ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ನಾಗರಹಾವು ಕಡಿತಕ್ಕೊಳಗಾಗಿದ್ದ ರೈತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೊಸನಗರದಿಂದ ಶಿವಮೊಗ್ಗದ ಆಸ್ಪತ್ರೆಗೆ ಕರೆತರಲು 108 ಆಂಬುಲೆನ್ಸ್ ಸಿಬ್ಬಂದಿ ನಿರಾಕರಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಘಟನೆಯ ವಿವರ
ಹೊಸನಗರ ತಾಲೂಕಿನ ನಗರ ಸಮೀಪದ ಕರಿಮನೆಯ ಕಾಡಿಗೆರೆ ಗ್ರಾಮದ ರೈತ ಉಮೇಶ್ ಎಂಬುವವರು ತಮ್ಮ ಜಮೀನಿನಲ್ಲಿ ಹುಲ್ಲು ಕೊಯ್ಯುತ್ತಿದ್ದಾಗ ನಾಗರಹಾವು ಕಡಿತಕ್ಕೊಳಗಾಗಿದ್ದರು. ತಕ್ಷಣವೇ ಅಸ್ವಸ್ಥಗೊಂಡ ಉಮೇಶ್ ಅವರನ್ನು ಹೊಸನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರ ಪರಿಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದರು.
ಈ ಸಂದರ್ಭದಲ್ಲಿ ರೋಗಿಯನ್ನು ಶಿವಮೊಗ್ಗಕ್ಕೆ ಕರೆದೊಯ್ಯಲು 108 ಆಂಬುಲೆನ್ಸ್ ಸಿಬ್ಬಂದಿ ನಿರಾಕರಿಸಿದ್ದಾರೆ ಎನ್ನಲಾಗಿದೆ. ಇದನ್ನು ಸ್ಥಳೀಯರು ಹಾಗೂ ಸಾರ್ವಜನಿಕರು ಪ್ರಶ್ನಿಸಿದಾಗ, ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ರೆಫರ್ ಮಾಡಿದ ರೋಗಿಗಳನ್ನು ಕರೆದೊಯ್ಯಲು 108 ಸೇವೆಯ ನಿಯಮಗಳಲ್ಲಿ ಅವಕಾಶವಿಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ.
ಆದರೆ, ಸ್ಥಳೀಯರ ಒತ್ತಾಯದ ಹಿನ್ನೆಲೆಯಲ್ಲಿ ಕೊನೆಗೂ ಉಮೇಶ್ ಅವರನ್ನು 108 ಆಂಬುಲೆನ್ಸ್‌ನಲ್ಲೇ ಶಿವಮೊಗ್ಗದ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿದೆ. 108 ಸೇವೆಯ ನಿಯಮಗಳ ಕುರಿತು ಸಂಬಂಧಪಟ್ಟ ಆಸ್ಪತ್ರೆಗಳು ಮತ್ತು ಇಲಾಖೆಯು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಬೇಕು ಎಂದು ಸ್ಥಳೀಯರು ಈ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.
