ಶಿವಮೊಗ್ಗ : ಯಡಿಯೂರಪ್ಪರ ಆ ವಿಚಾರವಾಗಿ ಬಿವೈಆರ್​, ಹಾಗೆಯೇ ಬಿವೈವಿಗೆ ಸವಾಲು ಹಾಕಿದ ಸಚಿವ ಮಧು ಬಂಗಾರಪ್ಪ ? 

ಹಂಚಿಕೊಳ್ಳಿ
WhatsApp Facebook X Telegram
Minister Madhu Bangarappa Challenges BY Raghavendra
Minister Madhu Bangarappa Challenges BY Raghavendra

ಸುದ್ದಿಯ ಸ್ಥಳ: Soraba, Shivamogga, Karnataka

ಮಲೆನಾಡು ಟುಡೆ ಸುದ್ದಿ /  ಶಿವಮೊಗ್ಗ: ಸೊರಬಾದಲ್ಲಿ ಅಡಿಕೆ ಮರಗಳ ಕಟಾವು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಹೇಳಿಕೆ ಸೇರಿದಂತೆ ಹಲವು ವಿಚಾರಗಳನ್ನು ಉಲ್ಲೇಖಿಸಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕುಟುಂಬದ ವಿರುದ್ಧ ಇಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಇಂದು ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ ಅವರು, ದೇವರಾಜ್ ಎಂಬುವವರ ಅಡಿಕೆ ತೋಟವನ್ನು ಕಟಾವು ಮಾಡಿಸಿದ ಸಂದರ್ಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಅಲ್ಲಿಗೆ ಭೇಟಿ ನೀಡಿದ್ದರು. ಆದರೆ, ವಾಸ್ತವದಲ್ಲಿ ಆ ಸಂಸಾರವನ್ನು ಕಾಪಾಡಿದ್ದೇ ನಾನು ಮತ್ತು ಅವರ ಕುಟುಂಬವನ್ನು ಸರ್ವನಾಶ ಮಾಡಿದ್ದು ಸಂಸದರ ಚೇಲಾಗಳೇ ಎಂದು ಸಚಿವರು ಆರೋಪಿಸಿದರು. ನ್ಯಾಯಾಲಯದ ವಿಚಾರ ಬಂದಾಗ ನಾವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕೆರೆ ಒತ್ತುವರಿ ಜಾಗದ ವಿಚಾರದಲ್ಲಿ ಹಾಲಪ್ಪ ಅವರನ್ನು ನಂಬಿಕೊಂಡು ಸಂಸದರು ಭಾಷಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಮುಂದುವರಿದು ಮಾತನಾಡಿದ ಮಧು ಬಂಗಾರಪ್ಪ ಅವರು, ಕರೆಹಳ್ಳಿ ಗ್ರಾಮದಲ್ಲಿ ರಾತ್ರೋರಾತ್ರಿ ಪೊಲೀಸರನ್ನು ಕರೆದುಕೊಂಡು ಹೋಗಿ ಒತ್ತುವರಿ ತೆರವುಗೊಳಿಸಲಾಯಿತು, ಈ ಶಾಪ ನಿಮಗೆ ತಟ್ಟುವುದಿಲ್ಲವೇ ರಾಘವೇಂದ್ರ ಎಂದು ಪ್ರಶ್ನಿಸಿದರು. ಈ ಹಿಂದೆ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದಾಗ ತಾವು ಮನವಿ ಮಾಡಿದ್ದ ವಿಚಾರವನ್ನು ಸ್ಮರಿಸಿದ ಅವರು, ಆಗ ಕುಮಾರ್ ಬಂಗಾರಪ್ಪ ಹೋಗಿ ತಮ್ಮ ಹೆಸರನ್ನು ಹಾಕಿಸಿದ್ದರು ಹಾಗೂ ಸಂಸದರು ಬಡವರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡಿದ್ದರು ಎಂದು ಟೀಕಿಸಿದರು.

ಆರಾಧನಾ ಯೋಜನೆ ಕೇವಲ ಒಂದು ಚುಟುಕು ಅಷ್ಟೇ, ಆದರೆ ಒಂದು ಪಂಪ್ ಸೆಟ್ ಯೋಜನೆಯಿಂದ ಇಂದು ಲಕ್ಷಾಂತರ ರೈತರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಎಂದು ಸಚಿವರು ಪ್ರತಿಪಾದಿಸಿದರು. ಇದೇ ವೇಳೆ ಬಿ.ವೈ. ವಿಜಯೇಂದ್ರ ಮತ್ತು ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ನೇರ ಸವಾಲು ಹಾಕಿದ ಮಧು ಬಂಗಾರಪ್ಪ ಅವರು, ನಿಮ್ಮ ತಂದೆ ಬಿ.ಎಸ್. ಯಡಿಯೂರಪ್ಪ ಅವರು ಜೈಲಿಗೆ ಏಕೆ ಹೋಗಿದ್ದರು ಎಂಬುದನ್ನು ಪತ್ರಿಕಾ ಗೋಷ್ಟಿ ಕರೆಯುವ ಮೂಲಕ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು. ವಿಜಯೇಂದ್ರ ಮತ್ತು ರಾಘವೇಂದ್ರ ಅವರ ಕಾರಣದಿಂದಾಗಿಯೇ ಯಡಿಯೂರಪ್ಪ ಜೈಲಿಗೆ ಹೋಗುವಂತಾಯಿತು, ತಮ್ಮ ತಂದೆ ಜೈಲಿಗೆ ಹೋದರೂ ಇವರು ತಲೆಕೆಡಿಸಿಕೊಂಡಿಲ್ಲ ಎಂದು ಆರೋಪಿಸಿದರು. ಚುನಾವಣೆ ಬಂದಾಗ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ ಹಾಗೂ ವಿಜಯೇಂದ್ರ ಅವರು ‘ಕಾಂಗ್ರೆಸ್ ಮಕ್ಕಳು’ ಎಂದು ನೀಡಿದ್ದ ಹೇಳಿಕೆಯನ್ನು ಪ್ರಸ್ತಾಪಿಸಿ  ಆ ಹೇಳಿಕೆ ಮೂಲಕವೇ ಅವರ ಸಂಸ್ಕೃತಿ ಏನೆಂದು ತಿಳಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor