
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಹಾಗೂ ಮುಂದುವರಿದ ಹಂತದ ಬರ್ಕಿಟ್ ಲಿಂಫೋಮಾ (Burkitt Lymphoma) ಎಂಬ ಕ್ಯಾನ್ಸರ್ನಿಂದ ಬಳಲುತ್ತಿದ್ದ ಶಿವಮೊಗ್ಗದ 12 ವರ್ಷದ ಬಾಲಕಿ, ಸತತ 2 ವರ್ಷಗಳ ಚಿಕಿತ್ಸೆಯ ಬಳಿಕ ಸಾಮಾನ್ಯ ಜೀವನಕ್ಕೆ ಮರಳಿದ್ದಾಳೆ ಎಂದು ಯೆನಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ತಿಳಿಸಿದೆ. ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದು, ಆ ವರದಿಯ ವಿವರ ಹೀಗಿದೆ.
ಲಭ್ಯ ಮಾಹಿತಿ ಪ್ರಕಾರ, ಸಂತ್ರಸ್ತ ಬಾಲಕಿಗೆ 10 ವರ್ಷ ವಯಸ್ಸಾಗಿದ್ದಾಗ ಆಕೆಗೆ ಮೂತ್ರಪಿಂಡದ ಸಮಸ್ಯೆ ಕಾಣಿಸಿಕೊಂಡಿತ್ತು. ಆನಂತರ ಅವಳನ್ನ ಯೆನಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆತರಲಾಗಿತ್ತು. ಚಿಕಿತ್ಸೆಯ ಭಾಗವಾಗಿ ಡಯಾಲಿಸಿಸ್ ಆರಂಭಿಸಿದ ಸುಮಾರು 1 ತಿಂಗಳ ಬಳಿಕ ಬಾಲಕಿಯ ತಲೆ ಹಾಗೂ ಮುಖದ ಸುತ್ತಮುತ್ತ ಊತ ಕಾಣಿಸಿಕೊಂಡಿತ್ತು. ಜೊತೆಗೆ ಕುತ್ತಿಗೆಯ ಭಾಗದಲ್ಲಿ ಗಡ್ಡೆ ಕಾಣಿಸಿಕೊಂಡಿದ್ದವು. ಈ ಹಿನ್ನೆಲೆಯಲ್ಲಿ ವೈದ್ಯರು ರಕ್ತ ಪರೀಕ್ಷೆ ನಡೆಸಿದಾಗ ರಕ್ತದಲ್ಲಿ ಕ್ಯಾಲ್ಸಿಯಂ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿ ಹೆಚ್ಚಿರುವುದು ಪತ್ತೆಯಾಯಿತು. ಬಳಿಕ ನಡೆಸಿದ ಪಿಇಟಿ (PET) ಹಾಗೂ ಸಿಟಿ (CT) ಸ್ಕ್ಯಾನ್ ಪರೀಕ್ಷೆಗಳಲ್ಲಿ ಬಾಲಕಿಗೆ ಬರ್ಕಿಟ್ ಲಿಂಫೋಮಾ ಎಂಬ ಗಂಭೀರ ಸ್ವರೂಪದ ಕ್ಯಾನ್ಸರ್ ಇರುವುದು ದೃಢಪಟ್ಟಿತ್ತು.



ಬಾಲಕಿಯ ದೇಹದಲ್ಲಿ ವಿಪರೀತವೆಂಬಂತೆ ಹರಡಿದ್ದ ಕ್ಯಾನ್ಸರ್ಗೆ ಚಿಕಿತ್ಸೆ ನೀಡುವುದು ವೈದ್ಯರಿಗೆ ಸವಾಲಾಗಿತ್ತು. ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಔಷಧಿಗಳಿಂದ ಮೂತ್ರಪಿಂಡಗಳಿಗೆ ಮತ್ತಷ್ಟು ಹಾನಿಯಾಗದಂತೆ ಔಷಧಿ ಪ್ರಮಾಣವನ್ನು ಹೊಂದಾಣಿಕೆ ಮಾಡಿ ಚಿಕಿತ್ಸೆ ಮುಂದುವರಿಸಿದ ಡಾಕ್ಟರ್ಗಳು 10 ತಿಂಗಳುಗಳ ಕಾಲು ಸುದೀರ್ಘ ಚಿಕಿತ್ಸೆ ನೀಡಿದ್ದಾರೆ. ಈ ಮಧ್ಯೆ ಬಾಲಕಿಯ ಮೆದುಳಿನ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿದ ಸಮಸ್ಯೆಯು ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿದ್ದವು . ಇದೀಗ ಅಂತಿಮವಾಗಿ ಚಿಕಿತ್ಸೆಯ ನಂತರ ನಡೆಸಿದ ಪಿಇಟಿ ಸ್ಕ್ಯಾನ್ ಪರೀಕ್ಷೆಗಳಲ್ಲಿ ಕ್ಯಾನ್ಸರ್ ಸಂಪೂರ್ಣ ಉಪಶಮನಗೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಆದರೆ ಬಾಲಕಿಯ ಮೂತ್ರಪಿಂಡದ ಸಮಸ್ಯೆಯಿನ್ನೂ ಕ್ಲಿಯರ್ ಆಗಿಲ್ಲ ವಾದರೂ ಪ್ರಸ್ತುತ ಆಕೆಗೆ ಡಯಾಲಿಸಿಸ್ ಅಗತ್ಯವಿಲ್ಲ ಎಂದಿರುವ ವೈದ್ಯರು, ಒಟ್ಟಾರೆ 2 ವರ್ಷಗಳ ಚಿಕಿತ್ಸೆಯ ಬಳಿಕ ಬಾಲಕಿ ಸಾಮಾನ್ಯ ಜೀವನ ನಡೆಸುತ್ತಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.


