ಮಲೆನಾಡು ಟುಡೆ ಸುದ್ದಿ / ಭದ್ರಾವತಿ / ನಗರದ ನ್ಯಾಯಾಲಯದ ಸಮೀಪವಿರುವ ಪೆಟ್ಟಿಗೆ ಅಂಗಡಿಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು, ಅಂಗಡಿಯಲ್ಲಿದ್ದ ಟೈಪ್‌ರೈಟರ್, ಜೆರಾಕ್ಸ್ ಯಂತ್ರಗಳು ಹಾಗೂ ಇತರ ಪರಿಕರಗಳು ಸುಟ್ಟುಹೋದ ಘಟನೆ ನಿನ್ನೆ ದಿನ ಬುಧವಾರ ಸಂಜೆ ಸಂಭವಿಸಿದೆ.
ನಗರದ ನ್ಯಾಯಾಲಯದ ಪಕ್ಕದಿಂದ ಜೈಭೀಮ್ ನಗರಕ್ಕೆ ತೆರಳುವ ಮಾರ್ಗದಲ್ಲಿರುವ ರಮೇಶ್ ಎಂಬುವವರ ಪೆಟ್ಟಿಗೆ ಅಂಗಡಿಯಲ್ಲಿ ಸಂಜೆ 7 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಅಗ್ನಿ ಅವಘಡದಲ್ಲಿ ಅಂಗಡಿಯೊಳಗಿದ್ದ ಟೈಪ್‌ರೈಟರ್, ಜೆರಾಕ್ಸ್ ಯಂತ್ರಗಳು ಸೇರಿದಂತೆ ಹಲವು ಪರಿಕರಗಳು ಬೆಂಕಿಗೆ ಆಹುತಿಯಾಗಿವೆ.
ಅಗ್ನಿ ಅವಘಡದ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದರು. ಬೆಂಕಿ ಅಕ್ಕಪಕ್ಕದ ಅಂಗಡಿಗಳಿಗೆ ಹರಡದಂತೆ ಅಗ್ನಿಶಾಮಕ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರು. ಘಟನೆಯ ಮಾಹಿತಿ ತಿಳಿದು ಪೊಲೀಸರು ಕೂಡ ಸ್ಥಳಕ್ಕೆ ಧಾವಿಸಿದ್ದು, ಹೆಚ್ಚಿನ ಅನಾಹುತ ಸಂಭವಿಸದಂತೆ ಕ್ರಮ ವಹಿಸಿದರು.
ಬೆಂಕಿ ಅವಘಡದಿಂದ ರಮೇಶ್ ಅವರ ಪೆಟ್ಟಿಗೆ ಅಂಗಡಿಯಲ್ಲಿದ್ದ ಯಂತ್ರೋಪಕರಣಗಳು ಹಾಗೂ ಇತರ ವಸ್ತುಗಳು ಹಾನಿಗೊಳಗಾಗಿವೆ. ಘಟನೆ ಸಂಬಂಧ ಭದ್ರಾವತಿಯ ಹಳೆನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
