ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ನಗರದ ಅಶೋಕ ರಸ್ತೆಯ ಬೇಡರ ಬೀದಿಯಲ್ಲಿ ನೆಲೆಸಿರುವ ಶ್ರೀ ಎಲ್ಲಮ್ಮ ದೇವಸ್ಥಾನದ ಕಾಂಪೌಂಡ್ ಗೋಡೆಯ ಮೇಲೆ ಮಧ್ಯದ ಬೆರಳು ತೋರಿಸುವ ಅಸಭ್ಯ ಚಿತ್ರವನ್ನು ಬಿಡಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಪವಿತ್ರ ಧಾರ್ಮಿಕ ಕ್ಷೇತ್ರದ ಗೋಡೆಯ ಮೇಲೆ ನಡೆದಿರುವ ಕೃತ್ಯವು ದೇವಸ್ಥಾನದ ಆಡಳಿತ ಮಂಡಳಿಯ ಆಕ್ರೋಶಕ್ಕೆ ಕಾರಣವಾಗಿದೆ.
ದೇವಸ್ಥಾನದ ಗೋಡೆಯನ್ನು ಗುರಿಯಾಗಿಸಿಕೊಂಡು ಉದ್ದೇಶಪೂರ್ವಕವಾಗಿಯೇ ಈ ರೀತಿಯ ಅಸಭ್ಯ ಚಿಹ್ನೆಯನ್ನು ಚಿತ್ರಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಕೋಟ್ಯಂತರ ಭಕ್ತರ ಶ್ರದ್ಧಾ ಕೇಂದ್ರ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ದೇಗುಲದ ಗೋಡೆಯನ್ನು ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಸಮಿತಿಯು ಅಸಮಾಧಾನ ಹೊರಹಾಕಿದೆ.
ಇದನ್ನು ಕೇವಲ ಪುಂಡರ ಅಸಭ್ಯ ವರ್ತನೆ ಎಂದು ಹಗುರವಾಗಿ ಪರಿಗಣಿಸಬಾರದು. ಬದಲಾಗಿ, ಹಿಂದೂ ಧಾರ್ಮಿಕ ಕೇಂದ್ರವನ್ನೇ ಗುರಿಯಾಗಿಸಿಕೊಂಡು ಪೂರ್ವನಿಯೋಜಿತವಾಗಿ ಈ ಕೃತ್ಯ ಎಸಗಿರುವ ಸಾಧ್ಯತೆಯಿದೆ ಎಂದು ಸಮಿತಿ ಗಂಭೀರ ಆರೋಪ ಮಾಡಿದೆ. ದೇಗುಲದ ಗೋಡೆಯ ಮೇಲೆ ಇಂತಹ ವಿಕೃತ ಚಿಹ್ನೆ ಮೂಡಿಸಿರುವುದರ ಹಿಂದಿರುವ ದುರುದ್ದೇಶ ಹಾಗೂ ಅದರ ಹಿಂದಿರುವ ಕೈಗಳನ್ನು ತಕ್ಷಣವೇ ಪತ್ತೆಹಚ್ಚಬೇಕು ಎಂದು ಆಡಳಿತ ಮಂಡಳಿ ಒತ್ತಾಯಿಸಿದೆ.
ಉದ್ದೇಶಪೂರ್ವಕವಾಗಿ ಈ ದೇಗುಲವನ್ನೇ ಟಾರ್ಗೆಟ್ ಮಾಡಿ ಈ ಕೃತ್ಯ ಎಸಗಲಾಗಿದೆಯೇ ಎಂಬ ಆಯಾಮದಲ್ಲಿ ಪೊಲೀಸರು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರನ್ನು ಬಂಧಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ,
