
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಶಿವಮೊಗ್ಗದ ಪಾರೇಖ್ ಮಾಲ್‌ನಲ್ಲಿ ನೂತನವಾಗಿ ಆರಂಭಿಸಲಾದ ಬಿ.ಎಸ್.ಸಿ. ಟೆಕ್ಸ್‌ಟೈಲ್ಸ್ ಉದ್ಘಾಟನೆಗೆ ಆಗಮಿಸಿದ್ದ ಕೇಂದ್ರ ಸಚಿವ ವಿ. ಸೋಮಣ್ಣ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಪಟ್ಟಿ ಪ್ರದರ್ಶಿಸಿದ ವಿಚಾರಕ್ಕೆ ಸಂಬಂಧಿಸಿದಂತೆ, ಕಾರ್ಯಕರ್ತರ ವಿರುದ್ಧ ಮಾತ್ರವಲ್ಲದೆ ಬಿ.ಎಸ್.ಸಿ. ಟೆಕ್ಸ್‌ಟೈಲ್ಸ್‌ನ ವ್ಯವಸ್ಥಾಪಕರ ವಿರುದ್ಧವೂ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೌದು, ನಿನ್ನೆ ಅನೇಕ ಕಾರ್ಯಕರ್ತರು ಶಿವಮೊಗ್ಗದ ವಿನಾಯಕ ಪಾರೇಖ್ ಮಾಲ್ ಮುಂಭಾಗದಲ್ಲಿ ಸಚಿವ ವಿ. ಸೋಮಣ್ಣ ಅವರ ಕಾರು ಬರುತ್ತಿದ್ದಂತೆ ಕಾರನ್ನು ಅಡ್ಡಗಟ್ಟಿ ಮುತ್ತಿಗೆ ಹಾಕಿದರು. ಅಷ್ಟೇ ಅಲ್ಲದೆ, ಕಪ್ಪು ಬಾವುಟವನ್ನೂ ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಸಚಿವರ ಎಸ್ಕಾರ್ಟ್ ಸಿಬ್ಬಂದಿ ಹಾಗೂ ಅಲ್ಲಿಯೇ ಇದ್ದ ಟ್ರಾಫಿಕ್ ಪೊಲೀಸರು ಕಾರ್ಯಕರ್ತರನ್ನು ಚದುರಿಸಲು ಹರಸಾಹಸ ಪಟ್ಟ ನಂತರ ಪರಿಸ್ಥಿತಿ ಸುಧಾರಣೆಗೆ ಬಂದಿತು.


ಈ ಕುರಿತಾಗಿ ಇಂದು ಪೊಲೀಸರು, ಕಾರನ್ನು ಅಡ್ಡಗಟ್ಟಿ ಕಪ್ಪುಪಟ್ಟಿ ಪ್ರದರ್ಶಿಸಿದ ಸುಮಾರು 20ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಅಷ್ಟೇ ಅಲ್ಲದೆ, ಉದ್ಘಾಟನಾ ಕಾರ್ಯಕ್ರಮಕ್ಕೆ ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿಗಳು ಬರುವುದು ತಿಳಿದಿದ್ದರೂ, ಗಣ್ಯರ ಸುರಕ್ಷತೆಯ ದೃಷ್ಟಿಯಿಂದ ಸ್ಥಳೀಯ ದೊಡ್ಡಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದಾಗಲಿ, ಬಂದೋಬಸ್ತ್ ಕರ್ತವ್ಯಕ್ಕೆ ಹೋಗಿದ್ದ ಸಿಬ್ಬಂದಿಗೆ ಯಾವುದೇ ಮುನ್ಸೂಚನೆ ನೀಡದೆ ಇರುವುದಾಗಲಿ ಹಾಗೂ ರಕ್ಷಣೆಗೆ ಸಿಬ್ಬಂದಿಯನ್ನು ಒದಗಿಸುವಂತೆ ಕೋರಿ ಮನವಿ ಮಾಡದೆ ನಿರ್ಲಕ್ಷ್ಯ ವಹಿಸಿರುವುದಾಗಿ ತಿಳಿಸಲಾಗಿದೆ.
ಕೇಂದ್ರ ಸಚಿವರಾದ ವಿ. ಸೋಮಣ್ಣ ಅವರ ಕಾರಿಗೆ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಯಲ್ಲಿ ಅಡ್ಡಿಪಡಿಸಿ, ಕಪ್ಪು ಬಟ್ಟೆ ತೋರಿಸಿ ಅವಮಾನಿಸಿದ್ದು, ಸಚಿವರ ಸುರಕ್ಷತೆಗೆ ಧಕ್ಕೆಯುಂಟಾಗಿದೆ. ಆದ್ದರಿಂದ, ಪಾರೇಖ್ ವಿನಾಯಕ ಮಾಲ್‌ನ ಬಿ.ಎಸ್. ಚನ್ನಬಸಪ್ಪ & ಸನ್ಸ್ ಬಟ್ಟೆ ಅಂಗಡಿಯ ವ್ಯವಸ್ಥಾಪಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರೊಬ್ಬರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.


