ಮಲೆನಾಡು ಟುಡೇ ಸುದ್ದಿ / ಶಿವಮೊಗ್ಗ : ಬೆಳ್ಳಂಬೆಳಿಗ್ಗೆ ಶಿವಮೊಗ್ಗದ ರೈಲ್ವೇ ನಿಲ್ದಾಣದ ಬಳಿ ಇರುವ ಪ್ರೀಪೇಯ್ಡ್ ಆಟೋ ಕೌಂಟರ್‌ಗೆ ಟ್ರಾಫಿಕ್ ಪೊಲೀಸರು ಅನಿರೀಕ್ಷಿತವಾಗಿ ಭೇಟಿ ನೀಡಿದ ಘಟನೆ ಇಂದು ಬೆಳಗ್ಗಿನ ಜಾವ 4:30ಕ್ಕೆ ನಡೆದಿದೆ.
ಶಿವಮೊಗ್ಗದಲ್ಲಿ ಆಟೋ ಚಾಲಕರು ಪ್ರಯಾಣಿಕರಿಂದ ನಿಗದಿತ ದರಕ್ಕಿಂತ ಹೆಚ್ಚಿನ ದರವನ್ನು ಪಡೆಯುವುದನ್ನು ತಡೆಯಲು ಪ್ರೀಪೇಯ್ಡ್ ಆಟೋ ಕೌಂಟರ್‌ಗಳನ್ನು ಜಾರಿಗೆ ತರಲಾಗಿದೆ. ಶಿವಮೊಗ್ಗದ ರೈಲ್ವೇ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ ಸೇರಿದಂತೆ ಅನೇಕ ಕಡೆ ಪ್ರೀಪೇಯ್ಡ್ ಆಟೋ ಕೌಂಟರ್‌ಗಳನ್ನು ತೆರೆಯಲಾಗಿದೆ. ಆದರೆ ಪ್ರಯಾಣಿಕರು ಪ್ರೀಪೇಯ್ಡ್ ಆಟೋ ಬುಕ್ ಮಾಡಿ ಹಣ ಪಾವತಿಸಿದ್ದರೂ ಸಹ ಅನೇಕ ಚಾಲಕರು ಪ್ರಯಾಣಿಕರಿಂದ ಹೆಚ್ಚಿನ ಹಣ ಕೇಳುತ್ತಿದ್ದಾರೆ ಎಂಬ ದೂರು ಟ್ರಾಫಿಕ್ ಪೊಲೀಸರಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ಸಿಪಿಐ ದೇವರಾಜ್ ನೇತೃತ್ವದ ಪೊಲೀಸ್ ತಂಡವು ಇಂದು ಬೆಳಗ್ಗಿನ ಜಾವ 4:30ಕ್ಕೆ ರೈಲ್ವೇ ನಿಲ್ದಾಣದ ಪ್ರೀ-ಪೇಯ್ಡ್ ಆಟೋ ಕೌಂಟರ್‌ಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ತಪಾಸಣೆ ನಡೆಸಿತು. ಹಾಗೆಯೇ ಈ ಸಂದರ್ಭದಲ್ಲಿ ಆಟೋ ಚಾಲಕರಿಗೆ ಪ್ರೀ-ಪೇಯ್ಡ್ ಟಿಕೆಟ್‌ನಲ್ಲಿ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚುವರಿ ಹಣವನ್ನು ಪ್ರಯಾಣಿಕರಿಂದ ಪಡೆಯದಂತೆ ಎಚ್ಚರಿಕೆ ನೀಡಿದರು. ಈ ವೇಳೆ, ಪ್ರಯಾಣಿಕರು ರೈಲ್ವೇ ನಿಲ್ದಾಣದಿಂದ ಆಟೋದಲ್ಲಿ ಪ್ರಯಾಣಿಸುವಾಗ ಪ್ರೀ-ಪೇಯ್ಡ್ ಕೌಂಟರ್‌ನಿಂದ ಟಿಕೆಟ್ ಪಡೆದು, ನಿಗದಿತ ದರದಂತೆ ಸುರಕ್ಷಿತ ಹಾಗೂ ಪಾರದರ್ಶಕವಾಗಿ ಪ್ರಯಾಣಿಸುವಂತೆ ಜಾಗೃತಿ ಮೂಡಿಸಿದರು.
