ಪಿಎಚ್‌ಡಿ ಮಾಡುವುದು ಹೇಗೆ? ಏನಿರಬೇಕು ಅರ್ಹತೆ? ಉದ್ಯೋಗದಲ್ಲಿರುವವರೂ ಪಿಎಚ್‌ಡಿ ಮಾಡಬಹುದೇ? ಇಲ್ಲಿದೆ ಕರ್ನಾಟಕ ವಿವಿ ನೀಡಿರುವ ಪೂರ್ಣ ಮಾಹಿತಿ!

ಹಂಚಿಕೊಳ್ಳಿ
WhatsApp Facebook X Telegram
how-to-do-phd-karnatak-university-admission-2026-27
how-to-do-phd-karnatak-university-admission-2026-27

ಮಲೆನಾಡು ಟುಡೆ ಸುದ್ದಿ / ಪಿಎಚ್‌ಡಿ ಮಾಡಲು ಯಾವ ಶೈಕ್ಷಣಿಕ ಅರ್ಹತೆ ಹೊಂದಿರಬೇಕು? ಉದ್ಯೋಗದಲ್ಲಿರುವವರು ಪಿಎಚ್‌ಡಿ ಮಾಡಬಹುದೇ? ಪ್ರವೇಶ ಪರೀಕ್ಷೆ ಹೇಗಿರುತ್ತದೆ? ಅರ್ಜಿ ಸಲ್ಲಿಸುವ ವಿಧಾನವೇನು? ಶುಲ್ಕ ಎಷ್ಟು? ಈ ಎಲ್ಲ ವಿಚಾರಗಳ ಕುರಿತು ಇವತ್ತು ಇಲ್ಲಿ ವಿವರಿಸಲಾಗುತ್ತಿದೆ. ವಿಶೇಷವಾಗಿ ಕರ್ನಾಟಕ ವಿಶ್ವವಿದ್ಯಾಲಯ ತನ್ನ ನವೆಂಬರ್ 23ರ ಅಧಿಸೂಚನೆಯಲ್ಲಿ ನೀಡಿರುವ ಮಾಹಿತಿ ಆಧರಿಸಿ ಈ ವಿವರ ನೀಡಲಾಗಿದೆ.

ಸದ್ಯ ಉನ್ನತ ಶಿಕ್ಷಣದ ಬಳಿಕ ಸಂಶೋಧನಾ ಕ್ಷೇತ್ರದಲ್ಲಿ ಮುಂದುವರಿಯಲು ಬಯಸುವ ವಿದ್ಯಾರ್ಥಿಗಳಿಗೆ ಕರ್ನಾಟಕ ವಿಶ್ವವಿದ್ಯಾಲಯ ಅವಕಾಶ ಕಲ್ಪಿಸಿದೆ. 2026-27ನೇ ಶೈಕ್ಷಣಿಕ ವರ್ಷದ ಪಿಎಚ್‌ಡಿ (ಡಾಕ್ಟರ್ ಆಫ್ ಫಿಲಾಸಫಿ) ಪದವಿ ಪ್ರವೇಶಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ವಿಶ್ವವಿದ್ಯಾಲಯ ಅಧಿಸೂಚನೆ ಹೊರಡಿಸಿದೆ.ಈ ನಿಟ್ಟಿನಲ್ಲಿ ಈ ಮಾಹಿತಿ ನಿಮ್ಮ ಗಮನಕ್ಕಾಗಿ ನೀಡಲಾಗಿದೆ

ಪಿಎಚ್‌ಡಿ ಮಾಡಲು ಏನಿರಬೇಕು ಅರ್ಹತೆ?

ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ.55ರಷ್ಟು ಅಂಕಗಳನ್ನು ಪಡೆದ ಅಭ್ಯರ್ಥಿಗಳು ಪಿಎಚ್‌ಡಿ ಪ್ರವೇಶಾತಿಗೆ ಅರ್ಜಿ ಸಲ್ಲಿಸಬಹುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಅಂಕಗಳಲ್ಲಿ ಶೇ.5ರಷ್ಟು ಸಡಿಲಿಕೆ ನೀಡಲಾಗಿದೆ.

4 ವರ್ಷ ಅಥವಾ 8 ಸೆಮಿಸ್ಟರ್‌ಗಳ ಸ್ನಾತಕ ಪದವಿ ಪೂರ್ಣಗೊಳಿಸಿದ ಬಳಿಕ ಸಂಬಂಧಪಟ್ಟ ಅಥವಾ ಸಹವರ್ತಿ ವಿಷಯದಲ್ಲಿ 1 ವರ್ಷ ಅಥವಾ 2 ಸೆಮಿಸ್ಟರ್‌ಗಳ ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಅದೇ ರೀತಿ 3 ವರ್ಷಗಳ ಸ್ನಾತಕ ಪದವಿಯ ಬಳಿಕ ಸಂಬಂಧಪಟ್ಟ ಅಥವಾ ಸಹವರ್ತಿ ವಿಷಯದಲ್ಲಿ 2 ವರ್ಷ ಅಥವಾ 4 ಸೆಮಿಸ್ಟರ್‌ಗಳ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದವರಿಗೂ ಅವಕಾಶವಿದೆ.

ಸಂಬಂಧಿತ ಶಾಸನಬದ್ಧ ನಿಯಂತ್ರಣ ಸಂಸ್ಥೆಯಿಂದ ಸ್ನಾತಕೋತ್ತರ ಪದವಿಗೆ ತತ್ಸಮಾನವೆಂದು ಘೋಷಿಸಲಾದ ವಿದ್ಯಾರ್ಹತೆಯನ್ನು ಕನಿಷ್ಠ ಶೇ.55ರಷ್ಟು ಅಂಕಗಳೊಂದಿಗೆ ಅಥವಾ ತತ್ಸಮಾನ ಶ್ರೇಣಿಯೊಂದಿಗೆ ಪೂರ್ಣಗೊಳಿಸಿದವರೂ ಅರ್ಹರಾಗಿರುತ್ತಾರೆ.

ಮಾನ್ಯತೆ ಪಡೆದ ವಿದೇಶಿ ಶಿಕ್ಷಣ ಸಂಸ್ಥೆಗಳಿಂದ ತತ್ಸಮಾನ ವಿದ್ಯಾರ್ಹತೆ ಪಡೆದ ಅಭ್ಯರ್ಥಿಗಳಿಗೂ ನಿಗದಿತ ಮಾನದಂಡಗಳ ಅನ್ವಯ ಅವಕಾಶವಿದೆ. ಸಂಬಂಧಪಟ್ಟ ಅಥವಾ ಸಹವರ್ತಿ ವಿಷಯದಲ್ಲಿ ಕನಿಷ್ಠ ಶೇ.55ರಷ್ಟು ಅಂಕಗಳೊಂದಿಗೆ ಎಂ.ಫಿಲ್. ಪೂರ್ಣಗೊಳಿಸಿದ ಅಭ್ಯರ್ಥಿಗಳೂ ಪಿಎಚ್‌ಡಿ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ.

ಸ್ನಾತಕೋತ್ತರ ಪದವಿಯ ಫಲಿತಾಂಶವನ್ನು ಶ್ರೇಣಿ, ಕ್ರೆಡಿಟ್ ಅಥವಾ ಸಂಚಿತ ಪಾಯಿಂಟ್‌ಗಳ ರೂಪದಲ್ಲಿ ನೀಡಿದ್ದರೆ, ನಿಗದಿತ ಗ್ರೇಡ್ ಪಾಯಿಂಟ್ ಮಾನದಂಡಗಳಿಗೆ ಅನುಗುಣವಾಗಿ ಅವುಗಳನ್ನು ಶೇಕಡಾವಾರು ಅಂಕಗಳಿಗೆ ಪರಿವರ್ತಿಸಬೇಕಿದೆ.

ಉದ್ಯೋಗದಲ್ಲಿರುವವರೂ ಪಿಎಚ್‌ಡಿ ಮಾಡಬಹುದೇ?

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪೂರ್ಣಾವಧಿ ಹಾಗೂ ಅರೆಕಾಲಿಕ ಎಂಬ 2 ಅಧ್ಯಯನ ವಿಧಾನಗಳಲ್ಲಿ ಪಿಎಚ್‌ಡಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಪೂರ್ಣಾವಧಿ ಪಿಎಚ್‌ಡಿಗೆ ನೋಂದಾಯಿಸಿಕೊಳ್ಳುವ ಅಭ್ಯರ್ಥಿಗಳು ಮಹಾಪ್ರಬಂಧ ಸಲ್ಲಿಸುವವರೆಗೆ ಸಂಬಂಧಪಟ್ಟ ವಿಭಾಗದಲ್ಲಿ ನಿಯಮಿತವಾಗಿ ಕಾರ್ಯನಿರ್ವಹಿಸಬೇಕು.

ವಿಶ್ವವಿದ್ಯಾಲಯದ ವಿಭಾಗಗಳಲ್ಲಿ ಅಥವಾ ವಿಶ್ವವಿದ್ಯಾಲಯದ ಸಂಯೋಜಿತ ಹಾಗೂ ಘಟಕ ಕಾಲೇಜುಗಳಲ್ಲಿ ಕನಿಷ್ಠ 2 ವರ್ಷಗಳ ಸೇವೆ ಸಲ್ಲಿಸಿರುವ ಖಾಯಂ ಅಧ್ಯಾಪಕರು ಅರೆಕಾಲಿಕ ಪಿಎಚ್‌ಡಿಗೆ ಅರ್ಜಿ ಸಲ್ಲಿಸಬಹುದು. ಕೇಂದ್ರ ಅಥವಾ ರಾಜ್ಯ ಸರ್ಕಾರದ ಮಂಡಳಿಗಳು ಹಾಗೂ ವಿಶ್ವವಿದ್ಯಾಲಯಗಳಿಂದ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಖಾಯಂ ಅಧ್ಯಾಪಕರಿಗೂ ಅವಕಾಶವಿದೆ. ಅಂತಹ ಅಭ್ಯರ್ಥಿಗಳು ತಮ್ಮ ಸಂಸ್ಥೆಯಿಂದ ನಿರಾಪೇಕ್ಷಣಾ ಪತ್ರ ಸಲ್ಲಿಸಬೇಕಿದೆ.

ನೋಂದಾಯಿತ ಸಂಸ್ಥೆ ಅಥವಾ ಉದ್ಯಮದಲ್ಲಿ 4 ವರ್ಷಗಳ ನಿಯಮಿತ ಸೇವೆ ಹೊಂದಿರುವ ಹಾಗೂ ಅರ್ಹತಾ ಪದವಿ ಪೂರ್ಣಗೊಳಿಸಿ ಕನಿಷ್ಠ 4 ವರ್ಷಗಳಾಗಿರುವ ಅಧ್ಯಾಪಕೇತರ ಅಭ್ಯರ್ಥಿಗಳಿಗೂ ಅರೆಕಾಲಿಕ ಪಿಎಚ್‌ಡಿಗೆ ಅವಕಾಶ ಕಲ್ಪಿಸಲಾಗಿದೆ.

ಅರ್ಹತಾ ಪದವಿ ಪಡೆದ ಬಳಿಕ 4 ವರ್ಷಗಳ ಸೇವೆ ಸೇರಿದಂತೆ ಇತರ ಷರತ್ತುಗಳನ್ನು ಪೂರೈಸುವ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಕಚೇರಿಗಳು, ಸರ್ಕಾರಿ ಸ್ವಾಮ್ಯದ ಸ್ವಾಯತ್ತ ಸಂಸ್ಥೆಗಳಲ್ಲಿ ಖಾಯಂ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ಆಡಳಿತ ಸಿಬ್ಬಂದಿ ಹಾಗೂ ಬೋಧಕೇತರ ವೃತ್ತಿಪರರೂ ಅರ್ಜಿ ಸಲ್ಲಿಸಬಹುದು.

ವಿಶ್ವವಿದ್ಯಾಲಯದಲ್ಲಿ ಖಾಯಂ ಆಧಾರದ ಮೇಲೆ ನೇಮಕಗೊಂಡು ಸೇವೆ ಕಾಯಂಗೊಂಡಿರುವ ಸಂಶೋಧನಾ ಸಹಾಯಕರು, ತಾಂತ್ರಿಕ ಸಹಾಯಕರು ಹಾಗೂ 4 ವರ್ಷಗಳ ಸೇವೆ ಹೊಂದಿರುವ ಕೇಂದ್ರ ಸರ್ಕಾರದ ಸಶಸ್ತ್ರ ಪಡೆಗಳು ಮತ್ತು ಅರೆಸೇನಾ ಪಡೆಗಳ ಅಧಿಕಾರಿಗಳಿಗೂ ಅವಕಾಶವಿದೆ.

ಅಭ್ಯರ್ಥಿಗಳು ತಮ್ಮ ಉದ್ಯೋಗದ ಅವಧಿ ಮತ್ತು ಸ್ವರೂಪದ ಕುರಿತು ಉದ್ಯೋಗದಾತರಿಂದ ದೃಢೀಕರಣ ಪತ್ರ ಹಾಗೂ ನಿರಾಕ್ಷೇಪಣಾ ಪ್ರಮಾಣಪತ್ರ ಸಲ್ಲಿಸಬೇಕು. ನೋಂದಣಿಯನ್ನು ಮುಂದುವರಿಸಲು ಪ್ರತಿ ವರ್ಷ ಅರ್ಜಿಯೊಂದಿಗೆ ಉದ್ಯೋಗದಾತರಿಂದ ಸೇವಾ ದೃಢೀಕರಣ ಪತ್ರ ಸಲ್ಲಿಸುವುದು ಅಗತ್ಯವಾಗಿದೆ.

ಪಿಎಚ್‌ಡಿ ಪ್ರವೇಶ ಪರೀಕ್ಷೆ ಹೇಗಿರುತ್ತದೆ?

ಸ್ನಾತಕೋತ್ತರ ಪದವಿಯಲ್ಲಿ ನಿಗದಿತ ಕನಿಷ್ಠ ಅಂಕಗಳನ್ನು ಪಡೆದ ಅರ್ಜಿದಾರರು ಪ್ರವೇಶ ಪರೀಕ್ಷೆಗೆ ಹಾಜರಾಗಬೇಕು. ಆದರೆ, ಸರ್ಕಾರಿ ಪ್ರಾಯೋಜಿತ ಅಭ್ಯರ್ಥಿಗಳು, ವಿದೇಶಿ ಅಭ್ಯರ್ಥಿಗಳು, UGC/UGC-CSIR/JRF, NET, SLET (ಕರ್ನಾಟಕ), SET (ಕರ್ನಾಟಕ), GATE, GRE, CEED ಪರೀಕ್ಷೆಗಳಲ್ಲಿ ಅರ್ಹತೆ ಪಡೆದವರಿಗೆ ಹಾಗೂ ಪ್ರವೇಶ ಪರೀಕ್ಷೆಯ ಮೂಲಕ ಪ್ರವೇಶ ಪಡೆದು ಎಂ.ಫಿಲ್. ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಪ್ರವೇಶ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುತ್ತದೆ.

ವಿನಾಯಿತಿ ಹೊಂದಿರುವ ಅಭ್ಯರ್ಥಿಗಳು ಪ್ರವೇಶ ಪರೀಕ್ಷೆಗೆ ಹಾಜರಾಗಲು ಬಯಸಿದಲ್ಲಿ ನಿಗದಿತ ಶುಲ್ಕ ಪಾವತಿಸಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕು.

ಪಿಎಚ್‌ಡಿ ಪ್ರವೇಶ ಪರೀಕ್ಷೆಯು ತಲಾ 50 ಅಂಕಗಳ 2 ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಮೊದಲ ಪ್ರಶ್ನೆಪತ್ರಿಕೆಯಲ್ಲಿ ದತ್ತಾಂಶ ವಿಶ್ಲೇಷಣೆ, ಭಾಷಾ ಗ್ರಹಿಕೆ ಮತ್ತು ತಾರ್ಕಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ 50 ಬಹು ಆಯ್ಕೆ ಪ್ರಶ್ನೆಗಳಿರುತ್ತವೆ. ಎರಡನೇ ಪ್ರಶ್ನೆಪತ್ರಿಕೆಯಲ್ಲಿ ಮುಖ್ಯ ಅಥವಾ ಸಹವರ್ತಿ ವಿಷಯಗಳಿಗೆ ಸಂಬಂಧಿಸಿದ 50 ಬಹು ಆಯ್ಕೆ ಪ್ರಶ್ನೆಗಳಿರುತ್ತವೆ.

ಪ್ರವೇಶ ಪರೀಕ್ಷೆಯ ಒಟ್ಟು ಅವಧಿ 120 ನಿಮಿಷಗಳಾಗಿರುತ್ತದೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಂಬಂಧಪಟ್ಟ ವಿಭಾಗಗಳಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ.

ಯಾವ ವಿಷಯಗಳಲ್ಲಿ ಪಿಎಚ್‌ಡಿ ಮಾಡಲು ಅವಕಾಶವಿದೆ?

ಕಲಾ ನಿಕಾಯದಲ್ಲಿ ಇಂಗ್ಲಿಷ್ ವಿಷಯದಲ್ಲಿ 20, ಕನ್ನಡದಲ್ಲಿ 4 ಹಾಗೂ ಹಿಂದಿಯಲ್ಲಿ 2 ಸೇರಿದಂತೆ ಒಟ್ಟು 26 ಸಂಶೋಧನಾ ಸ್ಥಾನಗಳು ಖಾಲಿ ಇವೆ. ವಾಣಿಜ್ಯ ನಿಕಾಯದಲ್ಲಿ 6 ಸ್ಥಾನಗಳು ಲಭ್ಯವಿವೆ.

ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದಲ್ಲಿ ಅನ್ವಯಿಕ ಅನುವಂಶಶಾಸ್ತ್ರ 4, ಸಸ್ಯಶಾಸ್ತ್ರ 3, ಜೀವರಸಾಯನಶಾಸ್ತ್ರ 10, ಜೈವಿಕ ತಂತ್ರಜ್ಞಾನ ಮತ್ತು ಸೂಕ್ಷ್ಮಜೀವಶಾಸ್ತ್ರ 6, ರಸಾಯನಶಾಸ್ತ್ರ 23, ಗಣಕ ವಿಜ್ಞಾನ 6, ಗಣಿತಶಾಸ್ತ್ರ 27, ಕಾರವಾರದ ಸ್ನಾತಕೋತ್ತರ ಕೇಂದ್ರದ ಕಡಲಜೀವಶಾಸ್ತ್ರ 5, ಭೌತಶಾಸ್ತ್ರ 3, ಮನೋವಿಜ್ಞಾನ 6, ಸಂಖ್ಯಾಶಾಸ್ತ್ರ 11 ಹಾಗೂ ಪ್ರಾಣಿಶಾಸ್ತ್ರದಲ್ಲಿ 3 ಸೇರಿದಂತೆ ಒಟ್ಟು 107 ಸಂಶೋಧನಾ ಸ್ಥಾನಗಳು ಲಭ್ಯವಿವೆ.

ಪಿಎಚ್‌ಡಿಗೆ ಅರ್ಜಿ ಸಲ್ಲಿಸುವುದು ಹೇಗೆ?

ಅಭ್ಯರ್ಥಿಗಳು ಕರ್ನಾಟಕ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ www.kud.ac.in ಮೂಲಕ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ, ಅಗತ್ಯ ದಾಖಲೆಗಳು ಹಾಗೂ ಅರ್ಜಿ ಸಂಸ್ಕರಣಾ ಶುಲ್ಕ ಪಾವತಿಸಿದ ಆನ್‌ಲೈನ್ ಚಲನ್‌ನೊಂದಿಗೆ ಸಂಬಂಧಪಟ್ಟ ಸ್ನಾತಕೋತ್ತರ ವಿಭಾಗದ ಅಧ್ಯಕ್ಷರಿಗೆ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಡಿಸೆಂಬರ್ 10, 2026 ಕೊನೆಯ ದಿನಾಂಕವಾಗಿದೆ. ಮಾನ್ಯವಾದ ಪ್ರಮಾಣಪತ್ರಗಳನ್ನು ಲಗತ್ತಿಸದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅಪೂರ್ಣ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.

ಅರ್ಜಿ ಶುಲ್ಕ ಎಷ್ಟು?

ಪಿಎಚ್‌ಡಿ ಪ್ರವೇಶಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 2,665 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಪೂರ್ಣಾವಧಿ ಪಿಎಚ್‌ಡಿಗೆ ಅರ್ಜಿ ಸಲ್ಲಿಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 1,330 ರೂ. ಶುಲ್ಕ ನಿಗದಿಪಡಿಸಲಾಗಿದೆ. ವಿದೇಶಿ ವಿದ್ಯಾರ್ಥಿಗಳು 5,330 ರೂ. ಪಾವತಿಸಬೇಕಿದೆ.

ಅಭ್ಯರ್ಥಿಗಳು ಎಸ್‌ಬಿಐ ಕಲೆಕ್ಟ್ (SBI Collect) ಮೂಲಕ ಆನ್‌ಲೈನ್‌ನಲ್ಲಿ ಶುಲ್ಕ ಪಾವತಿಸಬೇಕು. ಒಮ್ಮೆ ಪಾವತಿಸಿದ ಶುಲ್ಕವನ್ನು ಮರುಪಾವತಿಸಲಾಗುವುದಿಲ್ಲ.

ಇತರ ವಿಶ್ವವಿದ್ಯಾಲಯಗಳ ಅಭ್ಯರ್ಥಿಗಳು ಪಿಎಚ್‌ಡಿಗೆ ಆಯ್ಕೆಯಾದಲ್ಲಿ, ಪ್ರವೇಶಾತಿ ಸಮಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಶೈಕ್ಷಣಿಕ ವಿಭಾಗದಿಂದ ನೀಡಲಾದ ಅರ್ಹತಾ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಅಗತ್ಯ ದಾಖಲೆಗಳನ್ನು ಸಲ್ಲಿಸಿ ನಿಗದಿತ ಶುಲ್ಕ ಪಾವತಿಸುವ ಮೂಲಕ ಅರ್ಹತಾ ಪ್ರಮಾಣಪತ್ರವನ್ನು ಪಡೆದುಕೊಳ್ಳಬೇಕಿದೆ.

ಪಿಎಚ್‌ಡಿ ಪ್ರವೇಶಾತಿ ಪರೀಕ್ಷೆ ಯಾವಾಗ?

ನವೆಂಬರ್ 23, 2026ರಿಂದ ಅರ್ಜಿ ನಮೂನೆ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಡಿಸೆಂಬರ್ 10ರಂದು ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಡಿಸೆಂಬರ್ 24ರಂದು ಪ್ರವೇಶ ಪರೀಕ್ಷೆ ನಡೆಯಲಿದೆ. ಡಿಸೆಂಬರ್ 28ರಂದು ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

2027ರ ಜನವರಿ 2 ಮತ್ತು 4ರಂದು ಸಂದರ್ಶನ ನಡೆಯಲಿದ್ದು, ಜನವರಿ 5ರಂದು ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಆಯ್ಕೆ ಪಟ್ಟಿ ಪ್ರಕಟವಾದ ದಿನಾಂಕದಿಂದ 7 ದಿನಗಳೊಳಗೆ ಅಭ್ಯರ್ಥಿಗಳು ಪ್ರವೇಶಾತಿ ಪಡೆದುಕೊಳ್ಳಬೇಕು.

ನಿಗದಿತ ಅವಧಿಯೊಳಗೆ ಆಯ್ಕೆಯಾದ ಅಭ್ಯರ್ಥಿಗಳು ಪ್ರವೇಶಾತಿ ಪಡೆಯದಿದ್ದಲ್ಲಿ ಕಾಯ್ದಿರಿಸಿದ ಪಟ್ಟಿಯಲ್ಲಿರುವ ಅಭ್ಯರ್ಥಿಗಳನ್ನು ಪರಿಗಣಿಸಲಾಗುತ್ತದೆ. ಕಾಯ್ದಿರಿಸಿದ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ಆ ಪಟ್ಟಿ ಪ್ರಕಟವಾದ ದಿನಾಂಕದಿಂದ 7 ದಿನಗಳೊಳಗೆ ಶುಲ್ಕ ಪಾವತಿಸಬೇಕು.

ಒಂದು ವೇಳೆ ನಿಗದಿಪಡಿಸಿದ ಕೊನೆಯ ದಿನಾಂಕದಂದು ಸಾರ್ವಜನಿಕ ರಜೆ ಘೋಷಣೆಯಾದರೆ, ಮುಂದಿನ ಕೆಲಸದ ದಿನವೇ ಕೊನೆಯ ದಿನಾಂಕವಾಗಿರುತ್ತದೆ.

ಪಿಎಚ್‌ಡಿ ಪ್ರವೇಶಾತಿಗೆ ಸಂಬಂಧಿಸಿದ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸಂಬಂಧಪಟ್ಟ ವಿಭಾಗದ ಸೂಚನಾ ಫಲಕ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಈ ಸಂಬಂಧ ಪ್ರತ್ಯೇಕವಾಗಿ ಯಾವುದೇ ಪತ್ರವ್ಯವಹಾರ ನಡೆಸಲಾಗುವುದಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪಿಎಚ್‌ಡಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸಿಗುತ್ತದೆಯೇ?

ಪಿಎಚ್‌ಡಿ ಕಾರ್ಯಕ್ರಮಕ್ಕೆ ಆಯ್ಕೆಯಾದ ಮಾತ್ರಕ್ಕೆ ಫೆಲೋಶಿಪ್ ಅಥವಾ ವಿದ್ಯಾರ್ಥಿವೇತನ ದೊರೆಯುವ ಖಾತರಿ ಇರುವುದಿಲ್ಲ. ಫೆಲೋಶಿಪ್ ಹಾಗೂ ವಿದ್ಯಾರ್ಥಿವೇತನ ಮಂಜೂರಾತಿಯು ನಿಧಿ ಮತ್ತು ಯೋಜನೆಗಳ ಲಭ್ಯತೆ ಹಾಗೂ ವಿಶ್ವವಿದ್ಯಾಲಯದ ಇತರ ಮಾನದಂಡಗಳಿಗೆ ಒಳಪಟ್ಟಿರುತ್ತದೆ.

ಪಿಎಚ್‌ಡಿ ಕೋರ್ಸ್‌ಗೆ ಪ್ರವೇಶ ಪಡೆದ ಎಲ್ಲ ಅಭ್ಯರ್ಥಿಗಳು ಪೂರ್ಣ ಶುಲ್ಕವನ್ನು ಪಾವತಿಸಬೇಕು. ಪೂರ್ಣಾವಧಿ ವಿದ್ಯಾರ್ಥಿಗಳು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ (SSP) ಮೂಲಕ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕರ್ನಾಟಕ ವಿಶ್ವವಿದ್ಯಾಲಯದ ಸಂಬಂಧಪಟ್ಟ ವಿಭಾಗಗಳನ್ನು ಸಂಪರ್ಕಿಸಬಹುದು. ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ www.kud.ac.in ಮೂಲಕವೂ ಮಾಹಿತಿ ಪಡೆದುಕೊಳ್ಳಬಹುದು.

ವೆಬ್‌ಸೈಟ್: www.kud.ac.in

ದೂರವಾಣಿ: 0836-2215270

ಇಮೇಲ್: [email protected]

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor