ಮಲೆನಾಡು ಟುಡೇ ಸುದ್ದಿ / ಶಿಕಾರಿಪುರ : ನೀವೆಲ್ಲರೂ ಸಾಮಾನ್ಯವಾಗಿ ಎತ್ತಿನಗಾಡಿ, ಕುದುರೆಗಾಡಿಗಳನ್ನು ನೋಡಿಯೇ ಇರುತ್ತೀರಿ. ಈ ರೀತಿಯ ಗಾಡಿಗಳು ಇರುತ್ತವೆ ಎಂಬುದು ಎಲ್ಲರಿಗೂ ತಿಳಿದಿರುತ್ತದೆ, ಅದರ ಕಲ್ಪನೆಯೂ ಸಹ ಇರುತ್ತದೆ. ಆದರೆ ಎಂದಾದರೂ ನೀವು ಟಗರುಗಳ ಗಾಡಿಯನ್ನು ನೋಡಿದ್ದೀರಾ? ಕೇಳಲು ವಿಚಿತ್ರ ಎನಿಸಿದರೂ ಈ ದೃಶ್ಯ ಕಂಡುಬಂದಿದ್ದು ಶಿಕಾರಿಪುರದ ಭಾರತ್ ಜೋಡೋ 2.0 ಪಾದಾಯಾತ್ರೆಯಲ್ಲಿ.
ಇಂದು ಶಿಕಾರಿಪುರದಲ್ಲಿ ಭಾರತ್ ಜೋಡೋ ಯಾತ್ರೆಯ ಆಶಯಗಳನ್ನು ಮತ್ತೊಮ್ಮೆ ಜನರಿಗೆ ತಲುಪಿಸುವ ಉದ್ದೇಶದಿಂದ ರಾಜ್ಯದ 82 ವಿಧಾನಸಭಾ ಕ್ಷೇತ್ರಗಳಲ್ಲಿ ಹಮ್ಮಿಕೊಳ್ಳಲಾಗಿರುವ ಭಾರತ್ ಜೋಡೋ 2.0 ಕಾರ್ಯಕ್ರಮಕ್ಕೆ ಶಿಕಾರಿಪುರದ ಕಿಟ್ಟದಹಳ್ಳಿಯಿಂದ ಚಾಲನೆ ನೀಡಲಾಯಿತು.
ಕೆಪಿಸಿಸಿ ರಾಜ್ಯಾಆಧ್ಯಕ್ಷಬಿ. ಕೆ. ಹರಿಪ್ರಸಾದ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಪ್ರಮುಖ ನಾಯಕರು ಭಾಗವಹಿಸಿದ್ದರು. ಸರಿಸುಮಾರು ಬೆಳಿಗ್ಗೆ 11:15ಕ್ಕೆ ಪಾದಯಾತ್ರೆ ಆರಂಭವಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಂದು ಹಾಗೂ ಕಪ್ಪು ಬಣ್ಣದ ಎರಡು ಟಗರುಗಳನ್ನು ಪಾದಾಯಾತ್ರೆಯಲ್ಲಿ ರಸ್ತೆಗಿಳಿಸಿದ್ದರು.
ರಸ್ತೆಗಿಳಿಸಿದ್ದು ಅಷ್ಟೇ ಅಲ್ಲದೆ, ಅವುಗಳ ತಲೆಯ ಭಾಗಕ್ಕೆ ಗೆಜ್ಜೆ ಕಟ್ಟಿ, ಬೆನ್ನಿನ ಮೇಲೆ ಕಾಂಗ್ರೆಸ್ ಬಾವುಟವನ್ನು ಹೊದಿಸಲಾಗಿತ್ತು. ಟಗರುಗಳ ಗಾತ್ರಕ್ಕೆ ತಕ್ಕಂತೆ ಎತ್ತಿನಗಾಡಿಯ ಮಾದರಿಯಲ್ಲೇ ಗಾಡಿಯನ್ನು ಸಿದ್ಧಪಡಿಸಿ, ಟಗರುಗಳು ಆ ಗಾಡಿಯನ್ನು ಎಳೆದುಕೊಂಡು ಹೋಗುವಂತೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ದಾರಿಯುದ್ದಕ್ಕೂ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ಪರವಾಗಿ ಕೂಗಿದ ಘೋಷಣೆಗಳು ಸಾರ್ವಜನಿಕರ ಗಮನ ಸೆಳೆದವು.
