ಭದ್ರಾವತಿಯ ಮತ್ತಿಘಟ್ಟದಲ್ಲಿ ನ.18, 19ರಂದು ಶ್ರೀ ಮಾರಿಯಮ್ಮ ದೇವಿಯ ನೂತನ ದೇವಸ್ಥಾನ ಲೋಕಾರ್ಪಣೆ

ಹಂಚಿಕೊಳ್ಳಿ
WhatsApp Facebook X Telegram
Mattighatta Mariyamma Temple Inauguration in Bhadravati on November 18–19, 2026
Mattighatta Mariyamma Temple Inauguration in Bhadravati on November 18–19, 2026

ಸುದ್ದಿಯ ಸ್ಥಳ: Bhadravati, Shivamogga, Karnataka

ಮಲೆನಾಡು ಟುಡೆ ಸುದ್ದಿ / ಭದ್ರಾವತಿ |ಭದ್ರಾವತಿ ತಾಲ್ಲೂಕಿನ ಮತ್ತಿಘಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಮಾರಿಯಮ್ಮ ದೇವಿಯ ದೇವಸ್ಥಾನದ ಲೋಕಾರ್ಪಣೆ, ವಿಗ್ರಹ ಪ್ರತಿಷ್ಠಾಪನೆ ಹಾಗೂ ಪ್ರಾರಂಭೋತ್ಸವ ಸಮಾರಂಭ ನವೆಂಬರ್ 18 ಮತ್ತು 19ರಂದು ನಡೆಯಲಿದೆ. ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿವಿಧಾನಗಳು, ಹೋಮ, ಪೂಜೆ ಹಾಗೂ ಅಭಿಷೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಮತ್ತು ಗ್ರಾಮಸ್ಥರು ತಿಳಿಸಿದ್ದಾರೆ.

ಮತ್ತಿಘಟ್ಟ ಗ್ರಾಮದ ಭಕ್ತರ ಬಹುದಿನಗಳ ಆಶಯವಾಗಿದ್ದ ಶ್ರೀ ಮಾರಿಯಮ್ಮ ದೇವಿಯ ನೂತನ ದೇವಸ್ಥಾನದ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಲಾಗಿದೆ. ನವೆಂಬರ್ 18ರ ಬುಧವಾರ ಸಂಜೆ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ನವೆಂಬರ್ 19ರ ಗುರುವಾರ ಬೆಳಗಿನ ಜಾವ ದೇವಿಯ ವಿಗ್ರಹಕ್ಕೆ ಅಷ್ಟಬಂಧ ಹಾಗೂ ಪ್ರಾಣಪ್ರತಿಷ್ಠಾಪನೆ ನೆರವೇರಲಿದೆ.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕೆ.ಆರ್.ಐ.ಡಿ.ಎಲ್. ಅಧ್ಯಕ್ಷರು ಹಾಗೂ ಶಾಸಕ ಬಿ.ಕೆ. ಸಂಗಮೇಶ್ವರ, ಪಂಚ ಗ್ಯಾರಂಟಿ ಯೋಜನೆ ಅಧ್ಯಕ್ಷ ಬಿ.ಎಸ್. ಗಣೇಶ್, ಮಾಜಿ ನಗರಸಭಾಧ್ಯಕ್ಷ ಬಿ.ಕೆ. ಮೋಹನ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ. ವಿಗ್ರಹ ತಯಾರಿಕೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ದಿವ್ಯಸಾನ್ನಿಧ್ಯವನ್ನು ಶ್ರೀ ಕೇಶವಮೂರ್ತಿ ಮತ್ತು ವೃಂದದವರು ವಹಿಸಲಿದ್ದಾರೆ.

ನವೆಂಬರ್ 18ರಂದು ದೇವಾಲಯ ಪ್ರವೇಶ, ಕಳಶಾರಾಧನೆ

ನವೆಂಬರ್ 18ರಂದು ಬುಧವಾರ ಸಂಜೆ 4 ಗಂಟೆಯಿಂದ ಸ್ವಸ್ತಿವಾಚನ, ಸಭಾವಂದನೆ, ವಾಸುದೇವ, ಪುಣ್ಯಾಹ ಹಾಗೂ ರಕ್ಷಾಬಂಧನ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿವೆ.

ಸಂಜೆ 6 ಗಂಟೆಗೆ ಶುಭ ಗೋಧೂಳಿ ಲಗ್ನದಲ್ಲಿ ಗಂಗಾಪೂಜೆಯೊಂದಿಗೆ ನೂತನ ದೇವಾಲಯ ಪ್ರವೇಶ ಕಾರ್ಯಕ್ರಮ ನೆರವೇರಲಿದೆ. ಇದೇ ಸಂದರ್ಭದಲ್ಲಿ ಪ್ರಧಾನ ಕಳಶ ಹಾಗೂ ಪರಿವಾರ ದೇವತೆಗಳ ಕಳಶಾರಾಧನೆ ನಡೆಸಲಾಗುತ್ತದೆ.

ಬಳಿಕ ಅಂಕುರಾರ್ಪಣೆ, ವಾಸ್ತು ರಕ್ಷೋಘ್ನ ಹೋಮ, ಪಂಚಗವ್ಯ ಹೋಮ ಹಾಗೂ ನೂತನ ವಿಗ್ರಹದ ಬಿಂಬಶುದ್ಧಿ ಕಾರ್ಯಕ್ರಮಗಳು ಜರುಗಲಿವೆ. ಧಾನ್ಯ, ಧನ, ವಸ್ತ್ರ, ಪುಷ್ಪ ಹಾಗೂ ಶಯನಾಧಿವಾಸಗಳಂತಹ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ.ಅಂದು ರಾತ್ರಿ 9.30ಕ್ಕೆ ಮಂಗಳಾರತಿ ನಡೆಯಲಿದ್ದು, ಭಕ್ತರಿಗೆ ತೀರ್ಥಪ್ರಸಾದ ವಿತರಿಸಲಾಗುತ್ತದೆ.

ನವೆಂಬರ್ 19ರಂದು ಬೆಳಗಿನ ಜಾವ ದೇವಿಯ ಪ್ರಾಣಪ್ರತಿಷ್ಠಾಪನೆ

ನವೆಂಬರ್ 19ರ ಗುರುವಾರ ಬೆಳಗಿನ ಜಾವ 4 ಗಂಟೆಗೆ ಶುಭ ಬ್ರಾಹ್ಮೀ ಲಗ್ನದಲ್ಲಿ ಶ್ರೀ ಮಾರಿಯಮ್ಮ ದೇವಿಯ ನೂತನ ವಿಗ್ರಹಕ್ಕೆ ಅಷ್ಟಬಂಧ ಹಾಗೂ ಪ್ರಾಣಪ್ರತಿಷ್ಠಾಪನೆ ನೆರವೇರಲಿದೆ.

ಬೆಳಿಗ್ಗೆ 6 ಗಂಟೆಯಿಂದ ಗಣಪತಿ, ನವಗ್ರಹ ದೀಕ್ಷಾಲಂಕಾರ ಹೋಮ, ಕ್ಷೇತ್ರಾಧಿದೇವತೆಗಳ ಹೋಮ, ಪರಿವಾರ ಹೋಮ, ನ್ಯಾಸಾದಿ ಹೋಮ, ಜೀವತತ್ತ್ವ ಹೋಮ ಹಾಗೂ ಶಾಂತಿಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಬೆಳಿಗ್ಗೆ 8.30ಕ್ಕೆ ಮಹಾಪೂರ್ಣಾಹುತಿ ನೆರವೇರಲಿದ್ದು, ನಂತರ ದೇವಿಗೆ ಪಂಚಾಮೃತ ಅಭಿಷೇಕ ಮತ್ತು ಕಳಶಾಭಿಷೇಕ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ತೀರ್ಥಪ್ರಸಾದ ವಿತರಿಸಲಾಗುತ್ತದೆ.

ಮತ್ತಿಘಟ್ಟ ಗ್ರಾಮದಲ್ಲಿ ನಡೆಯಲಿರುವ ಶ್ರೀ ಮಾರಿಯಮ್ಮ ದೇವಿಯ ನೂತನ ದೇವಸ್ಥಾನದ ಲೋಕಾರ್ಪಣೆ ಹಾಗೂ ಪ್ರಾಣಪ್ರತಿಷ್ಠಾಪನಾ ಸಮಾರಂಭಕ್ಕೆ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಮತ್ತು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಹಾಗೂ ಗ್ರಾಮಸ್ಥರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor