ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಅಡಕೆ ಹಾಗೂ ವೀಳ್ಯದೆಲೆ ಸೇರಿದಂತೆ ವಿವಿಧ ಗಿಡಮೂಲಿಕೆಗಳನ್ನು ಬಳಸಿ ತಯಾರಿಸಲಾದ ಪೂಗಸಾರಂ ಜೆಲ್ ಕ್ಯಾನ್ಸರ್ ಗಡ್ಡೆಗಳ ಬೆಳವಣಿಗೆಯನ್ನು ನಿಯಂತ್ರಿಸುವ ಗುಣ ಹೊಂದಿರುವ ಕುರಿತು ಮಂಗಳೂರಿನ ವಿಜ್ಞಾನಿಗಳ ತಂಡ ನಡೆಸಿದ ಪ್ರಾಯೋಗಿಕ ಸಂಶೋಧನೆಯಲ್ಲಿ ಸಕಾರಾತ್ಮಕ ಫಲಿತಾಂಶ ದೊರೆತಿದೆ ಎಂದು ತಿಳಿದುಬಂದಿದೆ.
ದಕ್ಷಿಣ ಕನ್ನಡದ ಅಳಿಕೆಯ ಜೆಡ್ಡು ಆಯುರ್ವೇದ ಸಂಶೋಧನಾ ಕೇಂದ್ರ ಹಾಗೂ ಮಂಗಳೂರಿನ ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ವಿಜ್ಞಾನಿಗಳ ತಂಡ ಈ ಅಧ್ಯಯನ ಕೈಗೊಂಡಿದೆ. ಚಿಕ್ಕ ಇಲಿಗಳ ಮೇಲೆ ನಡೆಸಿದ ಪ್ರಯೋಗದ ಫಲಿತಾಂಶಗಳನ್ನು 2026ರ ಜನವರಿ-ಜೂನ್ ಅವಧಿಯ ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಫಾರ್ಮಸಿ ರಿಸರ್ಚ್ ಆ್ಯಂಡ್ ಟೆಕ್ನಾಲಜಿ (ಐಜೆಆರ್‌ಫ್‌ಟಿ) ವೈಜ್ಞಾನಿಕ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸಲಾಗಿದೆ.
ಕ್ಯಾನ್ಸರ್ ಗಡ್ಡೆಗಳ ಮೇಲೆ ಅಡಕೆ ಮತ್ತು ವೀಳ್ಯದೆಲೆಯ ಪೂಗಸಾರಂ ಜೆಲ್ ಸಂಶೋದನೆ
ಅಡಕೆಯಲ್ಲಿರುವ ಕ್ಯಾನ್ಸರ್ ವಿರೋಧಿ ಗುಣಗಳ ಕುರಿತು ಈ ಹಿಂದೆಯೂ ಹಲವು ಅಧ್ಯಯನಗಳು ನಡೆದಿವೆ. ಮತ್ತೊಂದೆಡೆ, ವಿದೇಶಗಳಲ್ಲಿ ನಡೆದ ಸಂಶೋಧನೆಗಳಲ್ಲಿ ಅಡಕೆಯನ್ನು ಕ್ಯಾನ್ಸರ್‌ಕಾರಕ ಎಂದು ಗುರುತಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಡಕೆಯಲ್ಲಿರುವ ಸಂಭಾವ್ಯ ಔಷಧೀಯ ಗುಣಗಳ ಕುರಿತು ನೂತನ ಅಧ್ಯಯನ ನಡೆಸಲಾಗಿದೆ.
ವಿಜ್ಞಾನಿಗಳ ತಂಡವು ಅಡಕೆ ಮತ್ತು ವೀಳ್ಯದೆಲೆಗಳನ್ನು ಪ್ರಮುಖ ಪದಾರ್ಥಗಳನ್ನಾಗಿ ಬಳಸಿಕೊಂಡು, ಅವುಗಳೊಂದಿಗೆ ಇತರ 7ರಿಂದ 8 ಗಿಡಮೂಲಿಕೆಗಳನ್ನು ಬೆರೆಸಿ ‘ಪೂಗಸಾರಂ’ ಹೆಸರಿನ ಬಹುಮೂಲಿಕಾ ಜೆಲ್ (ಪಾಲಿಹರ್ಬಲ್ ಜೆಲ್) ಸಿದ್ಧಪಡಿಸಿದೆ.
ಈ ಜೆಲ್‌ನ ಕ್ಯಾನ್ಸರ್ ವಿರೋಧಿ ಗುಣಗಳನ್ನು ಪರಿಶೀಲಿಸಲು ಚಿಕ್ಕ ಇಲಿಗಳ ಮೇಲೆ ಪ್ರಯೋಗ ನಡೆಸಲಾಗಿದೆ. ಮೊದಲಿಗೆ ಡಿಎಂಬಿಎ ಎಂಬ ಕ್ಯಾನ್ಸರ್‌ಕಾರಕ ರಾಸಾಯನಿಕವನ್ನು ಬಳಸಿ ಇಲಿಗಳ ಕೆಳತುಟಿಗಳಲ್ಲಿ ಕ್ಯಾನ್ಸರ್ ಉಂಟುಮಾಡಲಾಗಿತ್ತು. ನಂತರ ನಿರಂತರವಾಗಿ 8 ವಾರಗಳ ಕಾಲ ಪ್ರತಿದಿನ ಪೂಗಸಾರಂ ಜೆಲ್ ಹಚ್ಚಿ ಅದರ ಪರಿಣಾಮವನ್ನು ಪರಿಶೀಲಿಸಲಾಗಿದೆ.
ಪ್ರಯೋಗದಲ್ಲಿ ಕ್ಯಾನ್ಸರ್ ಗಡ್ಡೆಗಳ ಗಾತ್ರ ಹಾಗೂ ಹರಡುವಿಕೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರುವುದು ಕಂಡುಬಂದಿದೆ ಎಂದು ಸಂಶೋಧಕರ ತಂಡ ತಿಳಿಸಿದೆ. ಕೆಲವು ಇಲಿಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಸಿಸ್ಪ್ಲಾಟಿನ್ ಔಷಧಕ್ಕಿಂತಲೂ ಪೂಗಸಾರಂ ಜೆಲ್ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದೆ ಎಂದು ಸಂಶೋಧಕರು ಹೇಳಿಕೊಂಡಿದ್ದಾರೆ.
ಮಂಗಳೂರಿನ ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ವಿಜ್ಞಾನಿ ಡಾ. ಎಸ್. ಕೇಶವ ಭಟ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಯೇನಪೋಯ ವಿಶ್ವವಿದ್ಯಾಲಯದ ಪ್ರಯೋಗಾಲಯದಲ್ಲಿ ಕ್ಯಾನ್ಸರ್ ಕೋಶಗಳ ಮೇಲೆ ನಡೆಸಿದ ಪ್ರಯೋಗದಲ್ಲಿ ಸಕಾರಾತ್ಮಕ ಫಲಿತಾಂಶ ದೊರೆತ ಬಳಿಕ ಇಲಿಗಳ ಮೇಲೆ ಪೂಗಸಾರಂ ಜೆಲ್ ಬಳಸಿ ಅಧ್ಯಯನ ನಡೆಸಲಾಯಿತು ಎಂದು ತಿಳಿಸಿದ್ದಾರೆ.
ಇಲಿಗಳ ಮೇಲಿನ ಪ್ರಯೋಗದಲ್ಲಿ ನಿರೀಕ್ಷೆಗೂ ಮೀರಿದ ಫಲಿತಾಂಶ ದೊರೆತಿದ್ದು, ಸಂಶೋಧನಾ ವರದಿಯನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೆ ಸಲ್ಲಿಸಲಾಗಿದೆ. ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ (ಸಿಪಿಸಿಆರ್‌ಐ) ಕೈಗೊಂಡಿರುವ ಸಂಶೋಧನೆಗೂ ಈ ಅಧ್ಯಯನ ಬಲ ನೀಡಿದೆ
ಮಾನವರ ಮೇಲಿನ ಪ್ರಯೋಗ ಇನ್ನಷ್ಟೇ ನಡೆಯಬೇಕಿದೆ
ಇಲಿಗಳ ಮೇಲೆ ನಡೆಸಿದ ಈ ಪ್ರಯೋಗದಲ್ಲಿ ಸಕಾರಾತ್ಮಕ ಫಲಿತಾಂಶ ದೊರೆತಿದ್ದರೂ, ಅಡಕೆ ಜಗಿಯುವುದರಿಂದ ಮಾನವರಲ್ಲಿ ಕ್ಯಾನ್ಸರ್ ತಡೆಗಟ್ಟಬಹುದು ಎಂಬುದು ಸಾಬೀತಾಗಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಅಧೀನದ ಅಂತಾರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ (ಐಎಆರ್‌ಸಿ) ಅಡಕೆಯನ್ನು ಮಾನವರಲ್ಲಿ ಕ್ಯಾನ್ಸರ್ ಉಂಟುಮಾಡಬಲ್ಲ ಗ್ರೂಪ್-1 ಪದಾರ್ಥವೆಂದು ವರ್ಗೀಕರಿಸಿದೆ. ಹೀಗಾಗಿ ಪೂಗಸಾರಂ ಜೆಲ್‌ನ ಔಷಧೀಯ ಗುಣ ಹಾಗೂ ಅಡಕೆ ಸೇವನೆಯ ಪರಿಣಾಮಗಳನ್ನು ಪ್ರತ್ಯೇಕವಾಗಿ ಪರಿಗಣಿಸಬೇಕಿದೆ.
