ಶಿವಮೊಗ್ಗ: ಬ್ಯಾಂಕ್ ಲಾಕರ್‌ನಲ್ಲಿದ್ದ 120 ಗ್ರಾಂ ಚಿನ್ನಾಭರಣ ನಾಪತ್ತೆ; ಸಿಬ್ಬಂದಿ ಮೇಲೆಯೇ ಸಾರ್ವಜನಿಕರ ಶಂಕೆ!

ಹಂಚಿಕೊಳ್ಳಿ
WhatsApp Facebook X Telegram
ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ
ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ

ಮಲೆನಾಡುಟುಡೆ  ಸುದ್ದಿ ಶಿವಮೊಗ್ಗ : ಶಿವಮೊಗ್ಗ ನಗರದ ಕೋಟೆ ರಸ್ತೆಯಲ್ಲಿರುವ ಪ್ರಮುಖ ಬ್ಯಾಂಕ್ ಒಂದರ ಲಾಕರ್‌ನಲ್ಲಿ ಇರಿಸಲಾಗಿದ್ದ ಭಾರಿ ಪ್ರಮಾಣದ ಆಭರಣಗಳು ದಿಢೀರ್ ನಾಪತ್ತೆಯಾಗಿರುವುದು  ಬೆಳಕಿಗೆ ಬಂದಿದೆ. 75 ವರ್ಷದ ವೃದ್ಧೆ ಲಕ್ಷ್ಮಿ ಸತ್ಯನಾರಾಯಣ ಎಂಬುವರು ಇಟ್ಟಿದ್ದ ಸುಮಾರು 120 ಗ್ರಾಂ ತೂಕದ ಚಿನ್ನಾಭರಣಗಳು ಕಳವಾಗಿರುವ ಕುರಿತು ನಗರದ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದೂರುದಾರರು ಕಳೆದ ನಾಲ್ಕು ವರ್ಷಗಳಿಂದ ಈ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದು, ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಸುಮಾರು 400 ಗ್ರಾಂ ತೂಕದ ಚಿನ್ನಾಭರಣಗಳನ್ನು ಬ್ಯಾಂಕ್ ಲಾಕರ್‌ನಲ್ಲಿ ಇರಿಸಿದ್ದರು. ಬ್ಯಾಂಕ್ ನಿಯಮಾವಳಿಗಳ ಪ್ರಕಾರ ಲಾಕರ್ ತೆರೆಯಲು ಗ್ರಾಹಕರ ಬಳಿಯಿರುವ ಒಂದು ಕೀ ಹಾಗೂ ಬ್ಯಾಂಕ್ ಸಿಬ್ಬಂದಿ ಬಳಿಯಿರುವ ಮತ್ತೊಂದು ಕೀಯನ್ನು ಏಕಕಾಲದಲ್ಲಿ ಬಳಸಬೇಕಾಗುತ್ತದೆ . ಹೀಗಿದ್ದರೂ, ಇತ್ತೀಚೆಗೆ ಗ್ರಾಹಕರು ಲಾಕರ್ ಪರಿಶೀಲಿಸಿದಾಗ ನವರತ್ನ ನೆಕ್ಲೇಸ್, ಹವಳದ ಸರ, ಚಿನ್ನದ ಬಳೆಗಳು ಹಾಗೂ ಓಲೆ ಸೆಟ್‌ಗಳು ಸೇರಿದಂತೆ ಆಭರಣಗಳು ಕಣ್ಮರೆಯಾಗಿರುವುದು ಬೆಳಕಿಗೆ ಬಂದಿದೆ.

ಘಟನೆ ಸಂಬಂಧ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಯನ್ನು ವಿಚಾರಿಸಿದರೂ ಯಾವುದೇ ಜವಾಬ್ದಾರಿಯುತ ಉತ್ತರ ಸಿಗದ ಹಿನ್ನೆಲೆಯಲ್ಲಿ ಗ್ರಾಹಕರು ಪೊಲೀಸ್ ಮೆಟ್ಟಿಲೇರಿದ್ದಾರೆ. ಎರಡು ಕೀಲಿಗಳ ಸುರಕ್ಷತಾ ವ್ಯವಸ್ಥೆಯನ್ನೂ ಮೀರಿ ಆಭರಣ ನಾಪತ್ತೆಯಾಗಿರುವುದರಿಂದ ಬ್ಯಾಂಕ್ ಸಿಬ್ಬಂದಿಯೇ ಈ ಕೃತ್ಯದ ಹಿಂದೆ ಇರುವ ಶಂಕೆ ವ್ಯಕ್ತವಾಗಿದೆ . ಸದ್ಯ ಕೋಟೆ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದಾರೆ. 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor