ಶಿಕಾರಿಪುರ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶಿಕಾರಿಪುರದ ಗಾರ್ಮೆಂಟ್ಸ್ ಒಂದರ ನೌಕರರು ರಾಜ್ಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಿದ ಘಟನೆ ಇಂದು ನಡೆದಿದೆ.
ಶಿಕಾರಿಪುರದ ಗಾರ್ಮೆಂಟ್ಸ್ ಒಂದರಲ್ಲಿ ಕಳೆದ 4 ವರ್ಷಗಳಿಂದ PF ಪಾವತಿಸುತ್ತಿಲ್ಲ ಎಂದು ಆರೋಪಿಸಿ ಕಾರ್ಮಿಕರು ಇಂದು ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಶಿವಮೊಗ್ಗ-ಹಾನಗಲ್ ರಾಜ್ಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದ ಕಾರ್ಮಿಕರು, ತಮಗೆ ಕಳೆದ ನಾಲ್ಕು ವರ್ಷಗಳಿಂದ ಪಿಎಫ್ ಹಣ ಸಿಕ್ಕಿಲ್ಲ. ಅಷ್ಟೇ ಅಲ್ಲದೆ, ಕೆಲಸ ಬಿಟ್ಟ ನಂತರ ಪಿಎಫ್ ಹಣ ಪಡೆಯಲು ಮೂರು ವರ್ಷಗಳ ಕಾಲ ಕಾಯಬೇಕು ಎಂದು ಆಡಳಿತ ಮಂಡಳಿ ಹೇಳುತ್ತಿರುವುದಕ್ಕೆಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಬಾಕಿ ಇರುವ ಪಿಎಫ್ ಹಣ ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅವರು ಆಗ್ರಹಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಮಹಿಳಾ ನೌಕರರೊಬ್ಬರು, ಇತ್ತೀಚೆಗೆ ಪಿಎಫ್ ಸಮಸ್ಯೆ ಹೆಚ್ಚಾಗುತ್ತಿದೆ. ಬೇರೆ ಕಡೆ ಕೆಲಸಕ್ಕೆ ರಾಜೀನಾಮೆ ನೀಡಿದ ಮೂರು ತಿಂಗಳೊಳಗೆ ಪಿಎಫ್ ಹಣವನ್ನು ನೀಡುತ್ತಾರೆ. ಆದರೆ ಇಲ್ಲಿ ನಮ್ಮ ಪಿಎಫ್ ಹಣವನ್ನು ನಮಗೆ ಕೊಡಲು ಕಂಪನಿಯಿಂದ ಬರಬೇಕಾದ ಹಣಕ್ಕೆ 1 ವರ್ಷ ಮತ್ತು ಸರ್ಕಾರದ ಕಡೆಯಿಂದ ಬರುವ ಹಣಕ್ಕಾಗಿ 3 ವರ್ಷ ಕಾಯಬೇಕು ಎಂದು ಹೇಳುತ್ತಿದ್ದಾರೆ. ಮದುವೆಯಂತಹ ಕಷ್ಟದ ಸಂದರ್ಭದಲ್ಲಿ ಈ ಹಣ ಸಹಾಯವಾಗುತ್ತದೆ ಎಂದು ಎಷ್ಟೋ ಹೆಣ್ಣುಮಕ್ಕಳು ಆಸೆ ಇಟ್ಟುಕೊಂಡಿರುತ್ತಾರೆ. ಆದರೆ ಇವರು ಕೇಂದ್ರ ಸರ್ಕಾರದ ಕಾನೂನು, ಆ ಸರ್ಕಾರದ ಕಾನೂನು ಎಂದು ಇಲ್ಲಸಲ್ಲದ ನೆಪಗಳನ್ನು ಹೇಳುತ್ತಿದ್ದಾರೆ. ನೀವು ಕೂಡಲೇ ಹಿಂದಿನ ಪೂರ್ಣ ಪ್ರಮಾಣದ ಪಿಎಫ್ ಹಣವನ್ನು ನೀಡಬೇಕು. ಮುಂದಿನ ದಿನಗಳಲ್ಲಿ ನಮ್ಮ ಸಂಬಳದಿಂದ ಪಿಎಫ್ ಹಣವನ್ನು ಕಡಿತಗೊಳಿಸುವುದು ಬೇಡ. ಬದಲಾಗಿ, ಹಿಂದಿನ ಪಿಎಫ್ ಹಣವನ್ನು ಸಂಪೂರ್ಣವಾಗಿ ನಮಗೆ ನೀಡಿ,ಎಂದು ಒತ್ತಾಯಿಸಿದರು.
