ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ನಗರದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟದ ಅತ್ಯುತ್ತಮ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಸ್ವಯಂಸೇವಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯೆ ಸಂಧ್ಯಾ ಕಾವೇರಿ ತಿಳಿಸಿದ್ದಾರೆ.
ಬೆಂಗಳೂರಿನ ರಾಜ್ಯ ಎನ್‌ಎಸ್‌ಎಸ್ ಕೋಶ ಪ್ರಕಟಿಸಿರುವ 2024 ಮತ್ತು 2025ನೇ ಸಾಲಿನ ಪ್ರಶಸ್ತಿಗಳಲ್ಲಿ ಕಾಲೇಜಿನ ಸಂಧ್ಯಾ ಕೆ.ಕೆ. ಅವರು 2024ನೇ ಸಾಲಿನ ಅತ್ಯುತ್ತಮ ಸ್ವಯಂಸೇವಕಿ ಪ್ರಶಸ್ತಿ ಹಾಗೂ ಹರ್ಷವರ್ಧನ ಅವರು 2025ನೇ ಸಾಲಿನ ಅತ್ಯುತ್ತಮ ಸ್ವಯಂಸೇವಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಮಾನಸ ಟ್ರಸ್ಟ್ ನಿರ್ದೇಶಕಿ ಡಾ. ರಜನಿ ಪೈ ಅವರು ವಿದ್ಯಾರ್ಥಿಗಳು ಹಾಗೂ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳಾದ ಸುಕೀರ್ತಿ ಮತ್ತು ಮೋಹನಕುಮಾರ್ ಅವರನ್ನು ಅಭಿನಂದಿಸಿದ್ದಾರೆ. ಶೈಕ್ಷಣಿಕ ನಿರ್ದೇಶಕರಾದ ಪ್ರೀತಿ ಶಾನಭಾಗ್, ವಾಮನ ಶಾನಭಾಗ್, ರಾಜೇಂದ್ರ ಚೆನ್ನಿ ಹಾಗೂ ಆಡಳಿತಾಧಿಕಾರಿ ರಾಮಚಂದ್ರ ಬಾಳಿಗ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
2024ರಲ್ಲಿ ನಡೆದ ರಾಜ್ಯಮಟ್ಟದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಸಂಧ್ಯಾ ಮತ್ತು ಹರ್ಷವರ್ಧನ ಅವರು ಕುವೆಂಪು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದರು. ಹರ್ಷವರ್ಧನ ಅವರು ರಾಜ್ಯ ಎನ್‌ಎಸ್‌ಎಸ್ ಪಡೆಯ ನೇತೃತ್ವವನ್ನೂ ವಹಿಸಿದ್ದರು. ಕುವೆಂಪು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಸಂಯೋಜಕ ಡಾ. ಶುಭ ಮರವಂತೆ ಅವರ ಪ್ರೋತ್ಸಾಹ ಹಾಗೂ ಕಾಲೇಜಿನ ಎನ್‌ಎಸ್‌ಎಸ್ ಘಟಕದ ತರಬೇತಿ ಮತ್ತು ಕಾರ್ಯಕ್ರಮಗಳು ಸ್ವಯಂಸೇವೆ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸಲು ಸಹಕಾರಿಯಾಗಿವೆ ಎಂದು ಪ್ರಶಸ್ತಿ ಪುರಸ್ಕೃತರು ತಿಳಿಸಿದ್ದಾರೆ.
ಪೋಷಕರು, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳು, ಉಪನ್ಯಾಸಕರು ಹಾಗೂ ಸಹಪಾಠಿಗಳ ಬೆಂಬಲವನ್ನು ಸ್ಮರಿಸಿರುವ ವಿದ್ಯಾರ್ಥಿಗಳು ಕೃತಜ್ಞತೆ ಸಲ್ಲಿಸಿದ್ದಾರೆ. ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಾಧಕರನ್ನು ಅಭಿನಂದಿಸಿದ್ದಾರೆ.
