ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ ದಸರಾ ಜಂಬೂಸವಾರಿ ವೇಳೆ ಅಂಬಾರಿ ಹೊತ್ತ ಆನೆ ನಿಯಂತ್ರಣ ತಪ್ಪಿದ ಘಟನೆಗೆ ನಿಖರ ಕಾರಣವೇನು ಎಂಬುದನ್ನು ಅಧಿಕಾರಿಗಳಿಂದ ಮಾಹಿತಿ ಪಡೆಯದೆ ಹೇಳುವುದು ಸರಿಯಲ್ಲ. ಘಟನೆ ಕುರಿತು ಪರಿಶೀಲನೆ ನಡೆಸಲು ಅಧಿಕಾರಿಗಳ ಸಭೆ ಕರೆಯಲಾಗಿದ್ದು, ವರದಿ ಪಡೆದ ನಂತರವೇ ಕಾರಣ ತಿಳಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಅಲ್ಲದೆ ಈ ಸಂಬಂಧ ನಾಳೇ ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿಯನ್ನ ಕರೆದಿದ್ದಾರೆ. ಈ ಸುದ್ದಿಗೋಷ್ಟಿಯಲ್ಲಿ ಮಹತ್ವದ ವಿಚಾರಗಳು ಹೊರಬರುವ ಸಾಧ್ಯತೆ ಇದೆ.
ಈ ವಿಷಯದ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಆನೆಗಳಿಗೆ ಸೂಕ್ತ ತರಬೇತಿ ನೀಡದೆ ಮೆರವಣಿಗೆಗೆ ಕರೆತರಲಾಗಿದೆ ಎಂಬ ಅಭಿಪ್ರಾಯನ್ನು ಒಪ್ಪಲು ಸಾಧ್ಯವಿಲ್ಲ. ಕಳೆದ ವರ್ಷ ತಾವು ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಆನೆಗಳ ತರಬೇತಿ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಗಮನಿಸಿದ್ದಾಗಿ ಹೇಳಿದರು. ಕಳೆದ ವರ್ಷ ಖುದ್ದು ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಆದರೆ ಈ ವರ್ಷ ಕಾರ್ಯಕ್ರಮದಲ್ಲಿ ಇರಲಿಲ್ಲ. ಕಳೆದ ವರ್ಷ ಆನೆಗಳಿಗೆ ಯಾವ ರೀತಿಯಲ್ಲಿ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಗಮನಿಸಿದ್ದೇನೆ. ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ತರಬೇತಿ ನೀಡುವ ವ್ಯವಸ್ಥೆ ಮಾಡುತ್ತಾರೆ. ಈ ರೀತಿಯ ಕಾರ್ಯಕ್ರಮಗಳನ್ನು ಸೂಕ್ತ ಸಿದ್ಧತೆ ಇಲ್ಲದೆ ನಡೆಸುವುದಿಲ್ಲ ಎಂದು ತಿಳಿಸಿದರು.
ಆದರೆ ಈ ಬಾರಿ ಆನೆ ದಿಢೀರನೆ ಆತಂಕಗೊಳ್ಳಲು ಕಾರಣವೇನು ಎಂಬುದನ್ನು ತಿಳಿದುಕೊಳ್ಳಬೇಕಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸಲಾಗುತ್ತಿದೆ. ನಿಖರವಾಗಿ ಏನಾಯಿತು ಎಂಬುದನ್ನು ತಿಳಿಯಲು ಅಧಿಕಾರಿಗಳಿಂದ ಮಾಹಿತಿ ಪಡೆಯಬೇಕಿದೆ ಎಂದು ಹೇಳಿದರು. ಒಂದು ವೇಳೆ ಆನೆ ಜನರು ನಿಂತಿದ್ದ ಕಡೆಗೆ ಮುಂದೆ ನುಗ್ಗಿದ್ದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ಅಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ . ಆನೆ ಯಾವ ಕಾರಣಕ್ಕೆ ಆತಂಕಗೊಂಡಿತು ಎಂಬುದನ್ನು ಈಗಲೇ ನಿರ್ಧರಿಸಲು ಸಾಧ್ಯವಿಲ್ಲ. ಸಿಸಿಟಿವಿ ದೃಶ್ಯಾವಳಿ ಹಾಗೂ ಅಧಿಕಾರಿಗಳ ಮಾಹಿತಿಯನ್ನು ಪರಿಶೀಲಿಸಿದ ನಂತರವೇ ಸ್ಪಷ್ಟ ಕಾರಣ ತಿಳಿಯಲಿದೆ ಎಂದು ವಿವರಿಸಿದರು.
ಘಟನೆಗೆ ಸಂಬಂಧಿಸಿದಂತೆ ನಾಳೆ ಬೆಳಿಗ್ಗೆ 9 ಗಂಟೆಗೆ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳ ಸಭೆ ಕರೆಯಲಾಗಿದೆ. ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದು, ಜಿಲ್ಲಾಧಿಕಾರಿಗಳನ್ನೂ ಬರುವಂತೆ ತಿಳಿಸಲಾಗಿದೆ. ಸಭೆಯಲ್ಲಿ ಘಟನೆಗೆ ಸಂಬಂಧಿಸಿದ ಎಲ್ಲ ವಿಚಾರಗಳ ಕುರಿತು ಚರ್ಚಿಸಿ ಮಾಹಿತಿ ಪಡೆಯಲಾಗುವುದು. ಆನೆ ಯಾವ ಕಾರಣಕ್ಕೆ ಆತಂಕಗೊಂಡಿತು, ಆ ಸಂದರ್ಭದಲ್ಲಿ ಯಾವ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂಬುದನ್ನು ಅಧಿಕಾರಿಗಳಿಂದ ತಿಳಿದುಕೊಳ್ಳಲಾಗುವುದು. ಅವರೊಂದಿಗೆ ಚರ್ಚಿಸುವ ಮೊದಲೇ ಯಾವುದೇ ತೀರ್ಮಾನಕ್ಕೆ ಬರುವುದು ಸರಿಯಲ್ಲ . ಈ ಘಟನೆಯ ಕುರಿತು ಪರಿಶೀಲನೆ ನಡೆಸಲು ಸ್ವಲ್ಪ ಸಮಯ ಬೇಕಾಗುತ್ತದೆ. ಅಧಿಕಾರಿಗಳಿಂದ ಸೂಕ್ತ ವಿವರಣೆ ಹಾಗೂ ದಾಖಲೆಗಳನ್ನು ಪಡೆದುಕೊಂಡ ನಂತರವೇ ನಿಖರ ಕಾರಣವನ್ನು ತಿಳಿಸಬಹುದು ಎಂದರು.
ದಸರಾ ಮೆರವಣಿಗೆಯ ವ್ಯವಸ್ಥೆಯಲ್ಲಿ ಅಧಿಕಾರಿಗಳ ಕಡೆಯಿಂದ ಲೋಪವಾಗಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿಲ್ಲ. ಆದರೆ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳೇ ಉತ್ತರ ನೀಡಬೇಕಾಗುತ್ತದೆ ಎಂದು ಮಧು ಬಂಗಾರಪ್ಪ ತಿಳಿಸಿದರು. ತಾವು ಈ ಕ್ಷೇತ್ರದ ವೃತ್ತಿಪರ ತಜ್ಞರಲ್ಲ. ಆನೆಗಳ ಸ್ವಭಾವ, ಅವುಗಳ ವರ್ತನೆ ಹಾಗೂ ಇಂತಹ ಸಂದರ್ಭಗಳನ್ನು ನಿಭಾಯಿಸುವ ವಿಧಾನಗಳ ಕುರಿತು ಸಂಬಂಧಪಟ್ಟ ತಜ್ಞರು ಮತ್ತು ಅಧಿಕಾರಿಗಳಿಂದ ಮಾರ್ಗದರ್ಶನ ಪಡೆಯಬೇಕಾಗುತ್ತದೆ. ಆನೆಗಳ ಸ್ವಭಾವವನ್ನು ನಿಖರವಾಗಿ ಊಹಿಸಲು ಎಲ್ಲರಿಂದಲೂ ಸಾಧ್ಯವಿಲ್ಲ. ಮೆರವಣಿಗೆಯ ಸಂದರ್ಭದಲ್ಲಿ ಆನೆ ಸಹಜವಾಗಿದ್ದರೂ ದಿಢೀರನೆ ಯಾವ ಪರಿಸ್ಥಿತಿಯಿಂದ ಆತಂಕಗೊಂಡಿತು ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ. ಈ ಕುರಿತು ಅಧಿಕಾರಿಗಳ ವರದಿ ಪಡೆದ ನಂತರ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದರು.
