ಮಲೆನಾಡು ಟುಡೆ ಸುದ್ದಿ / ನವದೆಹಲಿ / ಚಿನ್ನದ ಬೆಲೆ ಇಳಿಕೆ ಕಂಡಿದೆ. ನ್ಯಾಷನಲ್ ಮೀಡಿಯಾಗಳ ವರದಿ ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿ ಎರಡು ತಿಂಗಳಲ್ಲಿ ಇದೇ ಮೊದಲ ಬಾರಿಗೆ 10 ಗ್ರಾಂ ಚಿನ್ನದ ದರ ₹1.50 ಲಕ್ಷಕ್ಕಿಂತ ಕೆಳಗೆ ಇಳಿದಿದೆ.
ಶೇ 99.9ರಷ್ಟು ಪರಿಶುದ್ಧತೆಯ 10 ಗ್ರಾಂ ಚಿನ್ನದ ಬೆಲೆ ಮಂಗಳವಾರದ ವಹಿವಾಟಿನಲ್ಲಿ ₹1,400 ಇಳಿಕೆಯಾಗಿ ₹1,48,600ಕ್ಕೆ ತಲುಪಿದೆ. ಸೋಮವಾರದ ವಹಿವಾಟಿನಲ್ಲಿ ಇದೇ ಚಿನ್ನದ ಬೆಲೆ ₹1.50 ಲಕ್ಷದಷ್ಟಿತ್ತು. ಸ್ಥಳೀಯ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಬೇಡಿಕೆ ಕಡಿಮೆಯಾಗಿರುವುದು ಹಾಗೂ ಅಮೆರಿಕದ ಡಾಲರ್ ಮೌಲ್ಯ ಹೆಚ್ಚಳ ಕಂಡಿರುವುದು ಚಿನ್ನದ ಬೆಲೆ ಇಳಿಕೆಗೆ ಕಾರಣವಾಗಿದೆ ಎಂದು ವರ್ತಕರು ಅಭಿಪ್ರಾಯ ಪಟ್ಟಿದ್ದಾರೆ ಎನ್ನಲಾಗಿದೆ.
ಕಳೆದ ಎರಡು ತಿಂಗಳ ಅವಧಿಯಲ್ಲಿ ಚಿನ್ನದ ಬೆಲೆ ₹1.50 ಲಕ್ಷಕ್ಕಿಂತ ಕೆಳಗೆ ಇಳಿದಿರಲಿಲ್ಲ. ಮಂಗಳವಾರದ ವಹಿವಾಟಿನಲ್ಲಿ ದರ ₹1,48,600ಕ್ಕೆ ತಲುಪುವ ಮೂಲಕ ಎರಡು ತಿಂಗಳ ಬಳಿಕ ಈ ಮಟ್ಟಕ್ಕಿಂತ ಕೆಳಗೆ ಬಂದಿದೆ. ಇದೇ ವೇಳೆ ಬೆಳ್ಳಿಯ ಬೆಲೆಯಲ್ಲಿ ಬದಲಾವಣೆ ಆಗಿಲ್ಲ. ಪ್ರಸ್ತುತ ಕೆ.ಜಿ. ಬೆಳ್ಳಿಯ ಬೆಲೆ ₹2.32 ಲಕ್ಷದಲ್ಲೇ ಉಳಿದಿದೆ.
