ಸಾಗರದಲ್ಲಿ ಹೈವೋಲ್ಟೇಜ್ ಪ್ರಾಬ್ಲಮ್​! 13ಕ್ಕೂ ಹೆಚ್ಚು ಮನೆಗಳಲ್ಲಿ ಟಿವಿ, ಫ್ಯಾನ್, ವೈರಿಂಗ್ ಸುಟ್ಟು ಸಮಸ್ಯೆ!

ಹಂಚಿಕೊಳ್ಳಿ
WhatsApp Facebook X Telegram
ಸಾಗರ ಸುದ್ದಿ ಸಾಂದರ್ಭಿಕ ಚಿತ್ರ

ಮಲೆನಾಡು ಟುಡೆ ಸುದ್ದಿ / ಸಾಗರ / ನಗರದ ಇಕ್ಕೇರಿ ರಸ್ತೆಯ ಎಸ್‌ಎನ್ ನಗರದಲ್ಲಿ ಏಕಾಏಕಿ ಹೈವೋಲ್ಟೇಜ್ ವಿದ್ಯುತ್ ಪ್ರವಹಿಸಿದ ಪರಿಣಾಮ 13ಕ್ಕೂ ಹೆಚ್ಚು ಮನೆಗಳ ವಿದ್ಯುತ್ ಪರಿಕರಗಳು ಹಾಗೂ ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿದೆ ಎಂದು ಸ್ಥಳೀಯ ವರದಿಗಾರರು ಮಾಹಿತಿ ನೀಡಿದ್ದಾರೆ. ಕಳೆದ ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಇಲ್ಲಿನ ಎಚ್‌ಪಿ ಗ್ಯಾಸ್ ಗೋಡೌನ್ ಸಮೀಪ ಈ ಘಟನೆ ನಡೆದಿದ್ದು, ಹಲವು ಮನೆಗಳ ವಿದ್ಯುತ್ ವೈರಿಂಗ್, ಮೀಟರ್ ಬಾಕ್ಸ್ ಸೇರಿದಂತೆ ವಿವಿಧ ಉಪಕರಣಗಳು ಸುಟ್ಟುಹೋಗಿವೆ.

ಎಸ್‌ಎನ್ ನಗರದ ಮನೆಗಳಿಗೆ ಸಂಪರ್ಕ ಕಲ್ಪಿಸಿರುವ ವಿದ್ಯುತ್ ತಂತಿಗಳಲ್ಲಿ ಏಕಾಏಕಿ ಅಧಿಕ ವೋಲ್ಟೇಜ್ ಪ್ರವಹಿಸಿದ್ದು, ಭಾರೀ ಶಬ್ದದೊಂದಿಗೆ ಮನೆಗಳ ಒಳಗಿನ ವಿದ್ಯುತ್ ವೈರಿಂಗ್ ಸುಟ್ಟುಹೋಗಿದೆ. ಘಟನೆಯಿಂದ ಬಹುತೇಕ ಮನೆಗಳಲ್ಲಿದ್ದ ಗೃಹೋಪಯೋಗಿ ವಸ್ತುಗಳಿಗೂ ಹಾನಿ ಸಂಭವಿಸಿದೆ. ಕೆಲ ಮನೆಗಳ ವಿದ್ಯುತ್ ಮೀಟರ್ ಬಾಕ್ಸ್, ಸಿಸಿ ಕ್ಯಾಮೆರಾ, ಫ್ಯಾನ್, ನೀರೆತ್ತುವ ಪಂಪ್, ಟಿವಿ ಸೇರಿದಂತೆ ಹಲವು ವಿದ್ಯುತ್ ಉಪಕರಣಗಳು ಸುಟ್ಟುಹೋಗಿರುವುದು ಕಂಡುಬಂದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಏಕಾಏಕಿ ಅಧಿಕ ವೋಲ್ಟೇಜ್ ವಿದ್ಯುತ್ ಪ್ರವಹಿಸಲು ಕಾರಣವೇನು ಎಂಬುದನ್ನು ಪತ್ತೆಹಚ್ಚುವ ಕಾರ್ಯ ಕೈಗೊಂಡಿದ್ದಾರೆ. ಆದರೆ ಘಟನೆಗೆ ಕಾರಣವಾದ ನಿಖರ ಅಂಶ ಇನ್ನೂ ತಿಳಿದುಬಂದಿಲ್ಲ.

ಈ ಪ್ರದೇಶದ ಎಲ್‌ಟಿ ವಿದ್ಯುತ್ ಮಾರ್ಗದ ಮೇಲ್ಭಾಗದಲ್ಲಿಯೇ 33 ಕೆವಿಎ ಮುಖ್ಯ ವಿದ್ಯುತ್ ಮಾರ್ಗ ಹಾಗೂ 11 ಕೆವಿ ವಿದ್ಯುತ್ ಮಾರ್ಗಗಳು ಹಾದುಹೋಗಿವೆ. ಈ ವಿದ್ಯುತ್ ಮಾರ್ಗಗಳಿಗೆ ಸಂಬಂಧಿಸಿದ ಸಮಸ್ಯೆಯಿಂದ ಘಟನೆ ಸಂಭವಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಆದಾಗ್ಯೂ, ಹೈವೋಲ್ಟೇಜ್ ವಿದ್ಯುತ್ ಪ್ರವಹಿಸಲು ಕಾರಣವೇನು ಎಂಬುದು ಪರಿಶೀಲನೆಯ ಬಳಿಕವಷ್ಟೇ ತಿಳಿಯಬೇಕಿದೆ.

ಘಟನೆಗೆ ಸಂಬಂಧಿಸಿದಂತೆ ಸಮಗ್ರ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮೆಸ್ಕಾಂ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಿರಣ ಕುಮಾರ್ ಹಾಗೂ ಸಹಾಯಕ ಎಂಜಿನಿಯರ್ ನವೀನ್ ಕುಮಾರ್ ತಿಳಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor