ಭದ್ರಾ ಕಾಲುವೆಗಳಿಗೆ ತಕ್ಷಣ 10 ದಿನ ನೀರು ಹರಿಸಿ | ಇಲ್ಲದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ! ಕಾರಣವೇನು?

ಹಂಚಿಕೊಳ್ಳಿ
WhatsApp Facebook X Telegram
Bhadra Canal Water Release HR Basavarajappa Demands 10 Days of Water
Bhadra Canal Water Release HR Basavarajappa Demands 10 Days of Water

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಭದ್ರಾ ಜಲಾಶಯದಲ್ಲಿ ನೀರಿನ ಲಭ್ಯತೆ ಇರುವುದರಿಂದ ಈಗಾಗಲೇ ಬೆಳೆದು ನಿಂತಿರುವ ತೋಟದ ಬೆಳೆಗಳ ರಕ್ಷಣೆಗಾಗಿ ಭದ್ರಾ ಎಡದಂಡೆ, ಬಲದಂಡೆ ಹಾಗೂ ಗೊಂದಿ ಕಾಲುವೆಗಳಿಗೆ ತಕ್ಷಣ 10 ದಿನಗಳ ಕಾಲ ನೀರು ಹರಿಸಬೇಕು. ಇಲ್ಲದಿದ್ದರೆ ರೈತ ಸಂಘದ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಎಚ್ಚರಿಸಿದರು.

ಭದ್ರಾ ಕಾಲುವೆಗೆ ನೀರು ಬಿಡಿ

ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಭತ್ತ ಬೆಳೆಯುವುದನ್ನು ರೈತರು ತ್ಯಾಗ ಮಾಡಿದ್ದಾರೆ. ಕುಡಿಯುವ ನೀರಿನ ಉದ್ದೇಶಕ್ಕಾಗಿ ಜಲಾಶಯದ ನೀರನ್ನು ಕಾಯ್ದಿರಿಸುವ ಸರ್ಕಾರದ ನಿರ್ಧಾರಕ್ಕೆ ರೈತರು ಸಹಕರಿಸಿದ್ದಾರೆ ಎಂದರು.

ಪ್ರಸ್ತುತ ಭದ್ರಾ ಜಲಾಶಯದಲ್ಲಿ 172 ಅಡಿ 7 ಇಂಚು ನೀರಿದ್ದು, 55.734 ಟಿಎಂಸಿ ನೀರು ಸಂಗ್ರಹವಾಗಿದೆ. ಡೆಡ್ ಸ್ಟೋರೇಜ್, ಕುಡಿಯುವ ನೀರಿನ ಬಳಕೆ ಹಾಗೂ ಆವಿಯಾಗುವ ಪ್ರಮಾಣವನ್ನು ಹೊರತುಪಡಿಸಿದರೆ ಸುಮಾರು 33 ಟಿಎಂಸಿ ನೀರು ಲಭ್ಯವಿದೆ. ಇದನ್ನು ಸಮರ್ಪಕವಾಗಿ ಬಳಸಿದರೆ ಎಡ, ಬಲ ಹಾಗೂ ಗೊಂದಿ ನಾಲೆಗಳಿಗೆ 110 ದಿನ ನೀರು ಹರಿಸಲು ಸಾಧ್ಯವಿದೆ ಎಂದು ತಿಳಿಸಿದರು.

ಜನ-ಜಾನುವಾರುಗಳ ಕುಡಿಯುವ ನೀರಿನ ಅಗತ್ಯದ ಜತೆಗೆ ಈಗಾಗಲೇ ಬೆಳೆದು ನಿಂತಿರುವ ತೋಟದ ಬೆಳೆಗಳನ್ನು ಉಳಿಸುವುದು ಮುಖ್ಯವಾಗಿದೆ. ಹೀಗಾಗಿ ತಕ್ಷಣ 10 ದಿನ ನೀರು ಹರಿಸಬೇಕು. 2026-27ನೇ ಸಾಲಿನ ಬೇಸಿಗೆ ಹಂಗಾಮಿನಲ್ಲಿ ನೀರಿನ ಲಭ್ಯತೆಗೆ ಅನುಗುಣವಾಗಿ ಬೆಳೆ ಬೆಳೆಯಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ಕರೆದು ನೀರು ಹಂಚಿಕೆ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಬೇಕು ಬೇಸಿಗೆ ಹಂಗಾಮಿನಲ್ಲಿ ರೈತರು ಭತ್ತ ಬೆಳೆಯಲು ಅನುಕೂಲವಾಗುವಂತೆ 100 ದಿನ ನೀರು ಹರಿಸಬೇಕು. ಇದರಿಂದ ಭತ್ತದ ಬೆಳೆಯ ಜತೆಗೆ ಜಾನುವಾರುಗಳಿಗೆ ಮೇವು ಲಭ್ಯವಾಗಲಿದೆ. ಕೃಷಿ ಚಟುವಟಿಕೆಗಳಿಗೂ ಅನುಕೂಲವಾಗಲಿದೆ. ತಕ್ಷಣ ನೀರು ಹರಿಸದಿದ್ದರೆ ರೈತ ಸಂಘದ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು

ಎಚ್.ಆರ್. ಬಸವರಾಜಪ್ಪ,ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ

ಜಿಲ್ಲಾ ಅಧ್ಯಕ್ಷ ಕೆ. ರಾಘವೇಂದ್ರ, ಹಿಟ್ಟೂರು ರಾಜು, ಎಂ. ಚಂದ್ರಪ್ಪ, ಪಿ. ಶೇಖರಪ್ಪ, ಎಂ. ಮಹಾದೇವಪ್ಪ, ಸಿ. ಚಂದ್ರಪ್ಪ ಇದ್ದರು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor