ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಕೆಲವೊಂದು ಆಕಸ್ಮಿಕ ಘಟನೆಗಳು ನಮ್ಮೊಳಗಿನ ಮಾನವೀಯತೆಯನ್ನು ಹೊರಹಾಕಲು ಮತ್ತು ನಾವೇನೆಂಬುದನ್ನು ನಮಗೇ ಅರಿವಿಲ್ಲದಂತೆ ನಿರೂಪಿಸಲು ಒಂದು ವೇದಿಕೆಯಾಗುತ್ತವೆ. ಅದರಂತೆ ಇಲ್ಲೊಂದು ಆಕಸ್ಮಿಕ ಘಟನೆಯಲ್ಲಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಮಾನವೀಯತೆ ಮೆರೆದಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಹೌದು, ಸಚಿವ ಮಧು ಬಂಗಾರಪ್ಪನವರು ಕಾರ್ಯನಿಮಿತ್ತ ತೆರಳುತ್ತಿದ್ದಾಗ ಶಿವಮೊಗ್ಗದ ಗುಡ್ಡೆಕಲ್ ದೇವಸ್ಥಾನದ ಸಮೀಪ ಬೈಕ್ ಸವಾರನೊಬ್ಬ ಸ್ಕಿಡ್ ಆಗಿ ರಸ್ತೆಗೆ ಬಿದ್ದಿರುವುದನ್ನು ಗಮನಿಸಿದರು. ಕೂಡಲೇ ತಮ್ಮ ವಾಹನವನ್ನು ನಿಲ್ಲಿಸಿ ಆ ವ್ಯಕ್ತಿಯ ಬಳಿ ತೆರಳಿದರು. ನಂತರ ಆತನನ್ನು ಉಪಚರಿಸಿ ಯೋಗಕ್ಷೇಮ ವಿಚಾರಿಸಿದರು. ಅಷ್ಟೇ ಅಲ್ಲದೆ, ಆಸ್ಪತ್ರೆಗೆ ಹೋಗೋಣವೇ? ಎಂದು ಕೇಳಿ, ಮುಂದೆ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಸಲಹೆ ನೀಡಿದರು.
ಆ ವ್ಯಕ್ತಿಗೆ ಹೆಚ್ಚೇನೂ ಗಾಯಗಳಾಗದ ಕಾರಣ, ಸಚಿವರು ನಂತರ ಸ್ಥಳದಿಂದ ತೆರಳಿದರು. ಸಚಿವ ಸ್ಥಾನದ ಜವಾಬ್ದಾರಿಗಳ ನಡುವೆಯೂ ರಸ್ತೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಸಾಮಾನ್ಯ ಜನರ ನೋವಿಗೆ ತಕ್ಷಣ ಸ್ಪಂದಿಸಿದ ಮಧು ಬಂಗಾರಪ್ಪನವರ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
