ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯೋಜಿಸಿರುವ 16 ವರ್ಷದೊಳಗಿನವರ ರಾಷ್ಟ್ರೀಯ ವಿಜಯ್ ಮರ್ಚೆಂಟ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ‘ಸಿ’ ಗುಂಪಿನ ಪಂದ್ಯಗಳಿಗೆ ಇಂದು (ನವೆಂಬರ್ 14) ಶಿವಮೊಗ್ಗದಲ್ಲಿ ಚಾಲನೆ ದೊರೆಯಲಿದೆ. ಡಿಸೆಂಬರ್ 8ರವರೆಗೆ ಪಂದ್ಯಾವಳಿ ನಡೆಯಲಿದ್ದು, ದೇಶದ 6 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿನಿಧಿಸುವ ತಂಡಗಳು ಒಟ್ಟು 15 ಪಂದ್ಯಗಳಲ್ಲಿ ಸೆಣಸಾಡಲಿವೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ಬಿ.ಕೆ. ರವಿ, ಶಿವಮೊಗ್ಗದಲ್ಲಿ ನಾಲ್ಕನೇ ಬಾರಿಗೆ ಬಿಸಿಸಿಐನ ವಿಜಯ್ ಮರ್ಚೆಂಟ್ ಟ್ರೋಫಿ ಪಂದ್ಯಾವಳಿ ಆಯೋಜಿಸಲಾಗುತ್ತಿದೆ. ದೇಶದ ವಿವಿಧ ಭಾಗಗಳ ಯುವ ಕ್ರಿಕೆಟಿಗರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ರಾಷ್ಟ್ರೀಯ ಮಟ್ಟದ ವೇದಿಕೆ ಕಲ್ಪಿಸುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ಈ ಬಾರಿಯ ವಿಜಯ್ ಮರ್ಚೆಂಟ್ ಟ್ರೋಫಿ ಪಂದ್ಯಾವಳಿಯಲ್ಲಿ ದೇಶದ ಒಟ್ಟು 36 ತಂಡಗಳು ಭಾಗವಹಿಸುತ್ತಿವೆ. ತಂಡಗಳನ್ನು 6 ಗುಂಪುಗಳಾಗಿ ವಿಂಗಡಿಸಲಾಗಿದ್ದು, ಪ್ರತಿಯೊಂದು ಗುಂಪಿನಲ್ಲಿ ತಲಾ 6 ತಂಡಗಳಿವೆ. ಶಿವಮೊಗ್ಗದಲ್ಲಿ ನಡೆಯಲಿರುವ ‘ಸಿ’ ಗುಂಪಿನ ಪಂದ್ಯಗಳಲ್ಲಿ ಚಂಡೀಗಢ, ಗುಜರಾತ್, ಉತ್ತರ ಪ್ರದೇಶ, ಹೈದರಾಬಾದ್, ಹರಿಯಾಣ ಹಾಗೂ ಒಡಿಶಾ ತಂಡಗಳು ಭಾಗವಹಿಸಲಿವೆ.
ಶಿವಮೊಗ್ಗ ನಗರದ ಸವಳಂಗ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್ಸಿಎ) 2 ಕ್ರೀಡಾಂಗಣಗಳು ಹಾಗೂ ಜೆಎನ್ಎನ್ಸಿಇ ಕಾಲೇಜಿನ ಟರ್ಫ್ ಮೈದಾನದಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿದೆ. ಒಟ್ಟು 15 ಪಂದ್ಯಗಳು ನಡೆಯಲಿದ್ದು, ಪ್ರತಿಯೊಂದು ಪಂದ್ಯವೂ 3 ದಿನಗಳ ಅವಧಿಯನ್ನು ಹೊಂದಿರುತ್ತದೆ.
ಪಂದ್ಯಾವಳಿಯ ಎಲ್ಲ ಪಂದ್ಯಗಳು ಕೆಂಪು ಚೆಂಡಿನಲ್ಲಿ ನಡೆಯಲಿವೆ. ಆಟಗಾರರು ಬಿಳಿ ಸಮವಸ್ತ್ರ ಧರಿಸಿ ಕಣಕ್ಕಿಳಿಯಲಿದ್ದು, ಬಿಸಿಸಿಐ ನಿಯಮಗಳ ಪ್ರಕಾರ ಪ್ರತಿದಿನ ಬೆಳಗ್ಗೆ 9.30ಕ್ಕೆ ಪಂದ್ಯಗಳು ಆರಂಭವಾಗಲಿವೆ ಎಂದು ಬಿ.ಕೆ. ರವಿ ವಿವರಿಸಿದರು.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಶಿವಮೊಗ್ಗ ವಲಯ ಸಂಚಾಲಕ ಹಾಗೂ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಮಾತನಾಡಿ, ಕರ್ನಾಟಕ ತಂಡವು ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಲಖನೌನಲ್ಲಿ ತನ್ನ ಪಂದ್ಯಗಳನ್ನು ಆಡಲಿದೆ. ಈ ಗುಂಪಿನಲ್ಲಿ ಕರ್ನಾಟಕದೊಂದಿಗೆ ಉತ್ತರಾಖಂಡ, ಗೋವಾ, ಮಹಾರಾಷ್ಟ್ರ, ಛತ್ತೀಸ್ಗಢ ಹಾಗೂ ರಾಜಸ್ಥಾನ ತಂಡಗಳು ಸ್ಪರ್ಧಿಸಲಿವೆ ಎಂದು ತಿಳಿಸಿದರು.
ಕರ್ನಾಟಕದ 16 ವರ್ಷದೊಳಗಿನವರ ಕ್ರಿಕೆಟ್ ತಂಡದಲ್ಲಿ ಶಿವಮೊಗ್ಗ ಜಿಲ್ಲೆಯ ಯುವ ಆಟಗಾರ ಆಯುಷ್ ವೈ.ಎಸ್. ಸ್ಥಾನ ಪಡೆದಿರುವುದು ಜಿಲ್ಲೆಯ ಕ್ರಿಕೆಟ್ ಕ್ಷೇತ್ರಕ್ಕೆ ಮಹತ್ವದ ಸಂಗತಿಯಾಗಿದೆ. ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಅವಕಾಶ ಪಡೆದಿರುವ ಆಯುಷ್ ಅವರಿಗೆ ಶಿವಮೊಗ್ಗ ವಲಯದ ವತಿಯಿಂದ ಅಭಿನಂದನೆ ಸಲ್ಲಿಸಲಾಗುವುದು ಎಂದು ಡಿ.ಎಸ್. ಅರುಣ್ ಹೇಳಿದರು.
ಶಿವಮೊಗ್ಗದ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಈ ಹಿಂದೆ ನಡೆದ ವಿವಿಧ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಸಿರಾಜ್ ಅಹಮದ್, ಹರ್ಷದ್ ಪಟೇಲ್, ಶುಭಮನ್ ಗಿಲ್ ಹಾಗೂ ಕೆ.ಎಲ್. ರಾಹುಲ್ ಅವರಂತಹ ಕ್ರಿಕೆಟಿಗರು ಭಾಗವಹಿಸಿದ್ದರು. ಇದೀಗ ಮತ್ತೊಮ್ಮೆ ರಾಷ್ಟ್ರೀಯ ಮಟ್ಟದ ಕಿರಿಯರ ಕ್ರಿಕೆಟ್ ಪಂದ್ಯಾವಳಿಗೆ ಶಿವಮೊಗ್ಗ ಆತಿಥ್ಯ ವಹಿಸುತ್ತಿದೆ ಎಂದು ತಿಳಿಸಿದರು.
ನವೆಂಬರ್ 14ರಂದು ಬೆಳಗ್ಗೆ 8.30ಕ್ಕೆ ಕೆಎಸ್ಸಿಎ ನವುಲೆ ಕ್ರೀಡಾಂಗಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ. ಇದೇ ವೇಳೆ ಜೆಎನ್ಎನ್ಸಿಇ ಕಾಲೇಜು ಮೈದಾನದಲ್ಲಿ ಎನ್ಇಎಸ್ ಕಾರ್ಯದರ್ಶಿ ಎಸ್.ಎನ್. ನಾಗರಾಜ್ ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಕೆಎಸ್ಸಿಎ ಶಿವಮೊಗ್ಗ ವಲಯದ ಅಧ್ಯಕ್ಷ ನಾಗೇಂದ್ರ ಕೆ. ಪಂಡಿತ್, ಆರ್.ಬಿ. ನಾಗರಾಜ್, ಕಿರಣ್ ಹಾಗೂ ಐಡಿಯಲ್ ಗೋಪಿ ಉಪಸ್ಥಿತರಿದ್ದರು.
