4 ಸಿಂಹದ ಮರಿಗಳ ಸಾವು! ಹುಟ್ಟು, ಸಾವಿನ ಲೆಕ್ಕವೇ ಸುಳ್ಳಾ!? ತ್ಯಾವರೆಕೊಪ್ಪದೊಳಗೆ ಕದ್ದು ಮುಚ್ಚಿ ನಡೆಯುತ್ತಿದೆಯಾ ಆ ಕೆಲಸ? ಲಯನ್ ಸಫಾರಿಯಲ್ಲಿ ಸಾವಿನ ರಹಸ್ಯ! ಕ್ಲಾಸ್ 1

ಹಂಚಿಕೊಳ್ಳಿ
WhatsApp Facebook X Telegram
Four Lion Cubs Die at Tyavarekoppa Questions Over Pregnancy Detection, Den, CCTV and Hand-Rearing
Four Lion Cubs Die at Tyavarekoppa Questions Over Pregnancy Detection, Den, CCTV and Hand-Rearing

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಸೆಪ್ಟೆಂಬರ್ 16. ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ಅದು ಸಂತಸದ ದಿನವಾಗಬೇಕಿತ್ತು. ಪ್ರಾಣಿ ವಿನಿಮಯ ಯೋಜನೆಯಡಿ ಮಧ್ಯಪ್ರದೇಶದ ಇಂದೋರ್‌ನಿಂದ ಕರೆತರಲಾಗಿದ್ದ Schedule I ಪ್ರಾಣಿಗಳಾದ ಶಿವ ಮತ್ತು ಸಾರಾ ಏಷ್ಯಾಟಿಕ್ ಸಿಂಹಗಳ ಜೋಡಿಯಲ್ಲಿ 5 ವರ್ಷದ ಸಾರಾ ಒಂದೇ ಹೆರಿಗೆಯಲ್ಲಿ 4 ಮರಿಗಳಿಗೆ ಜನ್ಮ ನೀಡಿತ್ತು. ಅಳಿವಿನಂಚಿನ ಪ್ರಭೇದದ ಸಂತಾನೋತ್ಪತ್ತಿ ದೃಷ್ಟಿಯಿಂದ ನೋಡಿದರೆ ಮೃಗಾಲಯವೊಂದಕ್ಕೆ ಇದು ಮಹತ್ವದ ಬೆಳವಣಿಗೆ.ಆದರೆ ಆ ಸಂತಸ ಕೆಲವೇ ಗಂಟೆಗಳಲ್ಲಿ ದುರಂತವಾಗಿ ಬದಲಾಯಿತು.ಜನಿಸಿದ್ದ ನಾಲ್ಕೂ ಮರಿಗಳು ಬದುಕುಳಿಯಲಿಲ್ಲ.ಇಲ್ಲಿಂದಲೇ ಪ್ರಶ್ನೆಗಳು ಆರಂಭವಾಗುತ್ತವೆ

ತ್ಯಾವರೆಕೊಪ್ಪದಲ್ಲಿರುವ ಸಿಂಹಧಾಮದಲ್ಲಿ ಸೆಪ್ಟೆಂಬರ್ 16ರಂದು ಜನಿಸಿದ್ದ 4 ಏಷ್ಯಾಟಿಕ್ ಸಿಂಹದ ಮರಿಗಳು ಸಾವನ್ನಪ್ಪಿವೆ.ಇಷ್ಟು ಸರಳವಾಗಿದ್ದ ವಿಷಯವನ್ನ ಹುಲಿ ಮತ್ತು ಸಿಂಹಧಾಮದ ಕುರ್ಚಿಗಳು ಏಕೆ ಮುಚ್ಚಿಟ್ಟವು,ಮಾಧ್ಯಮಗಳಿಗೂ ತಿಳಿಸದೇ! ಸಮರ್ಪಕ ದಾಖಲೆಯು ಹೊರಡಿಸದೇ? ಪ್ರತಿಕ್ರಿಯೆಗೂ ಸಿಗದೇ ರಜೆ ಹಾಕಿರೋದೇಕೆ? ನಡೆದ ಘಟನೆಯನ್ನ ಮುಚ್ಚಿಡುವ ಪ್ರಯತ್ನದ ಹಿಂದೆ ಹತ್ತಾರು ಪ್ರಶ್ನೆಗಳು ಹುಟ್ಟುತ್ತಿದೆ. ಪ್ರತಿಯಾಗಿ ಈ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಲಯನ್​ ಸಫಾರಿಯ ಪ್ರಭಾವಿತ ಹುದ್ದೆಗಳು, ಈ ನಿಟ್ಟಿನಲ್ಲಿ ತಮ್ಮದೇ ಬಂಟರನ್ನ ತಮ್ಮ ಪರವಾಗಿ ಪ್ರಚಾರಕ್ಕೆ ಬಿಟ್ಟು, ನಡೆದ ಘಟನೆಗೆ, ಸಂಬಂಧವೇ ಇಲ್ಲದ ಸಿನಿಮಾ ಕಥೆ ಹೇಳುತ್ತಿದ್ದಾರೆ.

ಇಲ್ಲಿ ತಾಯಿ ಸಿಂಹಕ್ಕೆ ಇದು ಮೊದಲ ಹೆರಿಗೆ, ಅದಕ್ಕೆ ಮರಿಗಳನ್ನು ನೋಡಿಕೊಳ್ಳುವ ಅರಿವಿರಲಿಲ್ಲ ಹಾಲುಣಿಸುತ್ತಿರಲಿಲ್ಲ ಮರಿಗಳೂ ದುರ್ಬಲವಾಗಿದ್ದವು ಪ್ರಸವಕ್ಕೂ ಮೊದಲು ಸಾರಾ ಗರ್ಭಿಣಿ ಎಂಬುದೇ ವೈದ್ಯರಿಗೆ ಖಚಿತವಾಗಿರಲಿಲ್ಲ, ಮಧ್ಯದಲ್ಲಿ ಮತ್ತೊಮ್ಮೆ mating ಆಗಿದ್ದರಿಂದ ಸೂಡೋ ಪ್ರೆಗ್ನೆನ್ಸಿ ಎಂದುಕೊಳ್ಳಲಾಗಿತ್ತು, ಮೊದಲ 24 ಗಂಟೆ ತಾಯಿಯೇ ಮರಿಗಳನ್ನು ನೋಡಿಕೊಳ್ಳಲು ಅವಕಾಶ ನೀಡುವುದು ಸೂಕ್ತ ಎಂಬುದು ಅಧಿಕಾರಿಗಳ ವಿವರಣೆ. ಇವೆಲ್ಲವೂ ಒಂದೊಂದಾಗಿ ಕೇಳಿದರೆ ಸಮರ್ಥನೆಯಂತಿವೆ. ಆದರೆ ಅವನ್ನೆಲ್ಲ ಒಂದೇ ಸರಣಿಯಲ್ಲಿ ಜೋಡಿಸಿದಾಗ ಮತ್ತೊಂದು ಚಿತ್ರ ಕಾಣುತ್ತದೆ. ಗರ್ಭಧಾರಣೆ ಗುರುತಿಸಲಾಗಿಲ್ಲ.ಪ್ರಸವ ನಿರೀಕ್ಷಿತವಾಗಿರಲಿಲ್ಲ.ತಾಯಿ ಹಾಲುಣಿಸುತ್ತಿರಲಿಲ್ಲ.ತಾಯಿ ಮರಿಗಳನ್ನು ಸರಿಯಾಗಿ ಆರೈಕೆ ಮಾಡುತ್ತಿರಲಿಲ್ಲ.ಮರಿಗಳು ದುರ್ಬಲವಾಗಿದ್ದವು. ಅಂತಿಮವಾಗಿ ನಾಲ್ಕೂ ಮರಿಗಳು ಮೃತಪಟ್ಟವು.ಹಾಗಾದರೆ ಈ ಎಲ್ಲಾ ಅಪಾಯದ ಸೂಚನೆಗಳ ನಡುವೆ ಸಿಂಹಧಾಮದ ವೈದ್ಯಕೀಯ ಮತ್ತು ಆಡಳಿತ ವ್ಯವಸ್ಥೆ ಯಾವ ಹಂತದಲ್ಲಿ ಎಚ್ಚೆತ್ತುಕೊಂಡಿತು? ಅಥವಾ ಗೊತ್ತೆ ಇರಲಿಲ್ಲ ಎನ್ನುವ ಮಹಾ ನಿರ್ಲಕ್ಷ್ಯವೇ ಸತ್ಯವೆ? ಈ ಪ್ರಕರಣದ ನಿಜವಾದ ತನಿಖೆ ಆರಂಭವಾಗಬೇಕಿರುವುದು ಇಲ್ಲಿಂದಲೇ.

ಇದರೊಂದಿಗೆ ಮರಿಗಳ ಸಾವಿನ ನಿಖರ ಸಮಯದ ಕುರಿತು ಕೇಳಿಬರುತ್ತಿರುವ ಭಿನ್ನ ಹೇಳಿಕೆಗಳು, postmortem ವರದಿಯಲ್ಲಿದೆ ಎಂಬಂತಹ ಉಲ್ಲೇಖಗಳು, ಮರಿಗಳು ನಿಜವಾಗಿಯೂ ಮೃತಪಟ್ಟಿವೆಯೇ ಅಥವಾ ????????? ಎಂಬ ಅತ್ಯಂತ ಗಂಭೀರ ಹಾಗೂ ಅಷ್ಟೆ ನಿಗೂಢವಾದ ಅನುಮಾನಗಳಿಗೆ ಕಾರಣವಾಗಿದೆ. ಹೀಗಾಗಿ ಈಗ ಲಯನ್​ ಸಫಾರಿಯ ಆಯ್ದ ಅಧಿಕಾರಿಗಳು ಅಗತ್ಯ ಮಾಡಬೇಕಿರುವುದು ದಾಖಲೆಗಳ ಮೂಲಕ ಸತ್ಯಾಂಶವನ್ನು ಸ್ಪಷ್ಟಪಡಿಸುವುದು.

ಸೆಪ್ಟೆಂಬರ್ 16ರಂದು ಜನಿಸಿದ 4 ಮರಿಗಳು

ಮೃಗಾಲಯದ ಸ್ಟೇಟ್ಮೆಂಟ್​ ಪ್ರಕಾರ, 5 ವರ್ಷದ ಹೆಣ್ಣು ಸಿಂಹ ಸಾರಾ ಸೆಪ್ಟೆಂಬರ್ 16ರಂದು 4 ಮರಿಗಳಿಗೆ ಜನ್ಮ ನೀಡಿತ್ತು ಮತ್ತು ಹುಟ್ಟಿದ 24 ಗಂಟೆಯೊಳಗೆ ಸಾವನ್ನಪ್ಪಿವೆ!ಈ ಹೇಳಿಕೆ ಅನುಮಾನಸ್ಪದವಾಗಿದೆ. ಮರಿಗಳು ಹುಟ್ಟಿದ್ದನ್ನ ಸಂಭ್ರಮದಿಂದ ಹೇಳಿಕೊಳ್ಳುತ್ತಿದ್ದ ಸಿಂಹಧಾಮದ ಅಧಿಕಾರಿಗಳು, ಅವುಗಳು ಹುಟ್ಟಿದ್ದನ್ನು ಮತ್ತು ಸತ್ತಿದ್ದನ್ನು ಮುಚ್ಚಿಟ್ಟಿದ್ದರಷ್ಟೆ ಅಲ್​ಲದೆ ಆ ಕ್ಷಣದ ಪ್ರೊಸಿಜರ್​ ಪ್ರಕಾರ, ಮರಿಗಳ ಬಗ್ಗೆ ದಾಖಲೆಗಳಲ್ಲಿ ಉಲ್ಲೇಖಿಸಿಲ್ಲ. ಈ ಮಧ್ಯೆ ಸಫಾರಿಯೊಳಗಿನ ಮಾತಿನ ಪ್ರಕಾರ, ಮರಿಗಳು 24 ಗಂಟೆಯಲ್ಲಿ ಸಾವನ್ನಪ್ಪಿಲ್ಲ, ಅದಕ್ಕೂ ಹೆಚ್ಚು ಕಾಲ ಅವುಗಳು ಬದುಕಿದ್ದವು! ಈ ಬಗ್ಗೆ ಯಾರು ಸಹ ಸ್ಪಷ್ಟಪಡಿಸುತ್ತಿಲ್ಲ.ಈ ವಿಷಯದಲ್ಲಿ ನವಜಾತ ಪ್ರಾಣಿಯನ್ನು ತಕ್ಷಣ inventory ಗೆ ಸೇರಿಸಲಾಗುವುದಿಲ್ಲ ಎಂಬ ವಿವರಣೆಯೂ ಅನುಮಾನಕ್ಕೆ ಕಾರಣವಾಗಿದೆ. Central Zoo Authority ನಿಯಮಗಳಲ್ಲಿ ಮೃಗಾಲಯಗಳು ಪ್ರಾಣಿಗಳ ಜನನ ಮತ್ತು ಸಾವಿನ ದಾಖಲೆಗಳನ್ನು ಕಡ್ಡಾಯವಾಗಿ ನಿರ್ವಹಿಸಬೇಕೆಂದು ಹೇಳಲಾಗಿದೆ. Schedule I ಮತ್ತು II ಪ್ರಾಣಿಗಳ ಸಾವಿನ ವಿವರಗಳನ್ನು ಮರಣೋತ್ತರ ಪರೀಕ್ಷೆಯ ಕಾರಣಗಳೊಂದಿಗೆ ತ್ರೈಮಾಸಿಕವಾಗಿ ಸಲ್ಲಿಸಬೇಕೆಂಬ ನಿಯಮವೂ ಇದೆ.

ಮೊದಲ ಹೆರಿಗೆ; ಮರಿಗಳನ್ನು ನೋಡಿಕೊಳ್ಳುವ ಅರಿವು ಇರಲಿಲ್ಲ

ಮೃಗಾಲಯದ ನಿರ್ದೇಶಕರು ನೀಡಿರುವ ಸ್ಪಷ್ಟನೆಯ ಪ್ರಕಾರ, ಸಾರಾಗೆ ಇದು ಮೊದಲ ಗರ್ಭಧಾರಣೆ. ಮೊದಲ ಬಾರಿಗೆ ಮರಿ ಹಾಕಿದ ಕಾರಣ ಮರಿಗಳನ್ನು ಹೇಗೆ ನೋಡಿಕೊಳ್ಳಬೇಕು, ಹೇಗೆ ಸ್ವಚ್ಛಗೊಳಿಸಬೇಕು ಎನ್ನುವ ಅರಿವು ತಾಯಿ ಸಿಂಹಕ್ಕೆ ಇರಲಿಲ್ಲ. ಮರಿಗಳು ಜನಿಸಿದ ನಂತರವೂ ಸಾರಾ ಅವುಗಳಿಗೆ ಹಾಲುಣಿಸುತ್ತಿರಲಿಲ್ಲ. ಮರಿಗಳಲ್ಲಿಯೂ ಸಾಕಷ್ಟು ಶಕ್ತಿ ಇರಲಿಲ್ಲ. ಮೊದಲ ಗರ್ಭಧಾರಣೆಯಲ್ಲಿ ಇಂತಹ ಘಟನೆ ಸಂಭವಿಸುವುದು ಸಾಮಾನ್ಯವಾಗಿದ್ದು, 2 ಅಥವಾ 3ನೇ ಗರ್ಭಧಾರಣೆಯ ನಂತರ ಪ್ರಾಣಿಗಳಿಗೆ ಮರಿಗಳನ್ನು ನೋಡಿಕೊಳ್ಳುವ ಸಾಮರ್ಥ್ಯ ಮತ್ತು motherly instinct ಉತ್ತಮವಾಗುತ್ತದೆ ಎಂಬುದು ನಿರ್ದೇಶಕರ ವಿವರಣೆ.

ಮೊದಲ ಬಾರಿಗೆ ಮರಿ ಹಾಕಿದ ಎಲ್ಲ ಸಿಂಹಗಳೂ ಮರಿಗಳನ್ನು ಆರೈಕೆ ಮಾಡುವುದಿಲ್ಲ ಎಂಬ ಸಾಮಾನ್ಯ ವೈಜ್ಞಾನಿಕ ನಿಯಮವಿದೆಯೇ? 2 ಅಥವಾ 3ನೇ ಹೆರಿಗೆಯ ನಂತರವೇ motherly instinct ಬರುತ್ತದೆ ಎನ್ನುವುದಕ್ಕೆ ಬಳಸಿರುವ ವೈಜ್ಞಾನಿಕ ಆಧಾರ ಯಾವುದು? ಮೇಲಾಗಿ ತಾಯಿ ಸಿಂಹ ಹಾಲುಣಿಸುತ್ತಿಲ್ಲ ಎಂದು ನಿರ್ಧರಿಸಿದ ಮೇಲೆ ಒಂದರ ನಂತರ ಒಂದಾಗಿ ನಾಲ್ಕನೇ ಮರಿ ಸಾಯುವರೆಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲವೇಕೆ ಎಂದು ಮಲೆನಾಡು ಟುಡೆ ಸಂಪರ್ಕಿಸಿದ ವೈಲ್ಡ್​ ಲೈಫ್ ತಜ್ಞರು ಎತ್ತಿರುವ ಪ್ರಶ್ನೆ..

ಮೊದಲ ಹೆರಿಗೆಯಲ್ಲಿ maternal neglect ಸಂಭವಿಸಬಹುದು ಎನ್ನುವುದಕ್ಕೆ zoo ಗೆ ಸಂಬಂಧಿಸಿದ ಉದಾಹರಣೆಗಳಿವೆ. ಏಕೆಂದರೆ first-time mother ಎಂಬುದು ಮೊದಲೇ ತಿಳಿದಿರುವ risk factor ಆಗಿದ್ದಾಗ, ಅದರರ್ಥ ಹೆಚ್ಚುವರಿ preparedness ಅಗತ್ಯವಿತ್ತು ಎನ್ನುವುದೇ ಹೊರತು ನಡೆದು ಹೋದ ಸಾವು ಸಹಜ ಎನ್ನುವುದಲ್ಲ. ನಂದನಕಾನನ್ ಮೃಗಾಲಯದ ಪ್ರಕರಣದಲ್ಲೂ ಮೊದಲ ಹೆರಿಗೆಯ ಸಿಂಹಿಣಿ ಮರಿಗೆ motherly care ತೋರದ ಕಾರಣ zoo veterinary team hand-rearingಗೆ ಮುಂದಾಗಿರುವ ಉದಾಹರಣೆ ಇದೆ. ಬೆಂಗಳೂರಿನ ಬನ್ನೇರುಘಟ್ಟ Biological Parkನಲ್ಲಿ 2018ರಲ್ಲಿ ಸಿಂಹಿಣಿ ಒಂದು ಮರಿಯನ್ನು ತಿಂದ ಬಳಿಕ ಉಳಿದ ಮರಿಗಳನ್ನು ಮರುದಿನವೇ zoo hospitalಗೆ ತೆಗೆದುಕೊಂಡು hand-rearing ಮಾಡಲಾಗಿತ್ತು. ಮೈಸೂರಿನ ಮೃಗಾಲಯದಲ್ಲಿ 2012ರಲ್ಲಿ Asiatic lioness ದಿನದ ಮರಿಗೆ ಹಾಲುಣಿಸದಿದ್ದಾಗ ತಜ್ಞರ ಸಲಹೆ ಪಡೆದು ಮರಿಯನ್ನು ತಾಯಿಯಿಂದ ಬೇರ್ಪಡಿಸಿ hand-rearing ಆರಂಭಿಸಲಾಗಿತ್ತು. Motherly instinct ಇಲ್ಲದಿರುವುದು ಅಂತಿಮ ಸ್ಥಿತಿ ಅಲ್ಲ; ಅದು intervention ಅಗತ್ಯವಿರಬಹುದಾದ warning sign.

ನಿರ್ದೇಶಕರೇ ನೀಡಿರುವ ಮತ್ತೊಂದು ಪ್ರಮುಖ ಮಾಹಿತಿ ಪ್ರಕಾರ, ಸಾರಾ ಜನಿಸಿದ ಮರಿಗಳಿಗೆ ಹಾಲುಣಿಸುತ್ತಿರಲಿಲ್ಲ.ಇಲ್ಲಿಯೇ ಪ್ರಕರಣ neonatal emergency ಸ್ವರೂಪ ಪಡೆಯುತ್ತದೆ.ನವಜಾತ ಮರಿಗಳು ತಾಯಿಯ ಹಾಲಿಗೆ ಅವಲಂಬಿತವಾಗಿವೆ. ಅವು ಹಾಲು ಹೀರಲು ಸಾಧ್ಯವಾಗುತ್ತಿದೆಯೇ ಇಲ್ಲವೇ ಎಂಬುದು ಮೊದಲ ಗಂಟೆಗಳಲ್ಲಿಯೇ ಗಮನಿಸಬೇಕಾದ ಪ್ರಮುಖ ಸಂಗತಿ. ಹೀಗಿರುವಾಗ ಸಾರಾ ಮರಿಗಳಿಗೆ ಹಾಲುಣಿಸುತ್ತಿರಲಿಲ್ಲ ಎಂಬುದು ಗೊತ್ತಾದರೂ, ಮರಿಗಳನ್ನ ರೆಸ್ಕ್ಯೂ ಮಾಡುವ ಪ್ರಯತ್ನ ಏಕೆ ಕೈಗೊಳ್ಳಲಿಲ್ಲ. ಮೇಲಾಗಿ ಹಾಲುಣಿಸುತ್ತಿರಲಿಲ್ಲ ಎಂಬುದು ಯಾವಾಗ ಗೊತ್ತಾಯ್ತು? ಮೊದಲ ಮರಿ ಜನಿಸಿದ 1 ಗಂಟೆಯಲ್ಲೇನಾ? 5 ಗಂಟೆಯ ನಂತರವೇ? 10 ಗಂಟೆ? 12 ಗಂಟೆ? ಅಥವಾ ಮರಿಗಳು ದುರ್ಬಲವಾದ ಬಳಿಕವೇ? ಮೊದಲ ಮರಿ ಸತ್ತಾಗಲೇ ತುರ್ತು ತೀರ್ಮಾನ ಕೈಗೊಳ್ಳುವ ಅವಕಾಶ ಇತ್ತು! ಆದರೆ ಈ ಹೊತ್ತಲ್ಲಿ ಏನು ನಡೆಯಿತು ಎಂಬುದೇ ಅಸ್ಪಷ್ಟವಾಗಿದೆ.

ಆರೋಗ್ಯವಾಗಿರುವ ಸಿಂಹದ ಮರಿಗಳನ್ನು ಹುಟ್ಟಿದ ಕ್ಷಣವೇ ತಾಯಿಯಿಂದ ಬೇರ್ಪಡಿಸಿ hand-rearing ಮಾಡುವುದು ಸಾಮಾನ್ಯವಾಗಿ ಮೊದಲ ಆಯ್ಕೆ ಅಲ್ಲಎಂಬುದು ಸರಿಯಷ್ಟೆ!ತಾಯಿಯ colostrum ಮತ್ತು maternal careಗೆ ಬಹಳ ಮಹತ್ವವಿದೆ. ತಾಯಿ ಮರಿಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿದ್ದರೆ ಅನಗತ್ಯ ಮಾನವ ಹಸ್ತಕ್ಷೇಪವೂ ಸಮಸ್ಯೆಯಾಗಬಹುದು.ಇದಕ್ಕೆ ವ್ಯತಿರಿಕ್ತವಾಗಿ, ತಾಯಿ ಮರಿಗಳಿಗೆ ಹಾಲುಣಿಸುತ್ತಿಲ್ಲ, ಅವುಗಳನ್ನು ನಿರ್ಲಕ್ಷಿಸುತ್ತಿದೆ, ಸುತ್ತಾಡುವಾಗ ಗಾಯವಾಗುವ ಅಪಾಯವಿದೆ, ಮರಿಗಳು ದುರ್ಬಲವಾಗುತ್ತಿವೆ ಎಂಬ ಲಕ್ಷಣ ಕಂಡಾಗ emergency intervention ತುರ್ತಾಗಿ ತೆಗೆದುಕೊಳ್ಳುವ ಅಗತ್ಯವಿದೆ.

ಜೋಧಪುರದ Machia Biological Park ಕುರಿತು ಪ್ರಕಟವಾಗಿರುವ ಅಧ್ಯಯನದ abstractನಲ್ಲೇ hand-rearing ಅನ್ನು ತಾಯಿ ಮರಿಗಳನ್ನು ನೋಡಿಕೊಳ್ಳಲು ಅಸಮರ್ಥವಾಗಿದ್ದಾಗ ಅಥವಾ ಮರಿಗಳತ್ತ ಗಮನ ಕೊಡದಿದ್ದಾಗ ಬಳಸುವ ತುರ್ತು ವಿಧಾನ ಎಂದು ವಿವರಿಸಲಾಗಿದೆ. ಅಲ್ಲದೆ ಅಧ್ಯಯನ ಪ್ರಕರಣದಲ್ಲಿ 2016ರ ಅಕ್ಟೋಬರ್ 22ರ ಮಧ್ಯರಾತ್ರಿ ಜೋಧಪುರದ ಹೆಣ್ಣು ಏಷ್ಯಾಟಿಕ್ ಸಿಂಹ 3 ಮರಿಗಳಿಗೆ ಜನ್ಮ ನೀಡಿತ್ತು. ಆದರೆ ತಾಯಿ ಮರಿಗಳತ್ತ ಗಮನ ನೀಡದೇ enclosureನ ಇನ್ನೊಂದು ಕಡೆಗೆ ತೆರಳಿತ್ತು. ಒಂದು ಮರಿಯನ್ನು ತಾಯಿಯೇ mishandle ಮಾಡಿ ಸಾವಿಗೆ ಕಾರಣವಾದ ನಂತರ ಉಳಿದ ಮರಿಗಳನ್ನು ತಾಯಿಯಿಂದ ಬೇರ್ಪಡಿಸಿ hand-rearing ಮಾಡಲು zoo keepers ಮತ್ತು park authority ನಿರ್ಧರಿಸಿದ್ದರು.

ಜೋಧಪುರ ಈ ಪ್ರಕರಣದ ವಿವರ ಶಿವಮೊಗ್ಗ ಪ್ರಕರಣದ ಚರ್ಚೆಗೆ ವಿಶೇಷವಾಗಿ ಪ್ರಸ್ತುತವಾಗಿದೆ. ಅಲ್ಲಿ ತಾಯಿ ಸಿಂಹ ಮರಿಗಳತ್ತ affection ತೋರಿಸುತ್ತಿರಲಿಲ್ಲ. ಅದು enclosureನಲ್ಲಿ vigorously walking ಮಾಡುತ್ತಿತ್ತು. ಪರೀಕ್ಷಿಸಿದಾಗ ಅದರ udder ಖಾಲಿಯಾಗಿದ್ದು ಹಾಲಿರಲಿಲ್ಲ. ಹಾಲಿಲ್ಲದ ಕಾರಣ ಉಳಿದ ಮರಿಗಳು dehydration ಅಪಾಯದಲ್ಲಿದ್ದವು. ಇದನ್ನು ಗಮನಿಸಿದ ನಂತರ ಉಳಿದ 2 ಮರಿಗಳನ್ನು maternal cageನಿಂದ ಹೊರತೆಗೆದು incubator baby-care unitಗೆ ಕಳುಹಿಸಲಾಯಿತು.ಲಯನ್​ ಸಫಾರಿಯ ಅಧಿಕಾರಿಗಳ ಹೇಳಿಕೆಯ ಪ್ರಕಾರ, ಸಾರಾ ಕೂಡ pacing ಮಾಡುತ್ತಿತ್ತು, ಮರಿಗಳಿಗೆ ಹಾಲುಣಿಸುತ್ತಿರಲಿಲ್ಲ ಎಂದಾದರೆ ಯಾವ ಹಂತದಲ್ಲಿ danger assessment ನಡೆಸಲಾಯಿತು ಎಂಬುದಕ್ಕೆ ಉತ್ತರ ಸಿಗುತ್ತಿಲ್ಲ. ಅಲ್ಲದೆ ನಾಲ್ಕು ಮರಿಗಳ ಸಾವಿನ ನಂತರ ಹೇಳುವ ಕಾರಣ ಇದಾಗಬಾರದಿತ್ತು.

ಆ monitoring ಹೇಗಿತ್ತು

ಮೊದಲ 24 ಗಂಟೆ ತಾಯಿಯನ್ನು disturb ಮಾಡಬಾರದು ಎಂದು ಮರಿಗಳ ರಕ್ಷಣೆಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎನ್ನುವುದಾದರೆ, ಆ 24 ಕೈಕಟ್ಟಿ ಕುಳಿತುಕೊಳ್ಳುವ ಅವಧಿಯೆ?Central Zoo Authority ಪ್ರಕಟಿಸಿರುವ Hand Rearing of Wild Animals in Captivity ಕೈಪಿಡಿಯಲ್ಲೇ Kanpur Zoological Parkನ ಸಿಂಹದ ಮರಿಯ ಉದಾಹರಣೆ ಇದೆ. ತಾಯಿ ಜನನದ ನಂತರ 24 ಗಂಟೆಗಳಾದರೂ ಮರಿಯನ್ನು ಹಾಲುಣಿಸದಿದ್ದಾಗ ಅದನ್ನು rescue ಮಾಡಿ hand-rearingಗೆ ತೆಗೆದುಕೊಳ್ಳಲಾಗಿದೆ. Colostrum ಸಿಗದ ಕಾರಣ ಮೊದಲ ದಿನಗಳಲ್ಲಿ ತಾಯಿಯ serum ಅನ್ನು ಬಾಯಿಮೂಲಕ ಹಾಗೂ ಚರ್ಮದಡಿ ನೀಡಿ immunity ಬೆಂಬಲಿಸಲು ಪ್ರಯತ್ನಿಸಲಾಗಿತ್ತು; ನಂತರ kitten milk replacer ಬಳಸಿ ದಿನಕ್ಕೆ ಅನೇಕ ಬಾರಿ feeding ಮಾಡಲಾಗಿತ್ತು ಅಂದರೆ 24 ಗಂಟೆ ಎಂಬುದು ಸಕ್ರಿಯ ನಿಗಾದ ಅವಧಿ. ಅದು blind waiting period ಅಲ್ಲ.ತಾಯಿ ಹಾಲುಣಿಸುತ್ತಿದೆಯೇ?ಮರಿ ಹಾಲು ಹೀರುತ್ತಿದೆಯೇ? ತಾಯಿ aggression ತೋರಿಸುತ್ತಿದೆಯೇ?ಮರಿ ಗಾಯಗೊಳ್ಳುತ್ತಿದೆಯೇ?ದೇಹದ ಉಷ್ಣಾಂಶ ಕುಸಿಯುತ್ತಿದೆಯೇ?Dehydration ಆರಂಭವಾಗಿದೆಯೇ? ಇವೆಲ್ಲವನ್ನು ಗಮನಿಸುವ ಅಂಶಗಳು ಮತ್ತು ಕ್ರಮ. ಶಿವಮೊಗ್ಗದಲ್ಲಿ ಆ monitoring ಹೇಗಿತ್ತು ಎಂಬುದೇ ಪ್ರಶ್ನೆ

North Bengal Wild Animals Parkನಲ್ಲಿ 2024ರಲ್ಲಿ Asiatic lioness 3 ಮರಿಗಳಿಗೆ ಜನ್ಮ ನೀಡಿದ ಸಂದರ್ಭದಲ್ಲಿ CCTV ಮೂಲಕ ತಾಯಿ ಮರಿಗಳಿಗೆ nursing ಮಾಡಲು ನಿರಾಕರಿಸುತ್ತಿರುವುದು ಗಮನಿಸಲಾಯಿತು. ಸುಮಾರು 10 ಗಂಟೆಗಳ ಕಾಲ ಅನೇಕ suckling attempts ವಿಫಲವಾದ ಬಳಿಕ, ತಾಯಿ irritation ಮತ್ತು aggression ತೋರಿದ್ದರಿಂದ hand-rearing ಅಗತ್ಯವೆಂದು ನಿರ್ಧರಿಸಲಾಯಿತು. Nandankanan Zoological Parkನ ಅಧಿಕೃತ annual reportನಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ತಾಯಿ ಸುಮಾರು 11 ಗಂಟೆಗಳ ಕಾಲ ಮರಿಗೆ ಹಾಲುಣಿಸದ ಸಂದರ್ಭವನ್ನು “immediate intervention” ಅಗತ್ಯವಾದ ಸ್ಥಿತಿಯಾಗಿ ಪರಿಗಣಿಸಿ ಮರಿಯನ್ನು rescue ಮಾಡಿ dedicated roomನಲ್ಲಿ bottle feeding ಹಾಗೂ round-the-clock monitoring ಮೂಲಕ hand-rearing ಮಾಡಲಾಗಿದೆ. ಹೀಗೆ ಹಲವು ಉದಾಹರಣೆಗಳಿವೆಯಾದರೂ ಶಿವಮೊಗ್ಗ ಲಯನ್ ಸಫಾರಿಯಲ್ಲಿ ಈ ನಿಟ್ಟಿನಲ್ಲಿ ತುರ್ತು ನಿರ್ಧಾರ ಏಕೆ ಕೈಗೊಳ್ಳಲಿಲ್ಲ ಎಂಬುದೆ ಅಚ್ಚರಿ.

ಆ 24 ಗಂಟೆಗಳಲ್ಲಿ ಏನು ನಡೆಯಿತು?

24 ಗಂಟೆಯೊಳಗೆ ಮರಿಗಳು ಮೃತಪಟ್ಟಿವೆ ಅನ್ನುವದಾಯ್ತು ಎಂತಾದರೆ, ಆ 24 ಗಂಟೆಗಳಲ್ಲಿ ಏನು ನಡೆಯಿತು? ಯಾವ ಮರಿ ಎಷ್ಟು ಹೊತ್ತು ಜೀವಂತವಾಗಿತ್ತು? ಯಾವ ಮರಿ ಹಾಲು ಹೀರಲು ಪ್ರಯತ್ನಿಸಿತು? ತಾಯಿ ಯಾವ ಮರಿಯನ್ನು ಸ್ವಚ್ಛಗೊಳಿಸಿತು? ಯಾವುದಕ್ಕೂ ಹಾಲು ಸಿಗಲಿಲ್ಲವೇ? ಮೊದಲ ಮರಿ ಯಾವ ಸಮಯಕ್ಕೆ ದುರ್ಬಲವಾಯಿತು? ಮೊದಲ ಮರಿ ಸತ್ತ ನಂತರ ಉಳಿದ ಮರಿಗಳಿಗಾಗಿ intervention ಮಾಡಲಾಗಿತ್ತೇ? ಇದಕ್ಕೆ keeper log ಮತ್ತು veterinary monitoring record ಉತ್ತರಿಸಬೇಕು.

ಇದಕ್ಕೆಲ್ಲಾ ಉತ್ತರದಾಯಿತ್ವ ಯಾರದ್ದು?

ನಿರ್ದೇಶಕರು ನೀಡಿರುವ ಹಿಂದಿನ ವಿವರಣೆಯಲ್ಲಿ ತಾಯಿ ಸಿಂಹ pacing ಮಾಡುವಾಗ ಮರಿಗಳನ್ನು ಕೆಳಗೆ ಬಿಟ್ಟಿರುವುದು ಅಥವಾ ಅವುಗಳ ಮೇಲೆ ಕಾಲಿಟ್ಟಿರುವ ಪರಿಣಾಮ internal haemorrhage ಉಂಟಾಗಿರಬಹುದು ಎಂದು ಹೇಳಲಾಗಿದೆ. ಇದರ ಜೊತೆಗೆ ಮರಿಗಳಿಗೆ ಸರಿಯಾಗಿ ಹಾಲು ಸಿಗದೇ systemic complications ಉಂಟಾಗಿದ್ದವು ಎನ್ನಲಾಗಿದೆ. ಇದು ನಿಜವಾಗಿದ್ದರೆ ಮತ್ತೊಂದು ಅತ್ಯಂತ ಮುಖ್ಯ ಪ್ರಶ್ನೆ ಎದುರಾಗುತ್ತದೆ. ತಾಯಿ ಕೇಜ್​ನಲ್ಲಿಯಲ್ಲಿ ಸುತ್ತಾಡುತ್ತಿದ್ದು ಮರಿಗಳಿಗೆ physical trauma ಅಪಾಯವಿದೆ ಎಂಬುದು ಯಾವ ಸಮಯಕ್ಕೆ ಗಮನಕ್ಕೆ ಬಂತು? ಮೊದಲ ಮರಿ ತಾಯಿಯಿಂದ ಗಾಯಗೊಂಡಿದ್ದರೆ ಉಳಿದ ಮರಿಗಳನ್ನು ಅದೇ enclosureನಲ್ಲಿ ಯಾಕೆ ಮುಂದುವರಿಸಲಾಯಿತು? CCTVಯಲ್ಲಿ pacing ಅಥವಾ ಮರಿಗಳ ಮೇಲೆ ಕಾಲಿಡುವ ಘಟನೆ ದಾಖಲಾಗಿದೆಯೇ ಎಂಬೆಲ್ಲಾ ಪ್ರಶ್ನೆಗಳು ಉದ್ಭವಾಗುತ್ತದೆ ಮೇಲಾಗಿ ಒಂದು ಮರಿ ಅಪಾಯಕ್ಕೆ ಸಿಲುಕಿದ್ದಾಗ ಉಳಿದ 3 ಮರಿಗಳ ಬಗ್ಗೆ ಯಾರು ನಿರ್ಧಾರ ತೆಗೆದುಕೊಂಡರು ಎಂಬುದು ಹೊಣೆಗಾರಿಕೆಯ ಪ್ರಶ್ನೆಯಾಗುತ್ತದೆ. ಮೊದಲ ಮರಿಗೆ trauma ಆಗಿರುವುದು ಗೊತ್ತಾದ ಕ್ಷಣದಲ್ಲಿ ಉಳಿದ ಮರಿಗಳನ್ನು ತಾಯಿಯ ಬಳಿಯೇ ಬಿಡುವುದೇ ಸೂಕ್ತ ಎಂದು ನಿರ್ಧರಿಸಲಾಯಿತೇ! ಇದಕ್ಕೆಲ್ಲಾ ಉತ್ತರದಾಯಿತ್ವ ಯಾರದ್ದು? ಪ್ರಶ್ನೆಗೆ ಉತ್ತರಿಸುವುದು, ರಜೆ ಹಾಕಿ ಕುಳಿತವರದ್ದಲ್ವಾ?

ಗರ್ಭಿಣಿ ಎಂಬುದೇ ವೈದ್ಯರಿಗೆ ಗೊತ್ತಿರಲಿಲ್ಲ

ಈ ಪ್ರಕರಣದಲ್ಲಿ ನಿರ್ದೇಶಕರು ನೀಡಿರುವ ಅತ್ಯಂತ ಮಹತ್ವದ ವಿವರಣೆ ಎಂದರೆ ಸಾರಾ ಗರ್ಭಿಣಿಯಾಗಿರುವುದೇ ವೈದ್ಯರಿಗೆ ತಿಳಿದಿರಲಿಲ್ಲ ಎಂಬುದು. ಮೊದಲ ಬಾರಿ mating ಆದ ಬಳಿಕ ಸುಮಾರು 3 ತಿಂಗಳ ಗರ್ಭಾವಸ್ಥೆ ಇರಬಹುದು ಎಂದು ಪರಿಗಣಿಸಲಾಗಿತ್ತು. ಆದರೆ ಗರ್ಭಧಾರಣೆಯ ಅವಧಿಯ ಮಧ್ಯದಲ್ಲಿಯೇ ಸಾರಾ ಮತ್ತೆ ಗಂಡು ಸಿಂಹದೊಂದಿಗೆ ಸೇರಿತ್ತು ಎಂದು ನಿರ್ದೇಶಕರು ಹೇಳಿದ್ದಾರೆ. ನಂತರ ಸಾರಾದ ದೇಹದಲ್ಲಿ ಗರ್ಭಧಾರಣೆಗೆ ಸಂಬಂಧಿಸಿದ ನಿರೀಕ್ಷಿತ ಬದಲಾವಣೆಗಳು ಕಾಣಿಸದ ಕಾರಣ ವೈದ್ಯರು ಅದನ್ನು ಸೂಡೋ ಪ್ರೆಗ್ನೆನ್ಸಿ ಆಗಿರಬಹುದು ಎಂದು ಭಾವಿಸಿದ್ದರು. ಹೀಗಾಗಿ ಸಾರಾ ನಿಜವಾಗಿಯೂ ಗರ್ಭಿಣಿಯಾಗಿರುವ ವಿಷಯವೇ ವೈದ್ಯರಿಗೆ ತಿಳಿದಿರಲಿಲ್ಲ ಎಂಬುದು ಅವರ ವಿವರಣೆ.

‘ಸೂಡೋ ಪ್ರೆಗ್ನೆನ್ಸಿ’ ಎಂದರೆ ಏನು?

ತಜ್ಞ ವೈದ್ಯರ ಅಭಿಪ್ರಾಯದ ಪ್ರಕಾರ, ನಿಜವಾದ ಸೂಡೋ ಪ್ರೆಗ್ನೆನ್ಸಿಯಲ್ಲಿ ಪ್ರಾಣಿಯು ಗರ್ಭಿಣಿಯಾಗಿರುವಂತೆ ಭಾವಿಸುತ್ತದೆ ಅದರ ದೈಹಿಕ ಅಥವಾ ವರ್ತನೆಗಳ ಲಕ್ಷಣ ಬದಲಾಗಬಹುದು, ಆದರೆ ಗರ್ಭದಲ್ಲಿ ನಿಜವಾದ ಮರಿಗಳು ಇರುವುದಿಲ್ಲ.ಮೇಲಾಗಿ ಸೂಡೋ ಪ್ರೆಗ್ನೆನ್ಸಿ ಅವಧಿ 49-58.ಸಿಂಹಗಳ ರಿಯಲ್ ಪ್ರೆಗ್ನೆನ್ಸಿಯ ಅವಧಿ 107-110 ಇರಬಹುದು ಎಂದು lion reproductive physiology ಅಧ್ಯಯನ ತಿಳಿಸುತ್ತದೆ.ಆದ್ದರಿಂದ ಒಂದು ಮುಖ್ಯ ಸಂಗತಿ ಸ್ಪಷ್ಟ: ಸೆಪ್ಟೆಂಬರ್ 16ರಂದು ಸಾರಾ ನಿಜವಾಗಿಯೂ 4 ಮರಿಗಳಿಗೆ ಜನ್ಮ ನೀಡಿದ್ದಾಳೆ ಎಂದಾದರೆ, ಆ ಪ್ರಸವಕ್ಕೆ ಕಾರಣವಾದ ಗರ್ಭಧಾರಣೆ pseudopregnancy ಆಗಿರಲಿಲ್ಲ! ತಾಯಿ ಸಿಂಹದಲ್ಲಿ ಆದಂತಹ ಬದಲಾವಣೆಗಳು, ಅದನ್​ನ ನೋಡಿಕೊಳ್ಳುವ ಪ್​ರತಿಯೊಬ್ಬರ ಗಮನಕ್ಕೆ ಬಂದೇ ಬಂದಿರುತ್ತದೆ ಎಂಬುದು ಮುಖ್ಯ ವಿಚಾರ.

ಏನೂ ಸಹ ಸಿದ್ದತೆ ಮಾಡಿಕೊಂಡಿರಲಿಲ್ಲ

ಇನ್ನೂ Pseudopregnancy ಎಂದು ಅನುಮಾನವಿದ್ದಾಗ, ನಿಜವಾದ pregnancyಯನ್ನು rule out ಮಾಡಲು ಯಾವ ಪರೀಕ್ಷೆ ಮಾಡಿದ್ದರು! ಗರ್ಭಧಾರಣೆ ಖಚಿತವಿಲ್ಲದ ಪರಿಸ್ಥಿತಿಯಲ್ಲಿ ಸಂಭವಿಸಬಹುದಾದ deliveryಗೆ neonatal emergency plan ಏಕೆ ಸಿದ್ಧವಾಗಿರಲಿಲ್ಲ?ಸಿದ್ದವಾಗಿದ್ದರೇ ಗೊತ್ತೆ ಇರಲಿಲ್ಲ ಎನ್ನುವ ಪ್ರಶ್ನೆಯೇ ಉದ್ಭವಾಗದು. ಇನ್ನೂ ತಜ್ಞರ ಪ್ರಕಾರ, ಸಾರಾ ನಿಜವಾಗಿಯೂ ಗರ್ಭಿಣಿಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ultrasound ಮಾಡಲಾಗಿತ್ತೇ? Hormonal examination ನಡೆಸಲಾಗಿತ್ತೇ? Scan ಮಾಡಲಾಗಿತ್ತೇ? Pregnancy diagnosis ಕುರಿತು veterinary record ಇದೆಯೇ? ಇದ್ದರೇ ಎಲ್ಲಿದೆ?Pregnancy ಗೊತ್ತಿರಲಿಲ್ಲ ಎಂದಾದರೆ ಮತ್ತೊಂದು ಪ್ರಶ್ನೆ , ಸಾರಾ prenatal monitoring ಯಾವ ಮಟ್ಟದಲ್ಲಿತ್ತು ? ಇಲ್ಲಿ ಸಾರಾಳ Behaviour chart ಮಾನಿಟರ್ ಮಾಡಿ ಆಕೆ ಗರ್ಭಿಣಿ ಎಂಬುದು ಮೊದಲೇ ತಿಳಿದಿದ್ದರೆ ಪ್ರಸವಕ್ಕೆ ಬೇಕಾದ ಪ್ರತ್ಯೇಕ ಜಾಗ, neonatal monitoring, milk substitute, incubator ಅಥವಾ hand-rearingಗೆ ಬೇಕಾದ ಸಿಬ್ಬಂದಿ ಮುಂಚಿತವಾಗಿ ಸಿದ್ಧಪಡಿಸಬಹುದಾಗಿತ್ತು! ಆದರೆ ಸಾರಾ ಮಕ್ಕಳ ವಿಚಾರದಲ್ಲಿ ಏನೂ ಸಹ ಸಿದ್ದತೆ ಮಾಡಿಕೊಂಡಿರಲಿಲ್ಲ ಎನ್ನುತ್ತದೆ ಲಯನ್ ಸಫಾರಿಯ ಅಂತರಾಳ.

ಇದಷ್ಟೆ ಅಲ್ಲದೆ ಯಾವ ಸಮಯಕ್ಕೆ? ಏನು diagnosis ಮಾಡಿದರು? Treatment ನೀಡಲಾಯಿತೇ? Assisted nursing ಪ್ರಯತ್ನಿಸಲಾಯಿತೇ? Milk replacer ಸಿದ್ಧವಾಗಿತ್ತೇ? Incubator ಅಥವಾ warmer ಇತ್ತೇ? Hand-rearing ಕುರಿತು DFO/Director/Veterinary Officer ನಡುವೆ ಚರ್ಚೆ ನಡೆದಿತ್ತೇ? ಈ ಎಲ್ಲದರ ದಾಖಲೆಯೇ ಸಾರಾ ಮರಿಗಳ ಸಾವಿನ ಸತ್ಯವನ್ನ ಹೊರಗಿಡಬಲ್ಲದು!

Den box ಎಲ್ಲಿದೆ?

Association of Zoos and Aquariums‌ನ ಅಧಿಕೃತ Lion (Panthera leo) Care Manual ಸಿಂಹಗಳ ಆರೈಕೆಗೆ ಮಾನ್ಯ ತಜ್ಞ ಮಾರ್ಗದರ್ಶಿ.ಅದರ reproduction ವಿಭಾಗದಲ್ಲಿ ಹೆರಿಗೆ ಮತ್ತು ಮರಿಗಳಿಗಾಗಿ den box ಅಂದರೆ ಸಿಂಹಗಳಂತ ಪ್ರಾಣಿಗಳಿಗಾಗಿ ಗುಹೆ ರೂಪದ ರಚನೆ ಕುರಿತು ಬಹಳ ನಿರ್ದಿಷ್ಟ ಸೂಚನೆಗಳಿವೆ.ಏಕೆಂದರೆ ಈ ಮಾದರಿಯ ಪ್ರಾಣಿಗಳು ಗುಹೆಗಳಲ್ಲಿಯೇ ಸಾಮಾನ್ಯವಾಗಿ ತಮ್ಮ ಮರಿಗಳಿಗೆ ಜನ್ಮ ನೀಡುತ್ತವೆ. ಹಾಗಾಗಿ ಮೃಗಾಲಯಗಳಲ್ಲಿಯು ಗುಹೆಯನ್ನ ಸಾಮಾನ್ಯ ಸಿಬ್ಬಂದಿ ಸಂಚಾರದಿಂದ ದೂರ, ಕತ್ತಲು ಮತ್ತು ಶಾಂತವಾಗಿರಬಹುದಾದ ಸ್ಥಳದಲ್ಲಿ ರಚಿಸಬೇಕು. ಹೆಣ್ಣು ಸಿಂಹ ಒಳಗೆ ಹೋಗಿ, ತಿರುಗಿ, ಆರಾಮವಾಗಿ ಮಲಗುವಷ್ಟು ದೊಡ್ಡದಿರಬೇಕು. ಪ್ರವೇಶ ದ್ವಾರವನ್ನು ಒಂದು ಬದಿಯಲ್ಲಿ ಇಟ್ಟು, ಸಿಂಹಿಣಿ ಹೊರಗಿನ ದೃಷ್ಟಿಯಿಂದ ಮರೆಯಾಗುವಂತೆ privacy ಒದಗಿಸಬೇಕು. ನವಜಾತ ಮರಿಗಳು ಹೊರಗೆ ಉರುಳಿ ತಣ್ಣನೆಯ ನೆಲಕ್ಕೆ ಬೀಳದಂತೆ entranceಗೆ lip ಇರಬೇಕೆಂದೂ ಹೇಳುತ್ತದೆ. Front mesh ಅನ್ನು tarp ಅಥವಾ plywood ಮೂಲಕ ಮುಚ್ಚಿ privacy ಹೆಚ್ಚಿಸುವ ವ್ಯವಸ್ಥೆಯನ್ನೂ ಸೂಚಿಸಲಾಗಿದೆ. Den boxನಲ್ಲಿ ದೂರದಿಂದ ಗಮನಿಸಲು video camera ಇರಬೇಕೆಂದೂ manual ಹೇಳುತ್ತದೆ. ಆದರೆ ಲಯನ್​ ಸಫಾರಿಯಲ್ಲಿ ಸಾರಾಕ್ಕೆ ಗುಹೆಯಂತಹ ಯಾವೊಂದು ಬಾಕ್ಸನ್ನ ಸಹ ವ್ಯವಸ್ಥೆ ಮಾಡಲಾಗಿಲ್ಲ! ಇದು ದೊಡ್ಡ ನೆಗಿಲನ್ಜಿ ಅಲ್ಲದೇ ಮತ್ತೆನು?

ದೊಡ್ಡ ಬೆಕ್ಕುಗಳ captive-management guidelineನಲ್ಲಿ ಮರಿಗಳನ್ನು ಹೊಂದಲಿರುವ ತಾಯಿಯನ್ನು ಪ್ರಸವಕ್ಕೂ ಮುನ್ನ cubbing den ಅಥವಾ ಇತರ ಪ್ರಾಣಿಗಳಿಂದ ದೂರವಾದ ಪ್ರತ್ಯೇಕ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಹೇಳಲಾಗಿದೆ. ಮರಿಗಳು ಕೆಲವು ತಿಂಗಳು ಬೆಳೆದ ಬಳಿಕವಷ್ಟೇ ಇತರ adult animals ಜೊತೆ ಮತ್ತೆ ಸೇರಿಸಬೇಕು ಎಂದು ಹೇಳಲಾಗಿದೆ.ಆದರೆ ಸಾರಾ ವಿಷಯದಲ್ಲಿ ಯಾವ ತೀರ್ಮಾನವನ್ನೂ ಸಮರ್ಪಕವಾಗಿ ತೆಗೆದುಕೊಂಡಿಲ್ಲ.

ಅಲ್ಟ್ರಾಸೊನೋಗ್ರಫಿ ಸ್ಕ್ಯಾನಿಂಗ್ ನಡೆಸುವ ಅವಕಾಶವೂ ಇತ್ತು

ಇನ್ನೂ ಕೆಲವೊಂದು ಸಾಧ್ಯತೆಗಳನ್ನ ಉಲ್ಲೇಖಿಸುವುದಾದರೆ, ಸೂಡೋ ಪ್ರೆಗ್ನೆನ್ಸಿ ಎಂಬ ಅನುಮಾನ ಬಂದಿದ್ದರೆ ಕನಿಷ್ಠ ರಕ್ತ ಪರೀಕ್ಷೆ ಅಥವಾ ಹಾರ್ಮೋನ್ ಪರೀಕ್ಷೆಯನ್ನಾದರೂ ನಡೆಸಬೇಕಿತ್ತು. ಆ ಪರೀಕ್ಷೆಗಳ ಮೂಲಕ ತಾಯಿ ಸಿಂಹದ ದೇಹದಲ್ಲಿನ ಗರ್ಭಧಾರಣೆಗೆ ಸಂಬಂಧಿಸಿದ ಬದಲಾವಣೆಗಳನ್ನು ಪರಿಶೀಲಿಸುವ ಅವಕಾಶ ಇತ್ತು.ಇಂತಹ ಯಾವುದೇ ಪರೀಕ್ಷೆ ನಡೆಸಲಾಗಿತ್ತೇ ಎಂಬುದನ್ನು ಅಧಿಕಾರಿಗಳು ದಾಖಲೆಗಳೊಂದಿಗೆ ಸ್ಪಷ್ಟಪಡಿಸಬೇಕು.ಪಶುವೈದ್ಯಕೀಯ ಕಾಲೇಜು ಅಥವಾ ಪಶುಸಂಗೋಪನಾ ಇಲಾಖೆಯ ಪಾಲಿಕ್ಲಿನಿಕ್‌ನಿಂದ ತಜ್ಞರನ್ನು ಕರೆಸಿ ಅಲ್ಟ್ರಾಸೊನೋಗ್ರಫಿ ಸ್ಕ್ಯಾನಿಂಗ್ ನಡೆಸುವ ಅವಕಾಶವೂ ಇತ್ತು.ಲ್ಯಾಟರಲ್ ಫ್ಲೋ ಅಸ್ಸೇ ಕಿಟ್ ಬಳಸಿ ಸಿಂಹದ ಮೂತ್ರದ ಹನಿಯನ್ನು ಪರೀಕ್ಷೆಗೆ ಒಳಪಡಿಸುವ ಮೂಲಕ ಗರ್ಭಧಾರಣೆ ಪಾಸಿಟಿವ್ ಇದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದಿತ್ತು. ಇಷ್ಟೆಲ್ಲಾ ಸಾಧ್ಯತೆಗಳು ಇದ್ದಾಗಲೂ ತಾಯಿ ಸಿಂಹ ಗರ್ಭಿಣಿಯಾಗಿರುವುದೇ ಗೊತ್ತಿರಲಿಲ್ಲ ಅಂತಾ ಹೇಳಿ ಕೈತೊಳೆದುಕೊಳ್ಳಲು ಖಂಡಿತ ಸಾಧ್ಯವಿಲ್ಲ

ಕನಿಷ್ಠ 24 ಗಂಟೆಗಳ ಸಿಸಿಟಿವಿ ದೃಶ್ಯಾವಳಿ ಸುರಕ್ಷಿತವಾಗಿದೆಯೇ?

ಉಳಿದಂತೆ ಟೆಕ್ನಿಕಲ್ ಅಂದರೆ, ಘಟನೆಯ ದಿನ ಮತ್ತು ನಂತರದ ಕನಿಷ್ಠ 24 ಗಂಟೆಗಳ ಸಿಸಿಟಿವಿ ದೃಶ್ಯಾವಳಿ ಸುರಕ್ಷಿತವಾಗಿದೆಯೇ? ಅದನ್ನು ಮೃಗಾಲಯದ ಅಧಿಕಾರಿಗಳು ಅಥವಾ ತನಿಖಾಧಿಕಾರಿಗಳು ಪರಿಶೀಲಿಸಿದ್ದಾರೆಯೇ? ಅದರ observation report ಸಿದ್ಧಪಡಿಸಲಾಗಿದೆಯೇ? ಎಂಬ ಪ್ರಶ್ನೆಗೆ ಉತ್ತರಸಿಗಬೇಕಿದೆ. ಮರಿಗಳು 24 ಗಂಟೆಯಲ್ಲಿಯೇ ಸತ್ತಿದ್ದರೇ, ಇಲ್ಲಿ ಸ್ಪಷ್ಟವಾಗಲಿದೆ. ಇದಿಷ್ಟು ಕ್ಲಾಸ್ 1 ಸ್ಟೋರಿ,ಲಯನ್​ ಸಫಾರಿಯಲ್ಲಿ ಸಾರಾ ಮರಿಗಳಷ್ಟೆ ಅಲ್ಲದೆ! ಕರಡಿ ಮರಿಗಳು ಸಹ ಸತ್ತಿವೆ! ಕಾಡು ನಾಯಿ ಮರಿ ಸಾವನ್ನಪ್ಪಿವೆ. ಇದಕ್ಕೆ ತಕ್ಕ ಫೋಟೋ ಸಾಕ್ಷ್ಯಗಳು ಮಲೆನಾಡು ಟುಡೆಯ ಬಳಿಯಲ್ಲಿದೆ!ಈ ಬಗ್ಗೆ ವಿಚಾರಿಸಿದಾಗ, ಆತಂಕಕಾರಿ ಅಂಶಗಳು ಬೆಳಕಿಗೆ ಬರುತ್ತಿದೆ.ಹಲವು ವರ್ಷಗಳ ಕಾಲ ಪಾರದರ್ಶಕವಾಗಿದ್ದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಏನೋ ನಡೆಯುತ್ತಿದೆ! ವನ್ಯಜೀವಿಗಳು ಹುಟ್ಟು ಸಾವಿನ ಮಾಹಿತಿಯೇ ಗೌಫ್ಯವಾಗಿ ಇಡಲಾಗುತ್ತಿದೆ. ಸಂಬಂಧಪಟ್ಟ ಅಥಾರಿಟಿಗೂ ಈ ಬಗ್ಗೆ ಮಾಹಿತಿ ಹೋಗುತ್ತಿಲ್ಲ! ವೈದ್ಯರು ಹೇಳಬೇಕಾಗಿದ್ದ ಮಾಹಿತಿಗೆ ಆಡಳಿತ ವಿಭಾಗದವರಿಂದ ಉತ್ತರ ಬರುತ್ತದೆ! ಪ್​ರಶ್ನೆಗಳು ಹೆಚ್ಚಾದೆಂತೆಲ್ಲಾ ಉತ್ತರಗಳೂ ಸಹ ನಿಗೂಢವಾಗುತ್ತಿದೆ. ಡಾ.ಸಮೀಕ್ಷ ರೆಡ್ಡಿ ವಿಚಾರಿಂದ ಹಿಡಿದು ಸಾರಾ ಮರಿಗಳ ಸಾವಿನ ಪ್ರಕರಣದವರೆಗೂ, ನಾಗರಿಕ ಜಗತ್ತಿಗೆ ತಿಳಿಸದ ಸಾಕಷ್ಟು ವಿಚಾರಗಳಿವೆ..ಮುಂದಿನ ಕ್ಲಾಸ್ಟ್ 2 ಸ್ಟೋರಿಯಲ್ಲಿ ಮತ್ತಷ್ಟು ರಹಸ್ಯಸಂಗತಿ ಗ್ಯಾರಂಟಿ!

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor