ಸುದ್ದಿಯ ಸ್ಥಳ: Chikkamagaluru, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಹಾಸನ ಜಿಲ್ಲೆಯಿಂದ ಭದ್ರಾ ಅರಣ್ಯಕ್ಕೆ ಆನೆಗಳನ್ನು ತಂದು ಬಿಡುವ ಯೋಜನೆಯನ್ನು ವಿರೋಧಿಸಿ ನಯನಾ ಮೋಟಮ್ಮ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ಮೂವರು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಶಾಸಕರ ಬೇಡಿಕೆ ಸರಿ ಇದ್ದು, ಈ ವಿಚಾರವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನದಿಂದ 47 ಕಾಡಾನೆಗಳನ್ನು ಭದ್ರಾ ಅರಣ್ಯಕ್ಕೆ ತಂದು ಬಿಡುವ ವಿಚಾರವಾಗಿ ಬಹಳಷ್ಟು ಚರ್ಚೆ ನಡೆಯುತ್ತಿದೆ. ಈ ಕುರಿತಾಗಿ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಸೇರಿದಂತೆ ಮೂವರು ಶಾಸಕರು ರಾಜೀನಾಮೆ ನೀಡುವುದಾಗಿ ಸರ್ಕಾರವನ್ನು ಎಚ್ಚರಿಸಿದ್ದಾರೆ. ಭದ್ರಾ ಅರಣ್ಯ ಪ್ರದೇಶದಲ್ಲಿ ಆನೆ ದಾಳಿಯಿಂದ ಮೊದಲೇ ಜನರು ಹೈರಾಣಾಗಿದ್ದಾರೆ. ಆದರೂ ಸಹ ಅರಣ್ಯ ಇಲಾಖೆ ಈ ರೀತಿಯ ಯೋಜನೆ ರೂಪಿಸಿರುವುದು ಸರಿ ಇಲ್ಲ. ಆದ್ದರಿಂದ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.
ಮುಂದುವರೆದು ಮಾತನಾಡಿದ ಅವರು, ಕಾಡಾನೆಗಳ ನಿರಂತರ ದಾಳಿಯಿಂದ ಹೊಲ-ಗದ್ದೆಗಳು ನಾಶವಾಗುತ್ತಿದ್ದು, ಮಲೆನಾಡು ಭಾಗದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸೂಕ್ತ ಜಮೀನನ್ನು ಗುರುತಿಸಿ ಅಲ್ಲಿ ಗಿಡ-ಮರಗಳನ್ನು ಬೆಳೆಸಿ ಆನೆ ಕ್ಯಾಂಪ್ಗಳನ್ನು ನಿರ್ಮಿಸಬೇಕು. ಅದನ್ನು ಬಿಟ್ಟು ಪಕ್ಕದ ಊರಿಗೆ ಆನೆಗಳನ್ನು ಓಡಿಸುವ ಅರಣ್ಯಾಧಿಕಾರಿಗಳ ನಡೆ ಸರಿಯಲ್ಲ ಎಂದು ಹೇಳಿದರು.
