ಶಿವಮೊಗ್ಗ : ಎಂ. ಶ್ರೀಕಾಂತ್ ಅವರ ಸೇವಾ ಸ್ಮರಣಾರ್ಥ ಗಾರಾ ಫೌಂಡೇಶನ್‌ನಿಂದ ಮಾರ್ನಾಮಿಬೈಲು ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್‌ಬುಕ್ ವಿತರಣೆ!

ಹಂಚಿಕೊಳ್ಳಿ
WhatsApp Facebook X Telegram
Gara Foundation Gifts Free Notebooks to Students
Gara Foundation Gifts Free Notebooks to Students

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಕಾಂಗ್ರೆಸ್ ಮುಖಂಡರಾದ ಎಂ. ಶ್ರೀಕಾಂತ್ ಅವರ ಸಮಾಜಮುಖಿ ಸೇವೆಗಳ ಸ್ಮರಣಾರ್ಥವಾಗಿ ಗಾರಾ ಫೌಂಡೇಶನ್ ವತಿಯಿಂದ ಶಿವಮೊಗ್ಗ ನಗರದ ಮಾರ್ನಾಮಿಬೈಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್‌ಗಳನ್ನು ವಿತರಿಸಲಾಯಿತು. 

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕಿ ಪೈಜುನ್ನಿಸಾ ಅವರು, ಮಾರ್ನಾಮಿಬೈಲಿನ ಈ ಸರ್ಕಾರಿ ಶಾಲೆಯು ಸ್ವಾತಂತ್ರ್ಯ ಪೂರ್ವದ ಇತಿಹಾಸ ಹೊಂದಿದ್ದು, ಮುಂಬರುವ 2030ನೇ ಇಸವಿಗೆ ಶತಮಾನೋತ್ಸವ (100 ವರ್ಷ) ಪೂರೈಸಲಿದೆ ಎಂದರು. ಲಕ್ಷಾಂತರ ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನ ನೀಡಿದ ಈ ಐತಿಹಾಸಿಕ ಶಾಲೆಯಲ್ಲಿ ಕಲಿತವರು ಇಂದು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಅಲ್ಲದೆ, ಇದೇ ಶಾಲೆಯ ಹಳೆಯ ವಿದ್ಯಾರ್ಥಿಗಳಾಗಿ ಇಂದಿನ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನಿರಂತರವಾಗಿ ನೆರವು ನೀಡುತ್ತಿರುವ ಗಾರಾ ಶ್ರೀನಿವಾಸ್ ಹಾಗೂ ಕೆ. ಶಿವಾಜಿ ಅವರಿಗೆ ಕೃತಜ್ಞತೆ ಸಲ್ಲಿಸಿ ಶುಭ ಹಾರೈಸಿದರು.

ಗಾರಾ ಫೌಂಡೇಶನ್‌ನ ವ್ಯವಸ್ಥಾಪಕರಾದ ಗಾರಾ ಶ್ರೀನಿವಾಸ್ ಮಾತನಾಡಿ, ಪ್ರತಿಯೊಂದು ಮಗುವಿನಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತೆಗೆದು, ಅದನ್ನು ಗುರುತಿಸಿ ಪೋಷಿಸುವುದೇ ನಿಜವಾದ ಶಿಕ್ಷಣ ಎಂದು ಅಭಿಪ್ರಾಯಪಟ್ಟರು. ಪ್ರತಿಯೊಂದು ನೋಟ್‌ಬುಕ್ ಆರಂಭದಲ್ಲಿ ಖಾಲಿಯಾಗಿಯೇ ಇರುತ್ತದೆ. ಆ ಖಾಲಿ ಪುಟಗಳನ್ನು ಉತ್ತಮ ಜ್ಞಾನದಿಂದ ಸರಿಯಾದ ರೀತಿಯಲ್ಲಿ ತುಂಬುವುದೇ ಮಾದರಿ ವಿದ್ಯಾಭ್ಯಾಸಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು. ಜಾತ್ಯಾತೀತ ಮತ್ತು ಪಕ್ಷಾತೀತವಾಗಿ ಕಳೆದ 25 ವರ್ಷಗಳಿಂದ ಬಹುಮುಖಿ ಸೇವೆಯ ಮೂಲಕ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿರುವ ಎಂ. ಶ್ರೀಕಾಂತ್ ಅವರ ಸೇವೆಯನ್ನು ಮಲೆನಾಡು ಎಂದಿಗೂ ಮರೆಯುವುದಿಲ್ಲ. ಅವರ ಸೇವಾ ಮನೋಭಾವವನ್ನು ಸ್ಮರಿಸುವ ಸಲುವಾಗಿಯೇ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿವರಿಸಿದರು. 

ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕಿಯರಾದ ಲಲಿತಮ್ಮ, ರಂಜಿತಾ, ಮಲೆನಾಡಿನ ಉದ್ಯಮಿ ಕೆ. ಶಿವಾಜಿ, ಸಮಾಜಸೇವಕರಾದ ಎನ್.ಎಂ. ಸಿಬ್ಗತ್‌ಉಲ್ಲಾ, ಗೋಲ್ಡ್ ಸ್ಮಿತ್ ಅನಿಲ್‌ಕುಮಾರ್ ಹೆಚ್.ಎಲ್. ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor