ಶಿವಮೊಗ್ಗ ; ಪ್ರೇಮದ ಊರಲಿ ಪ್ರೀತಿ, ಭಾಂದವ್ಯದ ಬೆಸುಗೆಗೆ ಪ್ರೇಕ್ಷಕರು ಫೀದಾ : ಕಂಟೆಟ್​​ ಇದ್ರೆ ಸಿನಿಮಾ ಗೆಲ್ಲುತ್ತೆ ಅನ್ನೋದಕ್ಕೆ ಈ ಚಿತ್ರವೇ ಸಾಕ್ಷಿ

ಹಂಚಿಕೊಳ್ಳಿ
WhatsApp Facebook X Telegram
ಪ್ರೇಮದ ಊರಲಿ ಸಿನಿಮಾ
ಪ್ರೇಮದ ಊರಲಿ ಸಿನಿಮಾ

ಮಲೆನಾಡು ಟುಡೇ ಸುದ್ದಿ / ಶಿವಮೊಗ್ಗ: ಪ್ರೇಮದ ಊರಲಿ ಚಿತ್ರ ಸದ್ಯ ಆಲ್ ಓವರ್ ಕರ್ನಾಟಕ ಟ್ರೆಂಡಿಂಗ್‌ನಲ್ಲಿದ್ದು, ಸಿನಿಮಾದ ಕಂಟೆಂಟ್ ಧಮಾಕ ಸೃಷ್ಟಿಸಿದೆ. ವರ್ಡ್ ಆಫ್ ಮೌತ್ (ಜನರ ಮೆಚ್ಚುಗೆಯ ಮಾತು) ಚೆನ್ನಾಗಿದ್ದರೆ ಎಂಥದ್ದೇ ಚಿತ್ರವಾದರೂ ಗೆಲ್ಲುತ್ತದೆ ಎನ್ನುವುದಕ್ಕೆ ಈ ಸಿನಿಮಾ ಸ್ಪಷ್ಟ ಉದಾಹರಣೆಯಾಗಿದೆ. ಚಿತ್ರವು ಇದೀಗ ಚಿತ್ರಮಂದಿರಗಳಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಪ್ರೇಮದ ಊರಲಿ’ ಸಿನಿಮಾ ಸೆಪ್ಟೆಂಬರ್ 25 ರಂದು ರಾಜ್ಯದಾದ್ಯಂತ ಬಿಡುಗಡೆಯಾಯಿತು. ಬಿಡುಗಡೆಯಾದ ಮೊದಲ ದಿನ ಈ ಚಿತ್ರ ಕರ್ನಾಟಕದಲ್ಲಿ 12 ಲಕ್ಷ ಹಾಗೂ ದೇಶಾದ್ಯಂತ (ಆಲ್ ಇಂಡಿಯಾ) 42 ಲಕ್ಷ ಕಲೆಕ್ಷನ್ ಮಾಡಿತ್ತು. ಈ ಸಿನಿಮಾದ ಬಜೆಟ್ 2 ರಿಂದ 3 ಕೋಟಿ ಎಂದು ಅಂದಾಜಿಸಲಾಗಿದೆ. ಈ ಚಿತ್ರದ ಯಶಸ್ಸು ಮತ್ತು ಗಳಿಕೆಯ ಹಾದಿಯನ್ನು ಗಮನಿಸಿದರೆ, ನಮಗೆ ಇತ್ತೀಚೆಗೆ ಬಾಲಿವುಡ್‌ನಲ್ಲಿ ಸಖತ್ ಟ್ರೆಂಡಿಂಗ್‌ನಲ್ಲಿರುವ ಹನುಮಾನ್ ಅಂಶ ಎಂಬ ಚಿತ್ರ ನೆನಪಿಗೆ ಬರುತ್ತದೆ. ಹನುಮಾನ್ ಅಂಶ ಚಿತ್ರದ ಕಲೆಕ್ಷನ್ ಹಾಗೂ ಬಜೆಟ್‌ಗೆ ಪ್ರೇಮದ ಊರಲಿ ಸಿನಿಮಾ ಬಹಳ ಹತ್ತಿರದಲ್ಲಿದ್ದು, ಅದೇ ಹಾದಿಯಲ್ಲಿ ಯಶಸ್ಸಿನತ್ತ ಸಾಗುತ್ತಿದೆ.

ಕಂಟೆಂಟ್ ಮತ್ತು ಜನರ ಮೆಚ್ಚುಗೆಯೇ ಚಿತ್ರದ ಪ್ಲಸ್ ಪಾಯಿಂಟ್

ಚಿತ್ರದಲ್ಲಿ ಗಟ್ಟಿಯಾದ ಕಂಟೆಂಟ್ ಇದ್ದು, ವರ್ಡ್ ಆಫ್ ಮೌತ್ ಸಿಕ್ಕರೆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದಕ್ಕೆ ಈ ಹಿಂದಿನ ಕಾಂತಾರ ಹಾಗೂ ಸು ಫ್ರಮ್ ಸೋ ಸಿನಿಮಾಗಳೇ ಸ್ಪಷ್ಟ ನಿದರ್ಶನ. ಯಾವುದೇ ದೊಡ್ಡ ಹೈಪ್ ಇಲ್ಲದೆ ಮಾಮೂಲಿಯಾಗಿ ಬಿಡುಗಡೆಯಾಗಿ, ನಂತರ ಬಾಕ್ಸ್ ಆಫೀಸ್ ಶೇಕ್ ಮಾಡಿದ ಸಿನಿಮಾಗಳವು. ಅದರಂತೆ ಪ್ರೇಮದ ಊರಲಿ ಸಿನಿಮಾ ಸಹ ದಿನದಿಂದ ದಿನಕ್ಕೆ ರಾಜ್ಯದಾದ್ಯಂತ ಹೈಪ್ ಪಡೆದುಕೊಳ್ಳುತ್ತಿದೆ.

ಮೊದಲ ದಿನ ಕರ್ನಾಟಕದಲ್ಲಿ 62 ಶೋಗಳನ್ನು ಹೊಂದಿದ್ದ ಈ ಸಿನಿಮಾ, ಇದೀಗ ಪ್ರತಿದಿನ 461 ಕ್ಕೂ ಹೆಚ್ಚು ಶೋಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ ಮೊದಲ ದಿನ 12 ಲಕ್ಷ ಗಳಿಸಿದ್ದ ಸಿನಿಮಾ, 5ನೇ ದಿನದ ವೇಳೆಗೆ ಬರೋಬ್ಬರಿ 82 ಲಕ್ಷ ಗಳಿಸುವಲ್ಲಿ ಯಶಸ್ವಿಯಾಗಿದೆ. ಅದೇ ರೀತಿ ಶಿವಮೊಗ್ಗದ ಭಾರತ್ ಸಿನಿಮಾಸ್‌ನಲ್ಲಿ 7 ಶೋಗಳನ್ನು ನೀಡಲಾಗಿದ್ದು, ಮಧ್ಯಾಹ್ನ 1:15 ರ ಶೋ ಈಗಾಗಲೇ ಬಹುತೇಕ ಭರ್ತಿಯಾಗಿದೆ. ಹೀಗೆಯೇ ಮುಂದುವರಿದರೆ ಈ ಸಿನಿಮಾ ಕೋಟಿ ಕೋಟಿ ಬಾಚುವುದರಲ್ಲಿ ಯಾವುದೇ ಸಂದೇಹವಿಲ್ಲ.

ಜನರ ಮನ ಸೆಳೆದ ಪ್ರೇಮ ಮತ್ತು ತಂದೆ-ಮಗನ ಬಾಂಧವ್ಯ

ಈ ಸಿನಿಮಾವನ್ನು ಅಕ್ಷಿ ಸಿನಿಮಾ ಖ್ಯಾತಿಯ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮನೋಜ್ ಕುಮಾರ್ ನಿರ್ದೇಶಿಸಿದ್ದಾರೆ. ಇವರ ಚೊಚ್ಚಲ ಚಿತ್ರ ಅಕ್ಷಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದ್ದಲ್ಲದೆ, ಅತ್ಯುತ್ತಮ ಪ್ರಾದೇಶಿಕ ಚಿತ್ರ ರಾಷ್ಟ್ರ ಪ್ರಶಸ್ತಿಯನ್ನು ಸಹ ಮುಡಿಗೇರಿಸಿಕೊಂಡಿತ್ತು. ಆ ಯಶಸ್ಸಿನ ನಂತರ ತೆರೆಕಂಡಿರುವ ಪ್ರೇಮದ ಊರಲಿ ಇವರ ಎರಡನೇ ಸಿನಿಮಾವಾಗಿದೆ.

ಈ ಹಿಂದೆ ಹೊಂದಿಸಿ ಬರೆಯಿರಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದ ಶ್ರೀ ರಾಮ್ ನಾಯಕನಾಗಿ ಅಭಿನಯಿಸಿದ್ದು, ರಮಿಕಾ ಶಿವು ( ವಸಂತ) ಹಾಗೂ ತಪಸ್ವಿನಿ ಪೂಣಚ್ಚ (ರುಕ್ಮಿಣಿ)  ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ನಾಯಕನ ತಂದೆಯಾಗಿ ರಂಗಾಯಣ ರಘು (ನಾಗಣ್ಣ) ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಒಂದೂರು, ಆ ಊರಲ್ಲೊಬ್ಬ ಅಪ್ಪ ಮಗ, ಅವನಿಗೆ ಇವನು ಆಸ್ತಿ, ಇವನಿಗೆ ಅವನೇ ಪರಪಂಚ! ಈ ಪರಪಂಚದಲ್ಲಿ ಬರುವ ಇಬ್ಬರು ಹೆಣ್ಣುಮಕ್ಕಳು!  ಈ ನಾಲ್ವರ ಸುತ್ತ ಸುತ್ತುವ ಕಥೆ,  ನಡು ನಡುವಲ್ಲಿ ಕಿವಿಗಿಂಪಾಗಿಸುವ ಹಾಡು! ತನ್ನ ಮಗನಿಗೆ ಡಿಗ್ರಿ ಓದಿದ ಹುಡುಗಿಯನ್ನ ತಂದು ಮದುವೆ ಮಾಡಬೇಕೆಂಬ ಅಪ್ಪನ ನಿಲುವಿನ ಜೊತೆಯಲ್ಲಿ ಸಾಗುವ ಸಿನಿಮಾ, ನಿಧಾನವಾಗಿ ಪ್ರೇಕ್ಷಕರನ್ನ ಪ್ರೀತಿಯಿಂದ ಆವರಿಸಿಕೊಳ್ಳುತ್ತಾ ಸಾಗುತ್ತದೆ..  ಇದರ ನಡುವೆ ರಂಗಾಯಣ ರಘು ಅವರ ಅಭಿನಯ ಪ್ರೇಕ್ಷಕರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡುತ್ತದೆ. ಹಾಗೆಯೇ ಚಿತ್ರದಲ್ಲಿ ಮುಜುಗರ ಪಡುವ ಯಾವುದೇ ದೃಶ್ಯಗಳಿಲ್ಲದೆ, ಕುಟುಂಬ ಸಮೇತ ಚಿತ್ರ ವೀಕ್ಷಿಸಬಹುದು ಎಂಬುದು ಸಿನಿಮಾ ನೋಡಿದ ಪ್ರೇಕ್ಷಕರ ಅಭಿಪ್ರಾಯವಾಗಿದೆ. ತಂದೆ-ಮಗನ ನಡುವಿನ ಅಂಡರ್‌ಸ್ಟ್ಯಾಂಡಿಂಗ್ ಮತ್ತು ಬಾಂಧವ್ಯ ಹೇಗಿರಬೇಕು ಎಂಬುದನ್ನು ನಿರ್ದೇಶಕ ಮನೋಜ್ ಕುಮಾರ್ ಮನಮುಟ್ಟುವಂತೆ ತೆರೆಯ ಮೇಲೆ ತಂದಿದ್ದಾರೆ.

ಒಟ್ಟಾರೆಯಾಗಿ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಈ ಕೌಟುಂಬಿಕ ಹಾಗೂ ಮನರಂಜನಾತ್ಮಕ ಚಿತ್ರವನ್ನು ವೀಕ್ಷಿಸಲು ನಿಮ್ಮ ಹತ್ತಿರದ ಚಿತ್ರಮಂದಿರಕ್ಕೆ ಭೇಟಿ ನೀಡಿ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor