ಮಲೆನಾಡು ಟುಡೆ ಸುದ್ದಿ /ದಾವಣಗೆರೆ/ ಆನ್ಲೈನ್ ಫ್ರೀ ಫೈರ್ ಗೇಮ್ನ ಐಡಿ ನೀಡುವುದಾಗಿ ನಂಬಿಸಿ ಸ್ನೇಹಿತರು ಸುಮಾರು ₹4.11 ಲಕ್ಷ ಹಣ ಪಡೆದು, ಮತ್ತಷ್ಟು ಹಣ ತರುವಂತೆ ಬೆದರಿಕೆ ಹಾಕಿದ್ದರಿಂದ ಮನನೊಂದ 13 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ………… ತಾಲೂಕಿನಲ್ಲಿ ವರದಿ ಆಗಿದೆ. ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕ ಆನ್ಲೈನ್ ಫ್ರೀ ಫೈರ್ ಗೇಮ್ಗೆ ಸಂಬಂಧಿಸಿದ ಹಣಕಾಸಿನ ವ್ಯವಹಾರದಲ್ಲಿ ಸಿಲುಕಿಕೊಂಡಿದ್ದ ಎನ್ನಲಾಗಿದೆ. ಆತನ ಸ್ನೇಹಿತರು ಫ್ರೀ ಫೈರ್ ಗೇಮ್ ಐಡಿ ನೀಡುವುದಾಗಿ ನಂಬಿಸಿ ಸುಮಾರು ₹4.11 ಲಕ್ಷ ಹಣ ವಸೂಲಿ ಮಾಡಿದ್ದರಷ್ಟೆ ಅಲ್ಲದೆ ಮತ್ತಷ್ಟು ದುಡ್ಡಿಗೆ ಡಿಮ್ಯಾಂಡ್ ಇಟ್ಟಿದ್ದರಂತೆ. ಈ ಕಾರಣಕ್ಕೆ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಈ ಕುರಿತಾಗಿ ಪೋಷಕರು ನೀಡಿದ ದೂರಿನನ್ವಯ ಜಿಲ್ಲೆಯ ಪೊಲೀಸರು ಕೇಸ್ ಮಾಡಿದ್ದಾರೆ.
ಇನ್ನೂ ಮೃತ ವಿದ್ಯಾರ್ಥಿ ತನ್ನ ತಾಯಿ ಮೊಬೈಲ್ ಮೂಲಕ ₹11,000 ಹಣ ವರ್ಗಾವಣೆ ಮಾಡಿದ್ದ, ಇದರ ಬಗ್ಗೆ ಕೇಳಿದಾಗ, ಆತನ ಸ್ನೇಹಿತರು ಗೇಮ್ ಐಡಿ ನೀಡುವುದಾಗಿ ಹೇಳಿ ಹಣ ಪಡೆದುಕೊಂಡಿರುವುದು ಹಾಗೂ ಮತ್ತೆ ಹಣ ತರುವಂತೆ ಒತ್ತಾಯಿಸುತ್ತಿರುವ ವಿಷಯ ಪೋಷಕರಿಗೆ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಪೋಷಕರು ದೂರು ನೀಡಲು ಮುಂದಾಗಿದ್ದರು. ಆದರೆ ಆ ತಕ್ಷಣಕ್ಕೆ ಪ್ರಕರಣ ದಾಖಲಾಗಿರಲಿಲ್ಲ. ಈ ಮಧ್ಯೆ ವಾಪಸ್ ಮನೆಗೆ ಬಂದ ಬಳಿಕ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಏನಿದು ಫ್ರೀ ಫೈರ್ ಗೇಮ್? ಹೇಗೆ ಆಡುತ್ತಾರೆ?
ಫ್ರೀ ಫೈರ್ (Free Fire) ಎಂಬುದು ಗರೀನಾ (Garena) ಕಂಪನಿಯ ಆನ್ಲೈನ್ ಮೊಬೈಲ್ ಬ್ಯಾಟಲ್ ರಾಯಲ್ ಆಟವಾಗಿದೆ. ಈ ಆಟದಲ್ಲಿ ಹಲವು ಆಟಗಾರರು ಒಂದೇ ಡಿಜಿಟಲ್ ಯುದ್ಧಭೂಮಿಯಲ್ಲಿ ಸ್ಪರ್ಧಿಸುತ್ತಾರೆ. ಎದುರಾಳಿ ಆಟಗಾರರಿಂದ ರಕ್ಷಿಸಿಕೊಳ್ಳುತ್ತಾ ಕೊನೆಯವರೆಗೂ ಆಟದಲ್ಲಿ ಉಳಿಯುವುದು ಪ್ರಮುಖ ಉದ್ದೇಶವಾಗಿದೆ. ಆಟದಲ್ಲಿ ವಿವಿಧ ಪಾತ್ರಗಳು, ಆಯುಧಗಳ ವಿನ್ಯಾಸಗಳು, ಉಡುಪುಗಳು, ವಿಶೇಷ ವಸ್ತುಗಳು ಹಾಗೂ ಇತರ ಡಿಜಿಟಲ್ ಸೌಲಭ್ಯಗಳಿವೆ. ಆಟದ ಕೆಲವು ವಸ್ತುಗಳನ್ನು ಆಡುವ ಮೂಲಕ ಪಡೆಯಬಹುದಾದರೆ, ಮತ್ತಷ್ಟು ವಸ್ತುಗಳನ್ನು ಹಣ ನೀಡಿ ಖರೀದಿಸುವ ಅವಕಾಶವೂ ಇದೆ.
ಈ ಆಟದಲ್ಲಿ ‘ಡೈಮಂಡ್ಸ್’ (Diamonds) ಎಂಬ ಡಿಜಿಟಲ್ ಕರೆನ್ಸಿ ಬಳಕೆಯಾಗುತ್ತದೆ. ನೈಜ ಹಣ ನೀಡಿ ಡೈಮಂಡ್ಸ್ ಖರೀದಿಸುವ ಮೂಲಕ ಆಟದೊಳಗಿನ ಕೆಲವು ವಸ್ತುಗಳು ಹಾಗೂ ಸೌಲಭ್ಯಗಳನ್ನು ಪಡೆಯಬಹುದು. ಆಟಗಾರರು ಪರಸ್ಪರ ಸಂಪರ್ಕ ಸಾಧಿಸಲು ಮತ್ತು ತಂಡವಾಗಿ ಆಟವಾಡಲು ಸಂವಹನ ವ್ಯವಸ್ಥೆಯೂ ಇದೆ. ಪ್ರತಿಯೊಬ್ಬ ಆಟಗಾರನಿಗೂ ಪ್ರತ್ಯೇಕ ಗೇಮ್ ಖಾತೆ ಹಾಗೂ ಗುರುತಿನ ಸಂಖ್ಯೆ ಇರುತ್ತದೆ. ಆನ್ಲೈನ್ ಆಟಗಳಲ್ಲಿ ಉತ್ತಮ ಖಾತೆ, ವಿಶೇಷ ವಸ್ತುಗಳು, ಉನ್ನತ ರ್ಯಾಂಕ್ ಹೊಂದಿರುವ ಖಾತೆ ಅಥವಾ ಕಡಿಮೆ ಬೆಲೆಗೆ ಡೈಮಂಡ್ಸ್ ನೀಡುವುದಾಗಿ ಆಮಿಷವೊಡ್ಡಿ ಹಣ ಪಡೆಯುವ ವಂಚನೆಗಳಿಗೆ ಅವಕಾಶವಿದೆ. ಮೊದಲಿಗೆ ಕಡಿಮೆ ಹಣ ಪಡೆದು ನಂತರ ಮತ್ತಷ್ಟು ಹಣ ನೀಡುವಂತೆ ಒತ್ತಾಯಿಸುವುದು, ಹಣ ಪಡೆದ ನಂತರ ಭರವಸೆ ನೀಡಿದ ಖಾತೆ ಅಥವಾ ವಸ್ತುಗಳನ್ನು ಒದಗಿಸದಿರುವುದು, ನಕಲಿ ಲಿಂಕ್ಗಳ ಮೂಲಕ ಖಾತೆಯ ಮಾಹಿತಿ ಪಡೆಯುವುದು ಹಾಗೂ ಪಾಸ್ವರ್ಡ್ ಮತ್ತು ಒಟಿಪಿ ಕೇಳುವಂತಹ ವಿಧಾನಗಳ ಬಗ್ಗೆ ಈಗಾಗಲೇ ಗರೀನಾ ಸಂಸ್ಥೆ ಎಚ್ಚರಿಕೆ ನೀಡಿದೆ.
ದಾವಣಗೆರೆ ಜಿಲ್ಲೆಯ ಘಟನೆಯು ಇಂತಹದ್ದೆ ಒಂದು ಮಾದರಿಯ ಮೋಸ ಎನ್ನಲಾಗುತ್ತಿದ್ದು, ಈ ಬಗ್ಗೆ ಇದೀಗ ಜಿಲ್ಲೆಯ ಪೊಲೀಸರು ಎಚ್ಚೆತ್ತುಕೊಂಡು ತನಿಖೇ ಆರಂಭಿಸಿದ್ದಾರೆ.ಈ ನಿಟ್ಟಿನಲ್ಲಿ ಪೋಷಕರು ಮಕ್ಕಳ ವರ್ತನೆ ಬಗ್ಗೆ ಮಾಹಿತಿ ಅರಿಯುವ ಅಗತ್ಯವಿದೆ. ಆನ್ಲೈನ್ ಆಟಗಳು ಮನರಂಜನೆಯ ಮಾಧ್ಯಮವಾಗಿದ್ದರೂ ಅವುಗಳ ಅನಿಯಂತ್ರಿತ ಬಳಕೆ, ಹಣಕಾಸಿನ ವ್ಯವಹಾರಗಳು ಹಾಗೂ ಅಪರಿಚಿತರ ಸಂಪರ್ಕ ಕೆಲವು ಸಂದರ್ಭಗಳಲ್ಲಿ ಮಕ್ಕಳಿಗೆ ಸಮಸ್ಯೆ ಉಂಟುಮಾಡಬಹುದು.ಗೂಗಲ್ ಫ್ಯಾಮಿಲಿ ಲಿಂಕ್ನಂತಹ ಪೋಷಕರ ನಿಯಂತ್ರಣ ವ್ಯವಸ್ಥೆಗಳ ಮೂಲಕ ಮಕ್ಕಳ ಮೊಬೈಲ್ ಬಳಕೆಯ ಅವಧಿ, ಅಪ್ಲಿಕೇಶನ್ಗಳ ಬಳಕೆ ಹಾಗೂ ಗೂಗಲ್ ಪ್ಲೇ ಮೂಲಕ ನಡೆಯುವ ಖರೀದಿಗಳಿಗೆ ಅನುಮತಿ ನೀಡುವ ವ್ಯವಸ್ಥೆಯನ್ನು ನಿಯಂತ್ರಿಸಬಹುದು.
