ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಅಡ್ಡಗಟ್ಟಿದ ವ್ಯಕ್ತಿಯೊಬ್ಬ, 4 ದಿನದಲ್ಲಿ ನಿನ್ನ ಹಾಗೂ ನಿನ್ನ ಗಂಡನನ್ನು ಮುಗಿಸಲು ಸುಪಾರಿ ಕೊಟ್ಟಿದ್ದೇನೆ ಎಂದು ಬೆದರಿಸಿರುವ ಘಟನೆ ಶಿವಮೊಗ್ಗದ ಪ್ರದೇಶವೊಂದರಲ್ಲಿ ನಡೆದಿದೆ.
ದೂರುದಾರ ಮಹಿಳೆ ಕೆಲಸದ ಹಿನ್ನೆಲೆ ಶಿವಮೊಗ್ಗದ ಪ್ರದೇಶವೊಂದರ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಆಕೆಯನ್ನು ಪರಿಚಿತ ವ್ಯಕ್ತಿಯೊಬ್ಬ ಅಡ್ಡಗಟ್ಟಿದ್ದಾನೆ. ಅಷ್ಟೇ ಅಲ್ಲದೆ, ನಾನು 4 ದಿನದಲ್ಲಿ ನಿನ್ನ ಹಾಗೂ ನಿನ್ನ ಗಂಡನನ್ನು ಮುಗಿಸಲು ಸುಪಾರಿ ಕೊಟ್ಟಿದ್ದೇನೆ. ಈ ವಾರದಲ್ಲಿ ನಿಮ್ಮಿಬ್ಬರನ್ನು ಕೊಲೆ ಮಾಡಿಸುತ್ತೇನೆ. ಈಗಲೇ ಕಾರು ಹತ್ತು, ಇಲ್ಲದಿದ್ದರೆ ಈಗಲೇ ಹೊಡೆದು ಸಾಯಿಸುತ್ತೇನೆ ಎಂದು ಹೇಳುತ್ತಾ ಹಿಂಬಾಲಿಸಿಕೊಂಡು ಬಂದಿದ್ದಾನೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಮಹಿಳೆ ಭಯಗೊಂಡು ಮಹಿಳಾ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಇದನ್ನು ನೋಡಿದ ಆತ ಭಯಗೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಘಟನೆ ಸಂಭವಿಸಿದ ಕೆಲ ದಿನಗಳ ನಂತರವೂ ಸಹ ಎರಡು ಬಾರಿ ಇದೇ ರೀತಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ, ನನಗೆ ಆ ವ್ಯಕ್ತಿಯಿಂದ ಜೀವ ಭಯವಿದೆ, ದಯವಿಟ್ಟು ನನಗೆ ರಕ್ಷಣೆ ನೀಡಿ ಎಂದು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
