ಜಂಬೂಸವಾರಿ ಅದ್ವಾನಕ್ಕೆ ಕಾರಣಕರ್ತರು ಯಾರು? ಸರತಿ ಸಾಲು ಬದಲಾಯಿಸಿದವರಿರುವ ಈ ವಿಡಿಯೋದಲ್ಲಿ ಏನಿದೆ?

ಹಂಚಿಕೊಳ್ಳಿ
WhatsApp Facebook X Telegram
Shivamogga Dasara Elephant Incident Who Is Responsible for Somanna's U-Turn
Shivamogga Dasara Elephant Incident Who Is Responsible for Somanna's U-Turn

ಶಿವಮೊಗ್ಗ ಜಂಬೂಸವಾರಿ ಅದ್ವಾನ ಎದ್ದೋಗಲು ಕಾರಣವಾಗಿದ್ದು ಏನು? ಈ ಪ್ರಶ್ನೆಗೆ ಉತ್ತರ ಹುಡುಕುವ ಮೊದಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಬಡಪಾಯಿ ಸಿಬ್ಬಂದಿಗಳನ್ನ ಶಿಕ್ಷೆಗೆ ಗುರಿಪಡಿಸುವುದು ಸಮಂಜಸ ಹಾಗೂ ಸಮರ್ಥನೀಯವೂ ಅಲ್ಲ! ಅರಣ್ಯ ಸಿಬ್ಬಂದಿಗಳು ತಪ್ಪುಮಾಡಿದಾಗ ಆ ತಪ್ಪಿನ ವೈಫಲ್ಯಗಳು ಮೀಡಿಯಾ ಮುಂದೆ ಸಹಜ ಸಾಮಾನ್ಯವಾಗಿಯೇ ಬಯಲಾಗುತ್ತಿತ್ತು. ಆದರೆ ಶಿವಮೊಗ್ಗ ಜಂಬೂಸವಾರಿಯಲ್ಲಿ ನೇರ ಹೊಣೆಗಾರಿಕೆ ಹೊರಬೇಕಾಗಿದ್ದು ಶಿವಮೊಗ್ಗದ ರಾಜಕಾರಣಿಗಳು. ವಿಜಯದಶಮಿಯ ಸಂಭ್ರಮದ ನಡುವೆ ಜಂಬೂಸವಾರಿ ಪ್ರತಿಷ್ಟೆಯಾಗಬಾರದಿತ್ತು..
ಅಂಬಾರಿಯನ್ನು ಹೊತ್ತ ಸೋಮಣ್ಣ ಆನೆ ಭಯ ಬಿದ್ದು ಮತ್ತೆ ತನ್ನ ಸ್ವಸ್ಥಾನಕ್ಕೆ ಓಡಲು, ಅದರ ಎದುರು ಮುಂದಕ್ಕೆ ಹೋಗುತ್ತಿದ್ದ ಸಾಗರ ಆನೆಯನ್ನು ಹಿಂದಕ್ಕೆ ಹಾಕಿದ್ದೆ ಕಾರಣ ಎಂಬುದರಲ್ಲಿ ಯಾರಿಗೂ ಸಂಶಯ ಉಳಿದಿಲ್ಲ. ವೈಲ್ಟ್​ಲೈಫ್​ ತಜ್ಞರಿಂದ ಹಿಡಿದು ಆನೆಗಳ ಬಗ್ಗೆ ಅಪಾರ ಅನುಭವ ಹೊಂದಿರುವ ತಜ್ಞ ಮಾವುತ ಕಾವಾಡಿಗಳು ಸಹ, ಘಟನೆಗೆ ಸರತಿ ಬದಲಿಸಿದ್ದೆ ಕಾರಣ ಎಂದು ಸ್ಪಷ್ಟ ಪಡಿಸಿದ್ದಾರೆ.

ಕಾಡಿನೊಳಗೆ ಬೇಟೆಗೆ ಹೋಗುತ್ತೇವೆ ಎಂದುಕೊಳ್ಳೋಣ, ಮುಂದೆ ಹೋಗುವಾತ ಶಿಕಾರಿಯ ಕೋವಿ ಹಿಡಿದು ಸಾಗುತ್ತಾನೆ. ಆತನ ಹಿಂದೆ ಉಳಿದವರು ಸಾಗುತ್ತಾರೆ. ಇಲ್ಲಿ ಕೋವಿ ಹಿಡಿದು ಮುಂದೆ ಸಾಗುವಾತನೇ ಹಿಂದಿದ್ದವರ ಧೈರ್ಯ, ಬಲ ಮತ್ತು ಮಾರ್ಗದರ್ಶಕ. ಹಾಗೊಂದು ವೇಳೆ ಕೋವಿ ಹಿಡಿದು ಸಾಗುತ್ತಿರುವನೇ ಇದ್ದಕ್ಕಿದ್ದಂತೆ ಮಾಯವಾದರೆ, ಹಿಂದಿದ್ದವರ ಕಥೇ ಪಡ್ಚ. (ಸಾಂದರ್ಭಿಕ ಉದಾಹರಣೆಗಷ್ಟೆ ಬೇಟೆ ವಿಚಾರ ಬಳಸಲಾಗಿದೆ, ಬೇಟೆ ಶಿಕ್ಷಾರ್ಹ ಅಪರಾಧ ಎಂಬುದು ತಿಳಿದಿರಲಿ) ಇದೇ ಸನ್ನಿವೇಶ ಸೋಮಣ್ಣನಿಗೆ ಆಗಿದ್ದು.. ಮುಂದಕ್ಕೆ ಹೋಗುತ್ತಿದ್ದ ಸಾಗರನನ್ನ ನೆಚ್ಚಿಕೊಂಡು ಹೆಜ್ಜೆ ಹಾಕ್ತಿದ್ದ ಸೋಮಣ್ಣನಿಗೆ ತನ್ನನ್ನೆ ಮುಂದಕ್ಕೆ ಬಿಟ್ಟಿದ್ದು ಭಯ ಹುಟ್ಟಿಸಿದೆ. ಹಾಗಾಗಿ ವಾಪಸ್ ಹೊರಟುಬಿಟ್ಟಿದ್ದ.

ಇಲ್ಲೊಂದು ವಿಷಯ ನಿಜವಾಗಲೂ ಸೋಮಣ್ಣ ಕೆರಳಿ ತಿರುಗಿ ನಿಂತಿದ್ದರೆ ಆ ಜನಸಂಧಣಿಯಲ್ಲಿ ದೊಡ್ಡ ಅನಾಹುತವೇ ಆಗ್ತಿತ್ತು. ಆದರೆ ಸೋಮಣ್ಣ, ನಿಧಾನವಾಗಿಯೇ ಯೂಟರ್ನ್​ ತಗೊಂಡು, ದಾರಿ ಕಂಡ ಜಾಗದಲ್ಲಷ್ಟೆ ಓಡಿದ್ದ. ತನ್ನೆದರೇ ಸಿಕ್ಕ ಯಾರೊಬ್ಬರಿಗೆ ಏನನ್ನೂ ಸಹ ಆತ ಮಾಡಿಲ್ಲ! ಈ ನಿಟ್ಟಿನಲ್ಲಿ ಥ್ಯಾಂಕ್ಸ್​ ಹೇಳಬೇಕಿದ್ದು ಸೋಮಣ್ಣನಿಗೆ ಮಾತ್ರ.

ಇನ್ನೂ ಇಲ್ಲಿ ಸೋಮಣ್ಣನನ್ನು ಮುಂದಕ್ಕೆ ತರಿಸಿದ್ದು ಯಾರು? ಈ ಪ್ರಕ್ರಿಯೆ ಹೇಗೆ ನಡೆಯಿತು? ಅದಾಗಿ ಸರಿಯಾಗಿ ಎಷ್ಟೊತ್ತಿಗೆ ಸೋಮಣ್ಣ ಯೂಟರ್ನ್​ ತೆಗೆದುಕೊಂಡ? ಇದೆಲ್ಲವು ಮೊದಲುಗೊಂಡಿದ್ದು ಎಲ್ಲಿಂದ!? ಈ ಪ್ರಶ್ನೆಗಳಿಗೆ ಉತ್ತರ ಇಡೀ ದಸರಾ ಕಾರ್ಯಕ್ರಮದ ಲೈವ್ ವಿಡಿಯೋಗಳಲ್ಲಿ ಉತ್ತರ ಸ್ಪಷ್ಟವಾಗುತ್ತಿದೆ. ಈ ವಿಡಿಯೋದ ಲಿಂಕ್ ಇಲ್ಲಿ ನೀಡಲಾಗಿದೆ. ಓದುಗನ ಎದುರು ವಾಸ್ತವವನ್ನು ಇಡುವುದು ಮೊದಲ ಆಧ್ಯತೆ ಆ ನಿಟ್ಟಿನಲ್ಲಿ ಮಲೆನಾಡು ಟುಡೆಗೆ ಲಭ್ಯವಾದ ವಿಡಿಯೋವನ್ನ ನಿಮ್ಮ ಮುಂದಿಟ್ಟಿದ್ದೇವೆ? ದೃಶ್ಯಗಳಲ್ಲಿ ಕಾಣುವುದು ಓದುಗನ ವಿವೇಚನೆಗೆ ಬಿಟ್ಟಿದ್ದು..

ಸಾರಸಗಟಾಗಿ ಸೋಮಣ್ಣನ ನಡವಳಿಕೆ ಇದೆ ಕಾರಣ ಎನ್ನುವುದು ಅಪೂರ್ಣವಾಗುತ್ತದೆ. ಆದರೆ ಇರುವ ಕಾರಣಗಳಲ್ಲಿ ಸರತಿ ಬದಲಿಸಿದ್ದು ಮೊದಲ ಕಾರಣ ಎನ್ನಬಹುದು! ಇನ್ನೂ ಅನಿಷ್ಟಕ್ಕೆಲ್ಲಾ ಶನೀಶ್ವರ ಕಾರಣ ಎನ್ನುವಂತೆ ಅರಣ್ಯ ಇಲಾಖೆಯ ತಳಮಟ್ಟದ ಸಿಬ್ಬಂದಿಯನ್ನ ಗುರಿಮಾಡುವುದು ತಪ್ಪಬೇಕಿದೆ. ಏಕೆಂದರೆ, ಅರಣ್ಯ ಇಲಾಖೆ ಮೇಲ್ಪಂಕ್ತಿಯ ಅಧಿಕಾರಿಗಳು, ನಿಜವಾಗಲು ಗಜಸವಾರಿಯಲ್ಲಿ ಕೇಳಬೇಕಿದಿದ್ದು ಜಮೇದಾರ್​ ಮಾತನ್ನ! ಕಾರಣ ಇಷ್ಟೆ, ಮಾವುತ , ಕಾವಾಡಿಗಳ ಜೊತೆಗೆ ಗಜಪಡೆಯೊಂದರ ಪೂರ್ತಿ ಆಗುಹೋಗುವಿನ ಹೊಣೆ ಹೊರುವ ನಾಯಕ ಜಮೇದಾರ್​. ಆದರೆ ಶಿವಮೊಗ್ಗ ಜಂಬೂಸವಾರಿಗೆ ಒಬ್ಬನೂ ಶಾಶ್ವತ ಜಮೇದಾರ್​ ಬಂದಿರಲಿಲ್ಲ. ಇರುವ ಇಬ್ಬರು ಜಮೇದಾರ್ ಪೈಕಿ ಓರ್ವ ನಿವೃತ್ತರಾದರೆ, ಇನ್ನೊಬ್ಬರನ್ನ ಶೌರ್ಯ ಆನೆ ಸಾವಿನ ವಿಚಾರಕ್ಕೆ ಸಸ್ಪೆಂಡ್ ಮಾಡಲಾಗಿದೆ. ಆ ಕಾರಣಕ್ಕೆ ನಿವೃತ್ತ ಜಮೇದಾರ್​ ಒಬ್ಬರನ್ನ ಖುದ್ದು ಅರಣ್ಯ ಅಧಿಕಾರಿಗಳು ಮನವಿ ಮಾಡಿ ಕರೆತಂದಿದ್ದರು.

ಜಮೇದಾರ್​ ಹಾಗೂ ಮಾವುತರು ಕಾವಾಡಿಗಳಿಗೆ ನೀಡಬೇಕಿದ್ದ ಆದೇಶ ಕೊಟ್ಟು, ಸವಾರಿಯನ್ನು ಚೆನ್ನಾಗಿ ನಡೆಸಿಕೊಡಿ, ಆ ಹೊಣೆ ನಿಮ್ಮದು ಎಂದು ಬಿಟ್ಟಿದ್ದರೇ, ಆಲ್ಮೋಸ್ಟ್​ ಅರಣ್ಯ ಇಲಾಖೆಯ ಕೆಲಸಗಳು ಸಕ್ಸಸ್​ ಆಗ್ತಿತ್ತು. ಆದರೆ ಜಂಬುಸವಾರಿಯಲ್ಲಿ ತಲೆಗೊಂದು ಸಲಹೆ ಕೇಳಿದ್ದು, ನೀಡಿದ್ದು ಬಿಟ್ಟರೆ ತಳಮಟ್ಟದ ಸಿಬ್ಬಂದಿಗಳ ಮಾತನ್ನ ಮೇಲ್ಮೇಲಿನ ಅಧಿಕಾರಿಗಳು ಕೇಳಲೂ ಇಲ್ಲ, ಕೇಳಿಸಿಕೊಳ್ಳಲು ಇಲ್ಲ.

ನೇಮು ಫೇಮು ಪ್ರತಿಷ್ಟೆಯ ಪರಕಾಷ್ಟೆಗಳಿಗೆ ಸೋಮಣ್ಣ ಎಚ್ಚರಿಕೆಯ ಪಾಠ ಹೇಳಿ, ಮುದ್ದು ಮಗುವೊಂದು ಕೂಗಿ ಕರೆದಿದ್ದಕ್ಕೆ, ತಲೆಯೆತ್ತಿ ತನ್ನನ್ನ ಕ್ಷಮಿಸು ಎನ್ನುವ ದಾಟಿ ತೋರಿ ಸಕ್ರೆಬೈಲ್​ ಸೇರಿಕೊಂಡಿದ್ದಾನೆ. ಆದರೆ ಇಲ್ಲಿ, ನಡೆದ ಹೊಣೆಯನ್ನ ಯಾರ ಹೆಗಲಿಗೆ ಕಟ್ಟುವುದು ಎಂಬ ಸಮಾಲೋಚನೆ ಸತ್ಯಕ್ಕೆ ಸಮರ್ಥನೀಯವಾಗಿ ನಡೆಯುತ್ತಿಲ್ಲ

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor