ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದಲ್ಲಿ ಪುಡ್ ಸ್ಟಾಲ್ ಹಾಗೂ ಮಳಿಗೆ, ಹೋಟೆಲ್, ಉದ್ಯಮಗಳ ಮೇಲಿನ ದಾಳಿ ಮುಂದುವರಿದಿದೆ. ಆಹಾರ ಸುರಕ್ಷತಾ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ತಮ್ಮ ದಾಳಿ ಮುಂದುವರಿಸಿದ್ದು, ಉಪವಿಭಾಗಾಧಿಕಾರಿ ಡಾ. ಎಚ್.ಪಿ.ಎಸ್. ಮೈತ್ರಿ ನೇತೃತ್ವದಲ್ಲಿ ನಿನ್ನೆ ದಿನ ಮಂಗಳವಾರ ನಗರದ ವಿವಿಧ ಹೋಟೆಲ್‌ಗಳು ಹಾಗೂ ಕಾಂಡಿಮೆಂಟ್ಸ್‌ಗಳಲ್ಲಿ ಪರಿಶೀಲನೆ ನಡೆಸಲಾಗಿದೆ.
ನಗರದ ತಾಜ್ ಹಾಗೂ ಬ್ರೈಟ್ ನಾನ್ ವೆಜ್ ಹೋಟ್ಲುಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು ವಿಶೇಷವಾಗಿತ್ತು. ಈ ಹೋಟೆಲ್ಗಳಲ್ಲಿನ ಅಡುಗೆಮನೆ, ಆಹಾರ ಪದಾರ್ಥ ಹಾಗೂ ಅಡುಗೆಗೆ ಬಳಕೆಯಾಗುತ್ತಿದ್ದ ಸಾಮಗ್ರಿ ಹಾಗೂ ಸ್ವಚ್ಛತೆಯ ಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಪರಿಶೀಲನೆ ಸಂದರ್ಭದಲ್ಲಿ ಕೆಲವು ನೂನ್ಯತೆ ಪತ್ತೆಯಾಗಿದೆ. ಅವಧಿ ಮೀರಿದ ಆಹಾರ ಪದಾರ್ಥ, ಅಸ್ವಚ್ಛತೆ ಹಾಗೂ ಕಳಪೆ ಗುಣಮಟ್ಟದ ಅಡುಗೆ ಎಣ್ಣೆ ಬಳಕೆ ಗಮನಕ್ಕೆ ಬಂದಿದೆ.
ತಾಜ್ ಹೋಟೆಲ್‌ನಲ್ಲಿ ಅವಧಿ ಮುಗಿದ ಹಾಲು ಪತ್ತೆಯಾದರೆ. ಬೈಟ್ ಹೋಟೆಲ್‌ನಲ್ಲಿ ತಯಾರಿಸಿದ ದಿನಾಂಕ ಹಾಗೂ ಬಳಕೆಯ ಅವಧಿಗೆ ಸಂಬಂಧಿಸಿದ ಯಾವುದೇ ಮಾಹಿತಿ ಇಲ್ಲದ ತಂಪು ಪಾನೀಯ ಸಿಕ್ಕಿದೆ. ಅಲ್ಲದೆ ಮಾಂಸ ಪದಾರ್ಥಗಳ ಬಗ್ಗೆ ಅಧಿಕಾರಿಗಳಿಗೆ ಕೆಲವೊಂದು ಪ್ರಶ್ನೆ ಮೂಡಿದೆ.
ಹೋಟೆಲ್‌ಗಳಲ್ಲಿ ತಯಾರಿಸಲಾಗುತ್ತಿದ್ದ ಆಹಾರದ ಗುಣಮಟ್ಟವನ್ನೂ ಅಧಿಕಾರಿಗಳು ಪರಿಶೀಲಿಸಿದ್ದು, ಕೆಲವು ಆಹಾರ ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಆಹಾರ ಪದಾರ್ಥಗಳ ಗುಣಮಟ್ಟದಲ್ಲಿ ಲೋಪವಿದೆಯೇ, ಬಳಕೆಯಾಗುತ್ತಿರುವ ಪದಾರ್ಥಗಳು ನಿಗದಿತ ಮಾನದಂಡಗಳಿಗೆ ಅನುಗುಣವಾಗಿವೆಯೇ ಎಂಬುದನ್ನು ಪರೀಕ್ಷಿಸಲು ಈ ಮಾದರಿಗಳನ್ನು ಸಂಗ್ರಹಿಸಲಾಗಿದೆ ಅಂತಾ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನ ಅಡುಗೆಗೆ ಬಳಸುತ್ತಿದ್ದ ಎಣ್ಣೆಯನ್ನ ನೋಡಿ ಉಪವಿಭಾಗಾಧಿಕಾರಿ ಡಾ. ಮೈತ್ರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಸ್ಟಮರ್ಗಳ ಆರೋಗ್ಯದ ದೃಷ್ಟಿಯಿಂದ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸೂಚಿಸಿದ್ದಾರೆ.
ಉಳಿದಂತೆ, ಅಧಿಕಾರಿಗಳು ನಗರದ ಮಿಳಘಟ್ಟದಲ್ಲಿರುವ ಲಕ್ಷ್ಮಿ ಕಾಂಡಿಮೆಂಟ್ಸ್ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪರಿಶೀಲನೆ ಸಂದರ್ಭದಲ್ಲಿ ಅಲ್ಲಿ ಸ್ವಚ್ಛತೆಯ ಕೊರತೆ ಕಂಡುಬಂದಿದೆ. ಮೈಸೂರು ಪಾಕ್ ತಯಾರಿಕೆಯಲ್ಲಿ ಕೃತಕ ಬಣ್ಣ ಬಳಸಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಅಡುಗೆಗೆ ಬಳಸುತ್ತಿದ್ದ ಎಣ್ಣೆಯ ಗುಣಮಟ್ಟದಲ್ಲೂ ಸಮಸ್ಯೆ ಕಂಡುಬಂದಿದೆ. ಲಕ್ಷ್ಮಿ ಕಾಂಡಿಮೆಂಟ್ಸ್‌ನ ಪರವಾನಗಿಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಕೇಳಿದಾಗ, ಸ್ಥಳದಲ್ಲಿಯೇ ಪೂರಕ ದಾಖಲೆಗಳನ್ನು ಪ್ರದರ್ಶಿಸಲು ಸಾಧ್ಯವಾಗಿಲ್ಲ. ನಂತರ ದಾಖಲೆಗಳನ್ನು ಸಲ್ಲಿಸುವುದಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ ಪರವಾನಗಿ ಹಾಗೂ ಇತರೆ ದಾಖಲೆಗಳನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಡಾ. ಮೈತ್ರಿ ಸೂಚಿಸಿದ್ದಾರೆ.
ಆಹಾರ ಪದಾರ್ಥಗಳಿಗೆ ರಾಸಾಯನಿಕ ಅಥವಾ ಕೃತಕ ಬಣ್ಣಗಳನ್ನು ಬಳಸಬಾರದು. ಆಹಾರದ ಗುಣಮಟ್ಟ, ಸ್ವಚ್ಛತೆ, ಅಡುಗೆ ಎಣ್ಣೆಯ ಗುಣಮಟ್ಟ ಸೇರಿದಂತೆ ಪರಿಶೀಲನೆಯಲ್ಲಿ ಕಂಡುಬಂದಿರುವ ಲೋಪಗಳನ್ನು 15 ದಿನಗಳೊಳಗೆ ಸರಿಪಡಿಸಿಕೊಳ್ಳಬೇಕು. ಸೂಚನೆ ಪಾಲಿಸದಿದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು
ಡಾ. ಮೈತ್ರಿ ಎಚ್ಚರಿಕೆ, ಉಪವಿಭಾಗಾಧಿಕಾರಿ
ಹೋಟೆಲ್ ಹಾಗೂ ಆಹಾರ ಮಳಿಗೆಗಳಲ್ಲಿ ಗ್ರಾಹಕರಿಗೆ ನೀಡುವ ಆಹಾರ ಸುರಕ್ಷಿತವಾಗಿರಬೇಕು. ಅವಧಿ ಮೀರಿದ ಪದಾರ್ಥಗಳು, ಗುಣಮಟ್ಟವಿಲ್ಲದ ಎಣ್ಣೆ ಹಾಗೂ ಅನುಮತಿಸದ ಬಣ್ಣಗಳ ಬಳಕೆ ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂಧು ಅಧಿಕಾರಿಗಳು ಎಚ್ಚರಿಸಿದ್ದಾರೆ. ದಾಳಿ ವೇಳೆ ಶಿವಮೊಗ್ಗ ತಹಶೀಲ್ದಾರ್ ರಾಜೀವ್, ಕಂದಾಯ ಇಲಾಖೆಯ ಲಿಂಗರಾಜ್, ಕೀರ್ತಿ ಕುಮಾರ್ ಸೇರಿದಂತೆ ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
