ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಪ್ರತಿ ವರ್ಷದಂತೆ ಈ ವರ್ಷವೂ ಸಹ ಜಿಲ್ಲಾ ಪೊಲೀಸ್ ಕ್ರೀಡಾಕೂಟದ ಅಂಗವಾಗಿ ಪೊಲೀಸ್ ಇಲಾಖೆ ಹಾಗೂ ಶಿವಮೊಗ್ಗ ಪತ್ರಕರ್ತರ ತಂಡದ ನಡುವೆ ಹಮ್ಮಿಕೊಂಡಿದ್ದ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಯು ನೆರೆದಿದ್ದವರ ಗಮನ ಸೆಳೆಯಿತು. ಮಂಗಳವಾರ ಮಧ್ಯಾಹ್ನ ನಡೆದ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶಿವಮೊಗ್ಗ ಮಾಧ್ಯಮ ತಂಡ ಗೆಲುವನ್ನು ಸಾಧಿಸಿತು.
ಹೌದು, ನಿನ್ನೆ ಶಿವಮೊಗ್ಗದಲ್ಲಿ ಪತ್ರಕರ್ತರು ಹಾಗೂ ಪೊಲೀಸ್ ತಂಡದ ನಡುವೆ ಕ್ರಿಕೆಟ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪೊಲೀಸ್ ತಂಡ ನಿಗದಿತ 7 ಓವರ್‌ಗಳಲ್ಲಿ 59 ರನ್ ಕಲೆಹಾಕಿತು. ಪತ್ರಕರ್ತರ ತಂಡದ ಪರ ವೀರೇಶ್, ವಿನಯ್ ತೇಕ್ಲೆ ಹಾಗೂ ಎಚ್.ಎಸ್.ರಾಕೇಶ್ ಉತ್ತಮ ಬೌಲಿಂಗ್ ಪ್ರದರ್ಶಿಸಿದರು. ವೀರೇಶ್ 3 ವಿಕೆಟ್ ಮತ್ತು ವಿನಯ್ ಪುರದಾಳ್ 2 ವಿಕೆಟ್ ಪಡೆದರೆ, ರಾಕೇಶ್ 1 ವಿಕೆಟ್ ಕಬಳಿಸಿ ಪೊಲೀಸ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.
ಪೊಲೀಸ್ ತಂಡ ನೀಡಿದ 59 ರನ್‌ಗಳ ಟಾರ್ಗೆಟ್ ಬೆನ್ನಟ್ಟಿದ ಪತ್ರಕರ್ತರ ತಂಡಕ್ಕೆ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಗಣೇಶ್ ತಮ್ಮಡಿಹಳ್ಳಿ ಹಾಗೂ ಸತೀಶ್ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಸತೀಶ್ 20 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರೆ, ಬಳಿಕ ಕ್ರೀಸ್‌ಗೆ ಬಂದ ಶರತ್ ಪುರದಾಳ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದರು. ವೈಯಕ್ತಿಕವಾಗಿ 20 ರನ್ ಕಲೆಹಾಕಿದ ಅವರು ಕೊನೆಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.
ಇನ್ನು ಆರಂಭದಿಂದಲೂ ಜವಾಬ್ದಾರಿಯುತ ಆಟಕ್ಕೆ ಮೊರೆಹೋಗಿದ್ದ ನಾಯಕ ಗಣೇಶ್ ತಮ್ಮಡಿಹಳ್ಳಿ ಔಟ್ ಆಗದೆ ಮೂರು ಸಿಕ್ಸರ್ ಸಹಿತ 21 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
ಪೊಲೀಸ್ ತಂಡದ ವಿರುದ್ಧ ರೋಚಕ ಹೋರಾಟ ನಡೆಸಿದ ಶಿವಮೊಗ್ಗ ಮಾಧ್ಯಮ ತಂಡ ಗೆಲುವು ದಾಖಲಿಸುವ ಮೂಲಕ ಸಂಭ್ರಮಿಸಿತು.
