ಮಲೆನಾಡು ಟುಡೆ ಸುದ್ದಿ / ಮೂಡಿಗೆರೆ / ಅರಣ್ಯ ಪ್ರದೇಶದಲ್ಲಿ ಮರ ಕಡಿದಿದ್ದನ್ನ , ಮರಳು ಹಾಗೂ ಮಣ್ಣು ಸಾಗಿಸಿದ್ದನ್ನ ಅರಣ್ಯ ಇಲಾಖೆಗೆ ಮಾಹಿತಿ ನೀಡುತ್ತಿದ್ದೀಯ ಎಂದು ಆರೋಪಿಸಿ, ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರಣ್ಯ ಇಲಾಖೆ ವಾಚರ್ ಮೇಲೆ 7 ಮಂದಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ಮೂಡಿಗೆರೆ ತಾಲ್ಲೂಕಿನಲ್ಲಿ ನಡೆದಿದೆ. ಈ ಸಂಬಂಧ ಆಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಣಕಲ್ ಹೋಬಳಿಯ ಅಣ್ಣಪ್ಪ ಟಿ.ಕೆ. ಹಲ್ಲೆಗೊಳಗಾದವರು. ಇವರು ಗುತ್ತಿಗೆ ಆಧಾರದಲ್ಲಿ ಅರಣ್ಯ ಇಲಾಖೆಯಲ್ಲಿ ವಾಚರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನವೆಂಬರ್ 4ರಂದು ತಳವಾರ ಸಮೀಪದ ಫಾರೆಸ್ಟ್ ಶೆಡ್ ಎದುರಿನ ರಸ್ತೆಯಲ್ಲಿ ಓಮ್ನಿ ಕಾರಿನಲ್ಲಿ ರಾತ್ರಿ ಕರ್ತವ್ಯದಲ್ಲಿದ್ದಾಗ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಣ್ಣಪ್ಪ ಕರ್ತವ್ಯದಲ್ಲಿದ್ದ ವೇಳೆ ಬಿಳಿ ಬಣ್ಣದ ಆಲ್ಟೊ ಕಾರಿನಲ್ಲಿ ಬಂದ 7 ಮಂದಿ ಅವರನ್ನು ಕಾರಿನಿಂದ ಕೆಳಗಿಳಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಅರಣ್ಯ ಇಲಾಖೆಗೆ ನೀನೇ ಮಾಹಿತಿ ನೀಡುತ್ತಿದ್ದೀಯ ಎಂದು ಪ್ರಶ್ನಿಸಿದ ಆರೋಪಿಗಳು, ಅಣ್ಣಪ್ಪ ಅವರ ಮೇಲೆ ಕೈಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.ಮುಂದೆಯೂ ಅರಣ್ಯ ಇಲಾಖೆಗೆ ಇದೇ ರೀತಿಯ ಮಾಹಿತಿ ನೀಡಿದರೆ ಕೊಲೆ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆಯ ನಂತರ ಗಾಯಗೊಂಡ ಅಣ್ಣಪ್ಪ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.
