ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮಲೆನಾಡಿನ ಪ್ರಮುಖ ತಾಲೂಕು ಕೇಂದ್ರವಾದ ತೀರ್ಥಹಳ್ಳಿಗೆ ರೈಲ್ವೆ ಸಂಪರ್ಕ ಕಲ್ಪಿಸಬೇಕು. ಶಿವಮೊಗ್ಗದಿಂದ ಶೃಂಗೇರಿಗೆ ಪ್ರಸ್ತಾಪಿಸಲಾಗಿರುವ ಹೊಸ ರೈಲು ಮಾರ್ಗವನ್ನು ತೀರ್ಥಹಳ್ಳಿ ಮೂಲಕವೇ ನಿರ್ಮಿಸಬೇಕು. ಜೊತೆಗೆ ತಾಳಗುಪ್ಪದಿಂದ ಬೆಂಗಳೂರು ಮತ್ತು ಮೈಸೂರಿಗೆ ಸಂಚರಿಸುವ ಎಲ್ಲ ರೈಲುಗಳಿಗೂ ಅರಸಾಳು ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ನೀಡಬೇಕು ಎಂದು ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಅವರು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಧಾರ್ಮಿಕ, ಐತಿಹಾಸಿಕ ಹಾಗೂ ಪ್ರವಾಸೋದ್ಯಮದ ಮಹತ್ವವನ್ನು ಸಚಿವರ ಗಮನಕ್ಕೆ ತಂದಿರುವ ಶಾಸಕರು, ಈ ಭಾಗಕ್ಕೆ ರೈಲು ಸಂಪರ್ಕ ದೊರೆತರೆ ಸ್ಥಳೀಯ ಜನರ ಪ್ರಯಾಣಕ್ಕೆ ಅನುಕೂಲವಾಗುವುದರ ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿಗೂ ಅವಕಾಶ ದೊರೆಯಲಿದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.
ಶಿವಮೊಗ್ಗ–ಶೃಂಗೇರಿ ರೈಲು ಮಾರ್ಗ ತೀರ್ಥಹಳ್ಳಿ ಮೂಲಕ ಹಾದುಹೋಗಲಿ
ದೇಶದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಶೃಂಗೇರಿಗೆ ಶಿವಮೊಗ್ಗದಿಂದ ರೈಲು ಸಂಪರ್ಕ ಕಲ್ಪಿಸುವ ಯೋಜನೆ ಕೇಂದ್ರ ಸರ್ಕಾರದ ಮುಂದಿದೆ. ಈ ರೈಲ್ವೆ ಮಾರ್ಗವನ್ನು ತೀರ್ಥಹಳ್ಳಿ ಮೂಲಕ ಹಾದುಹೋಗುವಂತೆ ರೂಪಿಸಬೇಕು ಎಂಬುದು ಶಾಸಕ ಆರಗ ಜ್ಞಾನೇಂದ್ರ ಅವರ ಪ್ರಮುಖ ಬೇಡಿಕೆಯಾಗಿದೆ.
ಮಲೆನಾಡಿನ ಪ್ರಮುಖ ಪ್ರದೇಶವಾಗಿರುವ ತೀರ್ಥಹಳ್ಳಿ ಸುತ್ತಮುತ್ತ ಹಲವು ಧಾರ್ಮಿಕ, ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳಿವೆ. ಕುವೆಂಪು ಅವರೊಂದಿಗೆ ನಂಟಿರುವ ಕುಪ್ಪಳ್ಳಿ, ಕುಂದಾದ್ರಿ, ತೀರ್ಥಹಳ್ಳಿಗೆ ಸಮೀಪವಿರುವ ಕೊಡಚಾದ್ರಿ, ಪ್ರಕೃತಿಯ ಸೊಬಗಿನಿಂದ ಪ್ರವಾಸಿಗರನ್ನು ಸೆಳೆಯುವ ಆಗುಂಬೆ ಹಾಗೂ ಜೈನರ ಪ್ರಸಿದ್ಧ ಯಾತ್ರಾ ಸ್ಥಳವಾದ ಹೊಂಬುಜ ಸೇರಿದಂತೆ ಹಲವು ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ರೈಲು ಸಂಪರ್ಕ ಅನುಕೂಲವಾಗಲಿದೆ ಎಂದು ಶಾಸಕರು ವಿವರಿಸಿದ್ದಾರೆ.
ಈ ಭಾಗಕ್ಕೆ ರೈಲು ಸಂಚಾರ ಆರಂಭವಾದರೆ ಧಾರ್ಮಿಕ ಕ್ಷೇತ್ರಗಳಿಗೆ ಆಗಮಿಸುವ ಭಕ್ತರು ಮತ್ತು ಪ್ರವಾಸಿಗರ ಪ್ರಯಾಣಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ತೀರ್ಥಹಳ್ಳಿ ಮೂಲಕ ಶೃಂಗೇರಿಗೆ ರೈಲು ಮಾರ್ಗ ನಿರ್ಮಿಸುವ ನಿಟ್ಟಿನಲ್ಲಿ ಕೇಂದ್ರ ರೈಲ್ವೆ ಸಚಿವಾಲಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಗೋಪಾಲಗೌಡರು ಪ್ರತಿನಿಧಿಸಿದ್ದ ತೀರ್ಥಹಳ್ಳಿಗೆ ರೈಲು ಸಂಪರ್ಕದ ಮೂಲಕ ಗೌರವ ಸಲ್ಲಿಸಿ
ತೀರ್ಥಹಳ್ಳಿ ಕ್ಷೇತ್ರವನ್ನು ಶಾಂತವೇರಿ ಗೋಪಾಲಗೌಡರು ಹಾಗೂ ಕಡಿದಾಳ್ ಮಂಜಪ್ಪ ಅವರಂತಹ ನಾಯಕರು ಪ್ರತಿನಿಧಿಸಿದ್ದಾರೆ. ಈ ಕ್ಷೇತ್ರದ ಐತಿಹಾಸಿಕ ಹಿನ್ನೆಲೆಯನ್ನು ಪರಿಗಣಿಸಿ ರೈಲ್ವೆ ಸಂಪರ್ಕ ಕಲ್ಪಿಸುವ ನಿರ್ಧಾರ ಕೈಗೊಳ್ಳಬೇಕು ಎಂದು ಆರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ.
ಶಾಂತವೇರಿ ಗೋಪಾಲಗೌಡರ ಅಭಿಮಾನಿಯಾಗಿರುವ ಸಚಿವ ವಿ. ಸೋಮಣ್ಣ ಅವರು, ಗೋಪಾಲಗೌಡರು ಪ್ರತಿನಿಧಿಸಿದ್ದ ತೀರ್ಥಹಳ್ಳಿ ಮೂಲಕ ಶೃಂಗೇರಿಗೆ ರೈಲು ಮಾರ್ಗ ನಿರ್ಮಿಸಲು ಕ್ರಮ ಕೈಗೊಳ್ಳುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದು ಸಚಿವರನ್ನು ಕೋರಿದ್ದಾರೆ.
ಅರಸಾಳು ನಿಲ್ದಾಣದಲ್ಲಿ ಎಲ್ಲ ರೈಲುಗಳಿಗೂ ನಿಲುಗಡೆ ನೀಡಲು ಆಗ್ರಹ
ತೀರ್ಥಹಳ್ಳಿಗೆ ಹೊಸ ರೈಲು ಮಾರ್ಗದ ಬೇಡಿಕೆಯ ಜೊತೆಗೆ ಶಿವಮೊಗ್ಗ–ತಾಳಗುಪ್ಪ ರೈಲ್ವೆ ಮಾರ್ಗದಲ್ಲಿರುವ ಅರಸಾಳು ನಿಲ್ದಾಣದಲ್ಲಿ ಎಲ್ಲ ರೈಲುಗಳಿಗೂ ನಿಲುಗಡೆ ಕಲ್ಪಿಸಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಆರಗ ಜ್ಞಾನೇಂದ್ರ, ಅರಸಾಳು ರೈಲ್ವೆ ನಿಲ್ದಾಣವು ಹೊಸನಗರ ತಾಲೂಕಿನ ಬಹುತೇಕ ಭಾಗದ ಜನರಿಗೆ ಹಾಗೂ ತೀರ್ಥಹಳ್ಳಿ ತಾಲೂಕಿನ ಅರ್ಧ ಭಾಗದ ಪ್ರಯಾಣಿಕರಿಗೆ ಅನುಕೂಲಕರವಾಗಿದೆ. ಈ ಭಾಗದ ಜನರು ರೈಲು ಪ್ರಯಾಣಕ್ಕಾಗಿ ಅರಸಾಳು ನಿಲ್ದಾಣವನ್ನು ಅವಲಂಬಿಸಿದ್ದಾರೆ ಎಂದು ತಿಳಿಸಿದರು.
ತಾಳಗುಪ್ಪದಿಂದ ಬೆಂಗಳೂರು ಮತ್ತು ಮೈಸೂರಿಗೆ ಸಂಚರಿಸುವ ಎಲ್ಲ ರೈಲುಗಳನ್ನು ಅರಸಾಳು ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಇದರಿಂದ ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕುಗಳ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಸಚಿವರಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ರೈಲ್ವೆ ಇತಿಹಾಸದಲ್ಲಿ ಅರಸಾಳು ರೈಲ್ವೆ ನಿಲ್ದಾಣಕ್ಕೆ ವಿಶೇಷ ಸ್ಥಾನವಿದೆ. ಕನ್ನಡದ ನಟ, ನಿರ್ದೇಶಕ ದಿವಂಗತ ಶಂಕರ್‌ನಾಗ್ ಅವರ ಪ್ರಸಿದ್ಧ ‘ಮಾಲ್ಗುಡಿ ಡೇಸ್’ ಧಾರಾವಾಹಿಯ ಚಿತ್ರೀಕರಣ ನಡೆದ ನಿಲ್ದಾಣ ಎಂಬ ಹೆಗ್ಗಳಿಕೆಯೂ ಅರಸಾಳು ರೈಲ್ವೆ ನಿಲ್ದಾಣಕ್ಕಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ನೆನಪಿಸಿದರು.
ಪ್ರಸ್ತುತ ಈ ನಿಲ್ದಾಣದ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲ ರೈಲುಗಳಿಗೂ ನಿಲುಗಡೆ ಕಲ್ಪಿಸುವ ಅಗತ್ಯವಿದೆ. ಸಾರ್ವಜನಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಅಧಿಕಾರಿಗಳಿಗೆ ಕೂಡಲೇ ಸೂಚನೆ ನೀಡಬೇಕು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಆಗ್ರಹಿಸಿದ್ದಾರೆ.
