರ್ ಏರಿ ಹಗ್ಗ ಹಾಕಿ ಶವವನ್ನ ಕೆಳಕ್ಕೆ ಇಳಿಸಿದ್ದಾರೆ. ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ (AFSO) ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕೃಷ್ಣರಾಜು, ಆನಂದ್, ಸುರೇಶ್, ಮಹೇಂದ್ರ ಹಾಗೂ ಸಂತೋಷ್ ಪಾಲ್ಗೊಂಡಿದ್ದರು.
ಘಟನೆಯಲ್ಲಿ ಮೃತನ ವಯಸ್ಸು 24-25 ವರ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ಏಕೆ ಏನು ಹೇಗಾಯ್ತು ಎಂಬ ಮಾಹಿತಿ ಇನ್ನಷ್ಟೆ ಗೊತ್ತಾಗಬೇಕಿದೆ.
