ಕಾಪು ಬೀಚ್ ದುರಂತ: ಸಮುದ್ರದಲ್ಲಿ ಕೊಚ್ಚಿಹೋಗಿದ್ದ ಹೊಸನಗರದ ಯುವಕನ ಶವ ಪತ್ತೆ; ಬಾಲಕನಿಗಾಗಿ ಮುಂದುವರಿದ ಶೋಧ

ಹಂಚಿಕೊಳ್ಳಿ
WhatsApp Facebook X Telegram
Udupi Kaup Beach Tragedy
Udupi Kaup Beach Tragedy

ಸುದ್ದಿಯ ಸ್ಥಳ: Hosanagara, Shivamogga, Karnataka

ಮಲೆನಾಡುಟುಡೆ ಸುದ್ದಿ / ಶಿವಮೊಗ್ಗ : ಉಡುಪಿ ಜಿಲ್ಲೆಯ ಕಾಪು ಲೈಟ್‌ಹೌಸ್ ಬೀಚ್‌ನಲ್ಲಿ ಭಾನುವಾರ ಸಂಜೆ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಇಬ್ಬರ ಪೈಕಿ, ಶಿವಮೊಗ್ಗ ಜಿಲ್ಲೆ ಹೊಸನಗರ ಮೂಲದ ಯುವಕನ ಮೃತದೇಹ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ. ಮತ್ತೋರ್ವ 15 ವರ್ಷದ ಬಾಲಕನಿಗಾಗಿ ಕರಾವಳಿ ಕಾವಲು ಪಡೆ ಹಾಗೂ ಜೀವ ರಕ್ಷಕ ದಳದ ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ. 

ಮೃತ ಯುವಕನನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾವಿನಕೊಪ್ಪ ಗ್ರಾಮದ ಅಲ್ತಾಫ್ ಅವರ ಪುತ್ರ ಸಮೀರ್ (20) ಎಂದು ಗುರುತಿಸಲಾಗಿದೆ. ಸಮುದ್ರದಲ್ಲಿ ನಾಪತ್ತೆಯಾಗಿರುವ ಮತ್ತೋರ್ವ ಬಾಲಕನನ್ನು ದಾವಣಗೆರೆಯ ಅಹಮ್ಮದಿ ನಗರದ ಝಿಯಾವುಲ್ಲಾ ಅವರ ಪುತ್ರ ಮಲ್ಲಿಕ್ ರಿಹಾನ್ (15) ಎಂದು ಗುರುತಿಸಲಾಗಿದೆ. 

ದಾವಣಗೆರೆಯಿಂದ ಒಟ್ಟು 12 ಮಂದಿಯ ತಂಡವೊಂದು ಪ್ರವಾಸದ ನಿಮಿತ್ತ ಕಾಪು ಬೀಚ್‌ಗೆ ಆಗಮಿಸಿತ್ತು. ಭಾನುವಾರ ಸಂಜೆ ಈ ತಂಡದಲ್ಲಿದ್ದ ಐವರು ಯುವಕರು ಸಮುದ್ರದಲ್ಲಿ ಈಜಲು ನೀರಿಗಿಳಿದಿದ್ದರು. ಈ ವೇಳೆ ಏಕಾಏಕಿ ಅಪ್ಪಳಿಸಿದ ಬೃಹತ್ ಅಲೆಗಳ ಹೊಡೆತಕ್ಕೆ ಸಿಲುಕಿ ಮೂವರು ಯುವಕರು ಆಳ ಸಮುದ್ರಕ್ಕೆ ಕೊಚ್ಚಿಕೊಂಡು ಹೋಗಿದ್ದರು. 

ಯುವಕರು ನೀರಿನಲ್ಲಿ ಕೊಚ್ಚಿಹೋಗುತ್ತಿರುವುದನ್ನು ಗಮನಿಸಿದ ಬೀಚ್‌ನ ಜೀವ ರಕ್ಷಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಮೂವರಲ್ಲಿ ಓರ್ವನನ್ನು ಪ್ರಾಣಾಪಾಯದಿಂದ ಸುರಕ್ಷಿತವಾಗಿ ರಕ್ಷಿಸಿದ್ದರು. ಆದರೆ, ಸಮೀರ್ ಹಾಗೂ ಮಲ್ಲಿಕ್ ರಿಹಾನ್ ಅಲೆಗಳ ರಭಸಕ್ಕೆ ಸಿಲುಕಿ ನಾಪತ್ತೆಯಾಗಿದ್ದರು. 

ಭಾನುವಾರ ಸಂಜೆಯಿಂದಲೇ ಕರಾವಳಿ ಕಾವಲು ಪಡೆ ಹಾಗೂ ಸ್ಥಳೀಯ ಮೀನುಗಾರರ ನೆರವಿನೊಂದಿಗೆ ನಾಪತ್ತೆಯಾದವರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಇದೀಗ ಸೋಮವಾರ ಬೆಳಗ್ಗೆ ಸಮೀರ್ ಅವರ ಮೃತದೇಹ ದಡಕ್ಕೆ ಬಂದು ತಲುಪಿದ್ದು, ನಾಪತ್ತೆಯಾಗಿರುವ ದಾವಣಗೆರೆ ಮೂಲದ ಬಾಲಕ ಮಲ್ಲಿಕ್ ರಿಹಾನ್ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor